ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ್‌ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿ ಬಟ್ಟೆ ಬಿಚ್ಚಿಸಿ, ಕೆನ್ನೆಗೆ ಥಳಿಸಿದ ಶಿಕ್ಷಕಿ

ಎವರ್ ಶೈನ್ ಇಂಗ್ಲಿಷ್ ಶಾಲೆ ವಿರುದ್ಧ ಪ್ರತಿಭಟನೆ
Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೋಮ್‌ವರ್ಕ್‌ ಮಾಡಿಲ್ಲ ಎಂಬ ಕಾರಣಕ್ಕೆ ಶ್ರೀನಗರದ ‘ಎವರ್ ಶೈನ್‌’ ಇಂಗ್ಲಿಷ್‌ ಶಾಲೆಯ ಶಿಕ್ಷಕಿಯೊಬ್ಬರು 4ನೇ ತರಗತಿ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ ಮನಸೋ ಇಚ್ಛೆ ಥಳಿಸಿದ್ದಾರೆ.

ರಾಜು ಮತ್ತು ಚೈತ್ರ ದಂಪತಿಯ ಪುತ್ರ ಮಹೇಶ್ (10) ಕಾಳಿದಾಸ ವೃತ್ತದಲ್ಲಿರುವ ‘ಎವರ್ ಶೈನ್‌’ ಶಾಲೆಯಲ್ಲಿ ಓದುತ್ತಿದ್ದಾನೆ. ಅಲ್ಲಿನ ಶಿಕ್ಷಕಿ ಅನಿತಾ, ಸೋಮವಾರ ಮಧ್ಯಾಹ್ನ ಬಾಲಕನ ಕೆನ್ನೆಗೆ ಹೊಡೆದಿದ್ದರು. ಇದರಿಂದ ಬಾಸುಂಡೆ ಮೂಡಿ, ರಕ್ತ ಹೆಪ್ಪುಗಟ್ಟಿತ್ತು.

‘ಹುಷಾರಿಲ್ಲದ ಕಾರಣಕ್ಕೆ ಮೂರು ದಿನಗಳಿಂದ ಶಾಲೆಗೆ ಹೋಗಿರಲಿಲ್ಲ. ಹೋಮ್ ವರ್ಕ್ ಸಹ ಮಾಡಲು ಆಗಿರಲಿಲ್ಲ. ಮೇಡಮ್ ಹೋಮ್ ವರ್ಕ್ ತೋರಿಸುವಂತೆ ಕೇಳಿ, ಐದಾರು ಬಾರಿ ಕಪಾಳಕ್ಕೆ ಹೊಡೆದರು. ಬಳಿಕ ಇಬ್ಬರು ಸಹಪಾಠಿಗಳಿಗೆ ಹೇಳಿ ನನ್ನ ಬಟ್ಟೆ ಬಿಚ್ಚಿಸಿದರು’ ಎಂದು ವಿದ್ಯಾರ್ಥಿ ಮಹೇಶ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಂಡಿದ್ದಾನೆ.

ಶಿಕ್ಷಕಿಯ ವರ್ತನೆ ಖಂಡಿಸಿ ವಿದ್ಯಾರ್ಥಿಯ ಪೋಷಕರು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರೊಂದಿಗೆ ಶಾಲೆ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.

‘‌ಶಿಕ್ಷಕಿ ಮತ್ತು ಶಾಲೆ ವಿರುದ್ಧ ಈಗ ಮಕ್ಕಳ ಸಹಾಯವಾಣಿಗೆ ದೂರು ಕೊಟ್ಟಿದ್ದೇವೆ. ಶಾಲಾ ಆಡಳಿತ ಮಂಡಳಿ ಶಿಕ್ಷಕಿ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡುತ್ತೇವೆ. ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡುತ್ತೇವೆ’ ಎಂದು ವಿದ್ಯಾರ್ಥಿಯ ತಾಯಿ ಚೈತ್ರಾ ಎಚ್ಚರಿಕೆ ನೀಡಿದ್ದಾರೆ.

ಶಾಲೆ ಪ್ರಾಂಶುಪಾಲರಾದ ಸುಧಾ ಪ್ರಜ್ಞಾ, ‘ವಿದ್ಯಾರ್ಥಿ ಹೋಮ್ ವರ್ಕ್ ಮಾಡಿರಲಿಲ್ಲ. ಹೀಗಾಗಿ ಶಿಕ್ಷಕಿ ಅನಿತಾ ಹೊಡೆದಿದ್ದಾರೆ. ಆತ ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿದ್ದಾನೆ. ಹಲ್ಲೆ ನಡೆಸಿರುವ ಶಿಕ್ಷಕಿಯಿಂದ ವಿವರಣೆ ಪಡೆದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ವಿದ್ಯಾರ್ಥಿಯ ಪೋಷಕರ ಕ್ಷಮೆಯಾಚಿಸಲು ಶಿಕ್ಷಕಿಗೆ ಸೂಚಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಗೆ ದೂರು: ‘ಮಗು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅದನ್ನು ಗುರುತಿಸಿ, ಕಲಿಸಬೇಕಾದುದು ಶಾಲೆ ಜವಾಬ್ದಾರಿ. ಹಾಗೆಂದು ಮಗುವನ್ನು ಶಿಕ್ಷಿಸುವಂತಿಲ್ಲ. ಈ ಪ್ರಕರಣದಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗಿದೆ. ಇದನ್ನು ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಲಾಗುವುದು’ ಎಂದು ಮಕ್ಕಳ ಸಹಾಯವಾಣಿ ನೋಡಲ್‌ ಸೂಪರ್‌ವೈಸರ್‌ ನಾಗಸಿಂಹ ಜಿ.ರಾವ್ ಪ್ರತಿಕ್ರಿಯಿಸಿದ್ದಾರೆ.

ಶಾಲೆಯಲ್ಲಿ ಮಗುವಿಗೆ ಹಲ್ಲೆ ಮಾಡುವುದು ಅಥವಾ ಮನಸ್ಸನ್ನು ಘಾಸಿಗೊಳಿಸುವುದು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 82 (ಪೋಷಣೆ ಮತ್ತು ರಕ್ಷಣೆ) ಪ್ರಕಾರ ಮೂರು ವರ್ಷ ಶಿಕ್ಷಾರ್ಹ ಅಪರಾಧ. ಶಾಲೆಯಲ್ಲಿ ಮಕ್ಕಳನ್ನು ಹೆದರಿಸುವುದು, ಶಾಲೆಯಿಂದ ಹೊರ ಹಾಕುವುದು, ದೈಹಿಕ ದಂಡನೆಗೆ ಒಳಪಡಿಸುವುದು, ಬೇರೆಯವರ ಎದುರು ಹೀಯಾಳಿಸುವುದಕ್ಕೂ ಕಾನೂನು ಪ್ರಕಾರ ತಪ್ಪು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT