ಬಾಲಕಿ ಬಲಿ ಪಡೆದ ಕಿರು ಕಾಲುವೆ

7
ದೊಡ್ಡಬೊಮ್ಮಸಂದ್ರದಲ್ಲಿ ಘಟನೆ

ಬಾಲಕಿ ಬಲಿ ಪಡೆದ ಕಿರು ಕಾಲುವೆ

Published:
Updated:
ಬಾಲಕಿ ಬಲಿ ಪಡೆದ ಕಿರು ಕಾಲುವೆ

ಬೆಂಗಳೂರು: ದೊಡ್ಡಬೊಮ್ಮಸಂದ್ರದಲ್ಲಿ ಆಡುವಾಡುತ್ತಿದ್ದ ಎರಡೂವರೆ ವರ್ಷದ ತನುಶ್ರೀ, ಕೊಳಚೆ ನೀರಿನ ಕಿರು ಕಾಲುವೆಗೆ ಬಿದ್ದು  ಮಂಗಳವಾರ ಮೃತಪಟ್ಟಿದ್ದಾಳೆ.

ಈಕೆ ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದ ಸಾಬಣ್ಣ ಮತ್ತು ಲಕ್ಷ್ಮಿ ದಂಪತಿಯ ಒಬ್ಬಳೇ ಮಗಳು. ಕಟ್ಟಡ ಕಾರ್ಮಿಕರಾಗಿರುವ ದಂಪತಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕೆಲಸಕ್ಕೆ ಹೊರಡುತ್ತಿದ್ದಾಗ ಮಗುವು ಆಟವಾಡಲೆಂದು ಹೊರಗೆ ಹೋಗಿತ್ತು. ಸುಮಾರು ಹೊತ್ತಾದರೂ ವಾಪಸ್‌ ಬಂದಿರಲಿಲ್ಲ. ಗಾಬರಿಗೊಂಡ ದಂಪತಿ, ಹುಡುಕಾಟ ನಡೆಸಿದ್ದರು. ಕಾಲುವೆಯಲ್ಲಿ ಮಗು ತಲೆಕೆಳಗಾದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂತು.

ಮಗುವಿನ ಹೃದಯ ಬಡಿಯುತ್ತಿದ್ದುದನ್ನು ಕಂಡ ದಂಪತಿಯು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಗೆ ತಲುಪುವಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು.

ಕೆಲಸ ಹುಡುಕಿಕೊಂಡು ಎಂಟು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ, ದೊಡ್ಡಬೊಮ್ಮಸಂದ್ರದ ಕೊಳೆಗೇರಿಯಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸವಿದ್ದರು. ಕೆಲಸಕ್ಕೆ ಹೋಗುವಾಗ ಮಗಳನ್ನು ಅಕ್ಕ–ಪಕ್ಕದ ಮನೆಯವರ ಬಳಿ ಬಿಟ್ಟುಹೋಗುತ್ತಿದ್ದರು.

ಜಾಗದ ಮಾಲೀಕ, ಜಲಮಂಡಳಿ ವಿರುದ್ಧ ಎಫ್‌ಐಆರ್‌: ‘ಘಟನೆ ಸಂಬಂಧ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಶೆಡ್‌ ಇದ್ದ ಜಾಗದ ಮಾಲೀಕ ಹಾಗೂ ಜಲಮಂಡಳಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದರು.

‘ಬೆಳಿಗ್ಗೆ 9.45 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಕಾಲುವೆ ಸಮೀಪದಲ್ಲೇ ಶೆಡ್‌ ಇತ್ತು. ಬಾಲಕಿಯು ನಿತ್ಯವೂ ಅಲ್ಲಿಯೇ ಆಟವಾಡುತ್ತಿದ್ದಳು. ಭಾನುವಾರವೂ ಆಟವಾಡಲು ಹೋದಾಗ ಈ ರೀತಿಯಾಗಿದೆ. ಆದರೆ, ಬಾಲಕಿಯು ಕಾಲುವೆ ಒಳಗೆ ಹೇಗೆ ಬಿದ್ದಳು ಎಂಬುದು ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದರು.

₹5 ಲಕ್ಷ ಪರಿಹಾರ: ‘ಬಾಲಕಿಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುವುದು’ಎಂದು ಮೇಯರ್‌ ತಿಳಿಸಿದರು.

ಜಲಮಂಡಳಿಯವರು ನೀರುಗಾಲುವೆಗೆ ಅಡ್ಡಲಾಗಿ ಮಣ್ಣು ಹಾಕಿದೆ. ಇದರಿಂದಾಗಿ ಅದರಲ್ಲಿ ನೀರು ತುಂಬಿಕೊಂಡಿತ್ತು. ಈ ನೀರಿಗೆ ಬಿದ್ದ ಮಗು ಪ್ರಾಣ ಕಳೆದುಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಲಮಂಡಳಿ ನಿರ್ಲಕ್ಷ್ಯ ಕಾರಣವೇ?: ಇದು ಮಳೆನೀರಿನ ಕಿರುಗಾಲುವೆಯಾಗಿದ್ದು, ರಾಮಚಂದ್ರಪುರದಿಂದ ದೊಡ್ಡಬೊಮ್ಮಸಂದ್ರ ಕೆರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಜಲಮಂಡಳಿಯವರು ಕೊಳಚೆ ನೀರಿನ ಕೊಳವೆಗಳನ್ನು ಅಳವಡಿಸುತ್ತಿದ್ದಾರೆ.

ಮ್ಯಾನ್‌ಹೋಲ್‌ ನಿರ್ಮಿಸುವ ಉದ್ದೇಶದಿಂದ ಕಾಲುವೆಗೆ ಮಣ್ಣು ಸುರಿದಿದ್ದರು. ಈ ಹಿಂದೆ ಒಂದು ಅಡಿ ನೀರು ಹರಿಯುತ್ತಿತ್ತು. ಈಗ ಮಣ್ಣು ಸುರಿದಿದ್ದರಿಂದ ಕಾಲುವೆಯಲ್ಲಿ ನೀರು ನಿಂತುಕೊಂಡಿತ್ತು. ಬಾಲಕಿಯು ಆಕಸ್ಮಿಕವಾಗಿ ಕಾಲುವೆಗೆ ಬಿದ್ದು ಅಸುನೀಗಿದ್ದಾಳೆ ಎಂದು ಬಿಬಿಎಂಪಿ ಮಳೆನೀರು ಕಾಲುವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ರಾಜಕಾಲುವೆಗಳನ್ನು ಮುಚ್ಚುವಂತಿಲ್ಲ. ಈ ಕುರಿತು ಹೈಕೋರ್ಟ್‌ ಆದೇಶವಿದೆ. ಈ ಕಾಲುವೆ ಪಕ್ಕದಲ್ಲೇ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗವಿದೆ. ಇಲ್ಲಿ ದಂಪತಿ 8 ವರ್ಷಗಳಿಂದ ವಾಸವಿದ್ದಾರೆ. ಅವರು ಕಾಲುವೆಯನ್ನು ದಾಟಲು ಹಲಗೆ ಹಾಕಿಕೊಂಡಿದ್ದರು ಎಂದರು.

ಸಾಬಣ್ಣ ಮತ್ತು ಲಕ್ಷ್ಮಿ ಅವರದ್ದು ಬಡ ಕುಟುಂಬ. ದಿನದ ದುಡಿಮೆಯೇ ಅವರಿಗೆ ಆಧಾರ. ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಅವರಿಗೆ, ಐದು ವರ್ಷದವರೆಗೆ ಮಕ್ಕಳೇ ಆಗಿರಲಿಲ್ಲ. ಆಗ ದೇವರಿಗೆ ಹರಕೆ ಕಟ್ಟಿದ್ದರು. ಅದರ ಫಲವಾಗಿ ‘ತನುಶ್ರೀ’ ಹುಟ್ಟಿದ್ದಳು. ಈಗ ಆಕೆಯಿಲ್ಲದೆ, ದಂಪತಿ ಮಡಿಲು ಬರಿದಾಗಿದೆ.

ಕಾಲುವೆಗೆ ಬಿದ್ದು ಮೃತಪಟ್ಟ ಬಾಲಕಿ, ಅವರ ತಂದೆ–ತಾಯಿಗೆ ಅದೃಷ್ಟದ ಮಗಳಾಗಿದ್ದಳು. ಒಬ್ಬಳೇ ಮಗಳಾಗಿದ್ದರಿಂದ ಮುದ್ದಿನಿಂದ ಬೆಳೆಸುತ್ತಿದ್ದರು. ದಿನಪೂರ್ತಿ ಕೆಲಸಕ್ಕೆ ಹೋದರೂ ತಂದೆ ಅಥವಾ ತಾಯಿ, ಮಧ್ಯಾಹ್ನ ಶೆಡ್‌ ಹತ್ತಿರ ಬಂದು ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಮಗಳನ್ನು ಚೆನ್ನಾಗಿ ಓದಿಸಿ, ಅಧಿಕಾರಿ ಮಾಡುವ ಆಸೆಯನ್ನೂ ಹೊಂದಿದ್ದರು. ಈಗ, ಮಗಳು ಇಲ್ಲದಿದ್ದರಿಂದ ನಗರವನ್ನೇ ತೊರೆಯಲು ಅವರು ತೀರ್ಮಾನಿಸಿದ್ದಾರೆ.

ಬಾಲಕಿಯ ಮೃತದೇಹದ ಶವಪರೀಕ್ಷೆ ನಡೆಯುತ್ತಿದ್ದ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಬಳಿ ಮಂಗಳವಾರ ಮಧ್ಯಾಹ್ನ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಲಕಿಯನ್ನು ನೆನೆದು ಅವರೆಲ್ಲ ಕಣ್ಣೀರಿಟ್ಟರು.

‘ಐದು ವರ್ಷದ ಬಳಿಕ ಆ ಭಗವಂತಾ ಈ ಮಗು ಕೊಟ್ಟಿದ್ದಾ. ಹೆಣ್ಣು ಮಗು ಆಗಿದ್ದರಿಂದ ಮಹಾಲಕ್ಷ್ಮಿ ಹುಟ್ಟಿದಳು ಎಂದು ಸಂಭ್ರಮಿಸಿದ್ದೆವು. ಆದರೆ, ಈಗ ಆ ದೇವತೆಯನ್ನು ಆ ದೇವರು ಕಸಿದುಕೊಂಡಿದ್ದಾನೆ. ಆತ ಕೊಟ್ಟಿದ್ಯಾಕೆ? ಕಿತ್ತುಕೊಂಡಿದ್ಯಾಕೆ?. ನಮ್ಮ ಹಣೆಬರಹವೇ ಸರಿ ಇಲ್ಲ. ಈಗ ನಾವೂ ಯಾರಿಗಾಗಿ ದುಡಿಯಬೇಕು’ ಎಂದು ತಾಯಿ ಲಕ್ಷ್ಮಿ ಕಣ್ಣೀರಿಟ್ಟರು.

‘ಹೊಸ ಬಟ್ಟೆ ಎಂದರೆ, ಮಗಳಿಗೆ ತುಂಬಾ ಇಷ್ಟ. ಹೀಗಾಗಿ ವಾರಕ್ಕೊಂದು ಬಟ್ಟೆ ಕೊಡಿಸುತ್ತಿದ್ದೆವು. ಎರಡು ದಿನಗಳ ಹಿಂದಷ್ಟೇ ಹೊಸ ಬಟ್ಟೆ ತಂದಿದ್ದೆವು. ಅದನ್ನು ತೊಡಿಸಬೇಕು ಎನ್ನುವಷ್ಟರಲ್ಲಿ ಹೀಗಾಯಿತು’ ಎಂದ ತಾಯಿ, ‘ಮಗಳೇ ಹೊಸ ಹರವಿ ಉಟ್ಕೊಳ್ಳೋ ಮುಂಚೆಯೇ ಹೋಗಿ ಬಿಟ್ಯಾ’ ಎಂದು ಬಿಕ್ಕಿ ಬಿಕ್ಕಿ ಅತ್ತರು.

ತಂದೆ ಸಾಬಣ್ಣ, ‘ಊರಲ್ಲಿ ಕೆಲಸವಿಲ್ಲ. ಹೀಗಾಗಿ ನಗರಕ್ಕೆ ಬಂದಿದ್ದೆವು. ಸಂಬಂಧಿಕರು ನಮ್ಮ ಜತೆಗೆ ಬಂದಿದ್ದಾರೆ. ಎಲ್ಲರೂ ಸೇರಿಯೇ ಶೆಡ್‌ ನಿರ್ಮಿಸಿಕೊಂಡು ಉಳಿದುಕೊಂಡಿದ್ದೇವೆ. ಈ ರೀತಿಯಾಗುತ್ತದೆ ಎಂದಿದ್ದರೆ, ಇಲ್ಲಿ ಇರುತ್ತಲೇ ಇರಲಿಲ್ಲ. ಬೆಂಗಳೂರು ನಮಗೆ ನರಕವಾಯಿತು’ ಎಂದು ಅತ್ತರು.

‘ನಮ್ಮ ತಂದೆಗೆ (ಬಾಲಕಿಯ ಅಜ್ಜ) ತನುಶ್ರೀ ಮುದ್ದಿನ ಮೊಮ್ಮಗಳಾಗಿದ್ದಳು. ಊರಿನಿಂದಲೇ ದಿನಕ್ಕೆ ಒಂದು ಬಾರಿ ಫೋನ್‌, ಮಾಡಿ ಆಕೆಯ ಜತೆ ಮಾತನಾಡುತ್ತಿದ್ದರು. ತೊದಲು ನುಡಿಯಿಂದಲೇ ಆಕೆ ಉತ್ತರಿಸುತ್ತಿದ್ದಳು. ನಕ್ಕು ನಕ್ಕು ಸುಮ್ಮನಾಗುತ್ತಿದ್ದಳು. ಇನ್ನು ಆ ನಗು ನಮ್ಮ ಪಾಲಿಗಿಲ್ಲ’ ಎಂದು ಕಣ್ಣೀರಿಟ್ಟರು.

ಮೂರು ತಿಂಗಳ ಗರ್ಭಿಣಿ:

‘ತನುಶ್ರೀ ತಾಯಿ ಲಕ್ಷ್ಮಿ ಅವರು ಈಗ ಮೂರು ತಿಂಗಳ ಗರ್ಭಿಣಿ. ಇಂಥ ಸಂದರ್ಭದಲ್ಲಿ ಮಗಳು ಮೃತಪಟ್ಟಿದ್ದು, ಅವರಿಗೆ ನೋವು ತಂದಿದೆ. ಅವರಿಗೆ ಸಮಾಧಾನ ಹೇಳಲು ಸಹ ನಮ್ಮ ಬಳಿ ಆಗುತ್ತಿಲ್ಲ’ ಎಂದು ಸಂಬಂಧಿ ಸುರೇಶ್‌ ತಿಳಿಸಿದರು.

‘ತನುಶ್ರೀ, ಮತ್ತೆ  ಹುಟ್ಟಿ ಬರುತ್ತಾಳೆಂದು ತಾಯಿ ಕೂಗಿ ಕೂಗಿ ಹೇಳುತ್ತಿದ್ದಾರೆ. ಆಕೆಯ ಆಕ್ರಂದನ ನೋಡಲಾಗುತ್ತಿಲ್ಲ. ಮತ್ತೆ ಹುಟ್ಟಿ ಬಾ ತನುಶ್ರೀ ಎಂದು ನಾವೂ ಆ ದೇವರಲ್ಲಿ ಬೇಡಿಕೊಳ್ಳುತ್ತಿದ್ದೇವೆ’ ಎಂದರು.

ತಡವಾದ ಶವ ಪರೀಕ್ಷೆ: ಸಂಬಂಧಿಕರ ಪಟ್ಟು: ಹಲವು ಗಂಟೆಯಾದರೂ ಶವದ ಪರೀಕ್ಷೆ ಮುಗಿದಿರಲಿಲ್ಲ. ಅದರಿಂದ ಅಸಮಾಧಾನಗೊಂಡ ಸಂಬಂಧಿಕರು, ‘ನಿಮ್ಮ ಪರೀಕ್ಷೆ ಯಾರಿಗೆ ಬೇಕು?. ನಮ್ಮ ಮಗಳನ್ನ ನಮಗೆ ಕೊಡಿ. ನಾವೂ ಯಾದಗಿರಿಗೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಕೆಲ ವೈದ್ಯರು, ಅವರನ್ನು ಸಮಾಧಾನಪಡಿಸಿ ಕೆಲ ಗಂಟೆಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಿ ಶವ ಹಸ್ತಾಂತರಿಸಿದರು.

ಅಧಿಕಾರಿಗಳ ತರಾಟೆ: ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳು ಯಾರೂ ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಹೋಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಮೇಯರ್‌ ಸಂಪತ್‌ ರಾಜ್‌, ಮೊದಲಿಗರಾಗಿ ಆಸ್ಪತ್ರೆಗೆ ಬಂದರು. ಅಲ್ಲಿಂದಲೇ, ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry