‘ಅರ್ಧ ಹೆಲ್ಮೆಟ್‌ ನಿಷೇಧಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’

7

‘ಅರ್ಧ ಹೆಲ್ಮೆಟ್‌ ನಿಷೇಧಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’

Published:
Updated:

ಬೆಂಗಳೂರು: ‘ನಗರದಲ್ಲಿ ಫೆ.1ರಿಂದ ಅರ್ಧ ಹೆಲ್ಮೆಟ್‌ ನಿಷೇಧದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿದುಕೊಂಡಿದ್ದೇನೆ. ಆದರೆ, ಈ ರೀತಿ ಅರ್ಧ ಹೆಲ್ಮೆಟ್‌ ನಿಷೇಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಐಎಸ್‌ಐ, ಬಿಎಸ್ಐ ಮುದ್ರೆ ಇರುವ ಹೆಲ್ಮೆಟ್‌ಗಳನ್ನು ಮಾತ್ರ ಸವಾರರು ಧರಿಸಬೇಕೆಂದು ಕಾನೂನು ಹೇಳುತ್ತದೆ. ಅರ್ಧ ಅಥವಾ ಪೂರ್ತಿ ಹೆಲ್ಮೆಟ್‌ ಧರಿಸಬೇಕೆಂದಲ್ಲ. ಸಂಚಾರ ಪೊಲೀಸರಂತೆ, ಅರ್ಧ ಹೆಲ್ಮೆಟ್‌ ನಿಷೇಧದ ಬಗ್ಗೆ ನಾವು ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ’ ಎಂದರು.

ಬೈಕ್‌ ಟ್ಯಾಕ್ಸಿಗೆ ಚಿಂತನೆ:

‘ಜೈಪುರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ಈಗಾಗಲೇ ಬೈಕ್‌ ಟ್ಯಾಕ್ಸಿಗಳು ಸಂಚರಿಸುತ್ತಿವೆ. ನಗರದಲ್ಲೂ ಅಂಥ ಟ್ಯಾಕ್ಸಿ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಅಧಿಕಾರಿಗಳ ಜತೆ ಸೋಮವಾರ ಚರ್ಚೆ ನಡೆಸಲಾಗಿದೆ’ ಎಂದರು.

₹1,813 ಕೋಟಿ ಸಂಗ್ರಹ:

‘ಸಾರಿಗೆ ಇಲಾಖೆಯ ಸೇವೆಗಳಿಗೆ ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು 2016ರ ಆಗಸ್ಟ್‌ನಲ್ಲಿ  ’ಇ–ಪೇಮೆಂಟ್’ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಇದುವರೆಗೂ ₹1,813 ಕೋಟಿ ಶುಲ್ಕ ಸಂಗ್ರಹವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘7,36,627 ವಾಹನಗಳ ಮಾಲೀಕರು ಪ್ರಯೋಜನ ಪಡೆದಿದ್ದಾರೆ. ಚಾಲಕರ ಪರವಾನಗಿ ಪತ್ರಗಳ ನವೀಕರಣಕ್ಕೆ ಮಾತ್ರ ಇದು ಸೀಮಿತವಾಗಿದೆ. ಪರ್ಮಿಟ್, ವಾಹನಗಳ ಅರ್ಹತಾ ಪತ್ರ ಸೇರಿದಂತೆ ಉಳಿದೆಲ್ಲ ಸೇವೆಗಳನ್ನೂ ಇದರ ವ್ಯಾಪ್ತಿಗೆ ತರಲಿದ್ದೇವೆ’ ಎಂದರು.

’digilocker‘: ಅಧಿಸೂಚನೆ ಶೀಘ್ರ

‘ಸಾರಿಗೆ ಇಲಾಖೆಯ ಸೇವೆಗಳನ್ನು ಪಡೆಯಲು ಸಾರ್ವಜನಿಕರು, ’digilocker‘ ಜಾಲತಾಣ ಹಾಗೂ ಆ್ಯಪ್‌ ಮೂಲಕ ದಾಖಲೆಗಳನ್ನು ಸಲ್ಲಿಸುವುದನ್ನು ಮಾನ್ಯ ಮಾಡಿ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು’ ಎಂದು ದಯಾನಂದ್‌ ತಿಳಿಸಿದರು.

‘ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಅಧಿಸೂಚನೆ ಮೂಲಕ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಿದ್ದೇವೆ’ ಎಂದರು.

‘ಎಲ್ಲ ಸೇವೆಗಳು ಈಗ ಆನ್‌ಲೈನ್‌ನಲ್ಲಿ ಲಭ್ಯವಿವೆ. ಆ ಬಗ್ಗೆ ಜನರು ತಿಳಿದುಕೊಳ್ಳಬೇಕು. ಆನ್‌ಲೈನ್‌ ಮೂಲಕವೇ ವ್ಯವಹರಿಸುವಂತಾಗಬೇಕು. ಅದು ಮಧ್ಯವರ್ತಿಗಳ ಹಾವಳಿ ತಡೆಯಲು ಸಹಾಯವಾಗಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry