ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಮೇಲೆ ಮತ್ತಷ್ಟು ಒತ್ತಡಕ್ಕೆ ಅಮೆರಿಕ, ರಷ್ಯಾ ನೆರವು

Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವನ್ನು ತಡೆಯಲು ವಿಫಲವಾಗಿರುವ ಪಾಕಿಸ್ತಾನದ ಮೇಲೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಒತ್ತಡ ಹೇರಲು ಭಾರತವು ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾ ಜತೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಯನ್ನು ತಡೆಯುವ ಉದ್ದೇಶದ ಅಂತರರಾಷ್ಟ್ರೀಯ ಸಂಘಟನೆ– ಹಣಕಾಸು ಕಾರ್ಯ ಪಡೆಯ (ಎಫ್‌ಎಟಿಎಫ್) ಸರ್ವ ಸದಸ್ಯರ ಸಭೆ ಫೆಬ್ರುವರಿಯಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿದೆ. ಭಯೋತ್ಪಾದನೆಗೆ ಹಣಕಾಸು ನೆರವನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಪಾಕಿಸ್ತಾನವನ್ನು ಎಫ್‌ಎಟಿಎಫ್‌ ವರದಿ ಕೇಳಲಿದೆ.

‘ಭಯೋತ್ಪಾದನೆಯನ್ನು ನಿಗ್ರಹಿಸುವ ಸಲುವಾಗಿ ದೇಶದ ಆಂತರಿಕ ವ್ಯವಸ್ಥೆಗಳನ್ನು ಬಲ ಪಡಿಸುವಂತೆ ಎಫ್‌ಎಟಿಎಫ್ 2015ರಲ್ಲೇ ಪಾಕಿಸ್ತಾನಕ್ಕೆ ಸೂಚನೆ ನೀಡಿತ್ತು. ಈ ಸಂಬಂಧ ಪಾಕಿಸ್ತಾನ ತೆಗೆದುಕೊಂಡಿರುವ ಎಲ್ಲಾ ಕ್ರಮಗಳನ್ನು ಎಫ್‌ಎಟಿಎಫ್‌ನ ಸಮಿತಿಯು ಪರಿಶೀಲಿಸಲಿದೆ. ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿದೆ ಮತ್ತು ಭಯೋತ್ಪಾದನಾ ನಿಗ್ರಹಕ್ಕೆ ಅದು ತೆಗೆದುಕೊಂಡಿರುವ ಕ್ರಮಗಳು ವಿಫಲವಾಗಿವೆ ಎಂದು ಪ್ರತಿಪಾದಿಸಲು ನಮಗೆ ಬೆಂಬಲ ನೀಡಲು ಅಮೆರಿಕ ಮತ್ತು ರಷ್ಯಾ ಒಪ್ಪಿಕೊಂಡಿವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಸದೀಯ ಸಮಿತಿಯೊಂದಕ್ಕೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದೆ.

ಈ ವಿಚಾರದಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂಬ ಕಾರಣವೊಡ್ಡಿ ಆ ದೇಶಕ್ಕೆ ನೀಡುತ್ತಿದ್ದ ರಕ್ಷಣಾ ನೆರವನ್ನು ಅಮೆರಿಕ ಕಳೆದ ವಾರವಷ್ಟೇ ನಿಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT