ಕರ್ನಾಟಕಕ್ಕೆ ಪ್ರಶಸ್ತಿ ‘ಹ್ಯಾಟ್ರಿಕ್‌’

7
ರಾಷ್ಟ್ರೀಯ ಸೀನಿಯರ್‌ ಬಾಲ್‌ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಕರ್ನಾಟಕಕ್ಕೆ ಪ್ರಶಸ್ತಿ ‘ಹ್ಯಾಟ್ರಿಕ್‌’

Published:
Updated:
ಕರ್ನಾಟಕಕ್ಕೆ ಪ್ರಶಸ್ತಿ ‘ಹ್ಯಾಟ್ರಿಕ್‌’

ಬೆಂಗಳೂರು: ಕರ್ನಾಟಕ ಮಹಿಳಾ ತಂಡದವರು ಹರಿಯಾಣದ ಗುರುಗ್ರಾಮದಲ್ಲಿ ನಡೆದ 63ನೇ ರಾಷ್ಟ್ರೀಯ ಸೀನಿಯರ್‌ ಬಾಲ್‌ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಇದರೊಂದಿಗೆ   ಸತತ ಮೂರು ಬಾರಿ ಟ್ರೋಫಿ ಗೆದ್ದ ಹಿರಿಮೆಯನ್ನೂ ತನ್ನದಾಗಿಸಿಕೊಂಡಿದೆ. 2016ರಲ್ಲಿ ತೆಲಂಗಾಣದ ಕಮ್ಮಮ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದ್ದ ಕರ್ನಾಟಕದ ವನಿತೆಯರು ಹೋದ ವರ್ಷ ಮೂಡುಬಿದಿರೆಯಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲೂ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಭಾರತ ಬಾಲ್‌ಬ್ಯಾಡ್ಮಿಂಟನ್‌ ಫೆಡರೇಷನ್‌ ಮತ್ತು ಹರಿಯಾಣ ರಾಜ್ಯ ಬಾಲ್‌ಬ್ಯಾಡ್ಮಿಂಟನ್‌ ಸಂಸ್ಥೆಯ ಸಹಯೋಗದಲ್ಲಿ ಮೀನಾಕ್ಷಿ ಪಬ್ಲಿಕ್‌ ಶಾಲೆಯ ಮೈದಾನದಲ್ಲಿ ಈ ಬಾರಿಯ ಚಾಂಪಿಯನ್‌ಷಿಪ್‌ ನಡೆದಿತ್ತು.

ಮಹಿಳೆಯರ ವಿಭಾಗದ ಫೈನಲ್‌ ಹೋರಾಟದಲ್ಲಿ ಕೆ.ಜಿ.ಯಶಸ್ವಿನಿ ಬಳಗ 35–14, 35–25ರ ನೇರ ಸೆಟ್‌ಗಳಿಂದ ಕೇರಳ ತಂಡವನ್ನು ಪರಾಭವಗೊಳಿಸಿತು.

ಟೂರ್ನಿಯ ಆರಂಭದಿಂದಲೂ ಶ್ರೇಷ್ಠ ಆಟ ಆಡಿ ಗೆಲುವಿನ ಸಿಹಿ ಸವಿದಿದ್ದ ರಾಜ್ಯ ತಂಡದವರು ಕೇರಳ ವಿರುದ್ಧವೂ ಪ್ರಾಬಲ್ಯ ಮೆರೆದರು.

ಮೊದಲ ಸೆಟ್‌ನ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಯಶಸ್ವಿನಿ ಪಡೆ ಲೀಲಾಜಾಲವಾಗಿ ಪಾಯಿಂಟ್ಸ್‌ ಹೆಕ್ಕಿ ಎದುರಾಳಿಗಳ ಮೇಲೆ ಒತ್ತಡ ಹೇರಿತು. ಜಿ.ಜಯಲಕ್ಷ್ಮಿ, ಎಸ್‌.ಕೆ.ಪಲ್ಲವಿ ಮತ್ತು ನಾಯಕಿ ಯಶಸ್ವಿನಿ ಮೋಡಿ ಮಾಡಿದರು.

ದ್ವಿತೀಯ ಸೆಟ್‌ನಲ್ಲಿ ಕರ್ನಾಟಕ ತಂಡದ ಆಟ ಇನ್ನಷ್ಟು ರಂಗೇರಿತು. ಕವನ, ಲಾವಣ್ಯ ಮತ್ತು ಸುಶ್ಮಿತಾ ಅವರು ನಿಖರ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿ ತಂಡದ ಗೆಲುವನ್ನು ಸುಲಭ ಮಾಡಿದರು.

ಇದಕ್ಕೂ ಮುನ್ನ ನಡೆದಿದ್ದ ಸೆಮಿ ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕ 35–7, 35–15ರಲ್ಲಿ ಆಂಧ್ರಪ್ರದೇಶ ಎದುರು ಗೆದ್ದಿತ್ತು. ಇನ್ನೊಂದು ಹೋರಾಟದಲ್ಲಿ ಕೇರಳ 37–35, 29–35, 35–30ರಲ್ಲಿ ಹೋದ ಬಾರಿಯ ರನ್ನರ್ಸ್‌ ಅಪ್‌ ತಮಿಳುನಾಡು ತಂಡದ ಸವಾಲು ಮೀರಿ ನಿಂತಿತ್ತು.

ಪುರುಷರಿಗೆ ಕಂಚು: ಕರ್ನಾಟಕದ ಪುರುಷರ ತಂಡದವರು ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸಲು ನಡೆದ ಹೋರಾಟದಲ್ಲಿ ಕರ್ನಾಟಕ 33–35, 35–28, 35–31ರಲ್ಲಿ ಆಂಧ್ರಪ್ರದೇಶ ತಂಡವನ್ನು ಸೋಲಿಸಿತು.

ಮೊದಲ ಸೆಟ್‌ನಲ್ಲಿ ಅಮೋಘ ಆಟ ಆಡಿದ ತಂಡ ಅಂತಿಮ ಕ್ಷಣಗಳಲ್ಲಿ ಎದುರಾಳಿಗಳಿಗೆ ಪಾಯಿಂಟ್‌ ಬಿಟ್ಟುಕೊಟ್ಟು ಹಿನ್ನಡೆ ಕಂಡಿತು. ಇದರಿಂದ ಕಿಂಚಿತ್ತೂ ಎದೆಗುಂದದ ರಾಜ್ಯ ತಂಡದ ಆಟಗಾರರು ನಂತರದ ಎರಡೂ ಸೆಟ್‌ಗಳಲ್ಲೂ ಗುಣಮಟ್ಟದ ಆಟ ಆಡಿ ಗೆಲುವು ಒಲಿಸಿಕೊಂಡರು. ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ಕರ್ನಾಟಕ 28–35, 27–35ರಲ್ಲಿ ತಮಿಳುನಾಡು ತಂಡದ ವಿರುದ್ಧ ಪರಾಭವಗೊಂಡಿತ್ತು.

ರೈಲ್ವೇಸ್‌ಗೆ ಪ್ರಶಸ್ತಿ: ರೈಲ್ವೇಸ್‌ ತಂಡದವರು ಪುರುಷರ ವಿಭಾಗದಲ್ಲಿ ಚಾಂಪಿಯನ್‌ ಆದರು.  ಫೈನಲ್‌ನಲ್ಲಿ ರೈಲ್ವೇಸ್‌ ತಂಡ ನೇರ ಸೆಟ್‌ಗಳಿಂದ ತಮಿಳುನಾಡು ತಂಡವನ್ನು ಸೋಲಿಸಿತು.

ವೈಯಕ್ತಿಕ ಪ್ರಶಸ್ತಿ: ಚಾಂಪಿಯನ್‌ಷಿಪ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ ಜಿ.ಜಯಲಕ್ಷ್ಮಿ, ಎಸ್‌.ಕೆ.ಪಲ್ಲವಿ ಮತ್ತು ಮಹಾದೇವ ಸ್ವಾಮಿ ಅವರಿಗೆ ‘ಸ್ಟಾರ್‌ ಆಫ್‌ ಇಂಡಿಯಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಬಲ್ಸ್‌ನಲ್ಲೂ ಪ್ರಶಸ್ತಿ: ಮಹಿಳೆಯರ ಡಬಲ್ಸ್‌ನಲ್ಲಿ ಪಲ್ಲವಿ, ಮೇಘನಾ ಮತ್ತು ಲಲಿತಾಂಬ ಅವರಿದ್ದ ಕರ್ನಾಟಕ ತಂಡ ಚಾಂಪಿಯನ್‌ ಆಯಿತು.

ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಸವಾಲು ಎತ್ತಿಹಿಡಿದಿದ್ದ ಪವಿತ್ರ, ವೇಣುಗೋಪಾಲ್‌ ಮತ್ತು ವಿಜಯ ಕುಮಾರ್‌ ಅವರು ಕಂಚು ತಮ್ಮದಾಗಿಸಿಕೊಂಡರು.

ವಿಜಯಿ ತಂಡದಲ್ಲಿ ಆಳ್ವಾಸ್‌ನ ಏಳು ಮಂದಿ:  ಪ್ರಶಸ್ತಿ ಗೆದ್ದ ಮಹಿಳಾ ತಂಡದಲ್ಲಿ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಏಳು ಮಂದಿ ಆಟಗಾರ್ತಿಯರು ಇದ್ದರು.

ಪ್ರಮುಖ ಆಟಗಾರ್ತಿಯರ ಅನುಪಸ್ಥಿಯಲ್ಲಿ ಯಶಸ್ವಿನಿ, ಎಸ್‌.ಕೆ.ಪಲ್ಲವಿ, ಕವನ, ಬಿ.ಡಿ.ಲಾವಣ್ಯ, ಕೆ.ಸುಶ್ಮಿತಾ, ಜಿ.ಜಯಲಕ್ಷ್ಮಿ ಮತ್ತು ಎಚ್‌.ಎಂ.ಮೇಘನಾ ಶ್ರೇಷ್ಠ ಸಾಮರ್ಥ್ಯ ತೋರಿದರು. ಇವರು ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳು.

ಜಿ.ಪಲ್ಲವಿ ಮತ್ತು ಲಲಿತಾಂಬ ಬೆಂಗಳೂರಿನ ಬಿ.ಎಂ.ಎಸ್‌.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆ.ಪವಿತ್ರ, ಬೆಂಗಳೂರಿನ ಜಯ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry