ಯಡಿಯೂರಪ್ಪ, ಡಿ.ಕೆ. ಶಿವಕುಮಾರ್‌ಗೆ ನೋಟಿಸ್‌

7
ಅಕ್ರಮ ಡಿನೋಟಿಫಿಕೇಷನ್‌ ಆರೋಪ...

ಯಡಿಯೂರಪ್ಪ, ಡಿ.ಕೆ. ಶಿವಕುಮಾರ್‌ಗೆ ನೋಟಿಸ್‌

Published:
Updated:
ಯಡಿಯೂರಪ್ಪ, ಡಿ.ಕೆ. ಶಿವಕುಮಾರ್‌ಗೆ ನೋಟಿಸ್‌

ನವದೆಹಲಿ: ಭೂಮಿ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರಿನನ್ವಯ ನಡೆದಿದ್ದ ವಿಚಾರಣೆ ರದ್ದುಪಡಿಸಿ 2015ರ ಡಿಸೆಂಬರ್‌ 18ರಂದು ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಾತನೂರಿನ ಕಬ್ಬಾಳೆಗೌಡ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠವು, ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಧಿಕಾರ ದುರುಪಯೋಗವಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯೆ ನೀಡುವಂತೆ ಇಬ್ಬರಿಗೂ ನೋಟಿಸ್‌ ಜಾರಿ ಮಾಡಿತು.

ಕರ್ನಾಟಕ ಜಮೀನು ವರ್ಗಾವಣೆ ನಿರ್ಬಂಧ ಕಾಯ್ದೆ– 1991 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಉಲ್ಲಂಘನೆ ಆರೋಪ ಹೊರಿಸಿರುವುದನ್ನು ಶಿವಕುಮಾರ್‌ ಪರ ವಕೀಲ ಕಪಿಲ್‌ ಸಿಬಲ್‌ ಹಾಗೂ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಪರ ವಕೀಲ ಜೋಸೆಫ್‌ ಅರಿಸ್ಟಾಟಲ್‌ ಅವರು ವಿರೋಧಿಸಿದರಾದರೂ ನ್ಯಾಯಪೀಠ ಅದನ್ನು ಮಾನ್ಯ ಮಾಡಲಿಲ್ಲ.

1962ರಲ್ಲಿ ಬಿ.ಕೆ. ಶ್ರೀನಿವಾಸನ್ ಎಂಬುವವರು ಬೆನ್ನಿಗಾನಹಳ್ಳಿ ಬಳಿ ಖರೀದಿಸಿದ್ದ 5.11 ಎಕರೆ ಭೂಮಿಯ ಪೈಕಿ 4.20 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ₹ 1.62 ಕೋಟಿ ದರಕ್ಕೆ ಖರೀದಿಸಿ ಕೈಗಾರಿಕಾ ಬಳಕೆಗಾಗಿ ಪರಿವರ್ತಿಸಿಕೊಂಡಿದ್ದರು.

2004ರಲ್ಲಿ ಆ ಭೂಮಿಯು ಗೃಹ ನಿರ್ಮಾಣ ಉದ್ದೇಶಕ್ಕೆ ಪರಿವರ್ತನೆಯಾಗಿತ್ತು. ಅದೇ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಅಡಿ ಸ್ವಾಧೀನಕ್ಕೆ ಗುರುತಿಸಲಾಗಿತ್ತು. ಆದರೆ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಶಿವಕುಮಾರ್‌ ಅವರು ರಾಜಕೀಯ ಅಧಿಕಾರ ಬಳಸಿ, ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿರಿಸಿ, ಡಿನೋಟಿಫೈ ಮಾಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಅಕ್ರಮವಾಗಿ ಭೂ ಮಂಜೂರಾತಿ: ಶಾಸಕ ಅಶೋಕ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಅಕ್ರಮವಾಗಿ ಭೂ ಮಂಜೂರಾತಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಉತ್ತರಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರ್. ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಹಿಂದಿನ ತಹಶೀಲ್ದಾರ್‌ ಸೇರಿ ನಾಲ್ವರನ್ನು ಬಂಧಿಸಿದೆ.

ತಹಶೀಲ್ದಾರ್‌ ಆಗಿದ್ದ ರಾಮಚಂದ್ರಯ್ಯ, ಕಂದಾಯ ನಿರೀಕ್ಷಕರಾಗಿದ್ದ ಗವಿಗೌಡ, ಚೌಡ ರೆಡ್ಡಿ, ಗ್ರಾಮ ಲೆಕ್ಕಿಗ ಶಶಿಧರ ಅವರನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಎಸಿಬಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಆರ್. ಅಶೋಕ್‌ಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

1998ರಿಂದ 2006ರ ಅವಧಿಯಲ್ಲಿ ಬೆಂಗಳೂರು–ದಕ್ಷಿಣ ತಾಲ್ಲೂಕಿನ ಭೂ–ಸಕ್ರಮ ಸಮಿತಿಗೆ ಆರ್. ಅಶೋಕ್ ಅಧ್ಯಕ್ಷರಾಗಿದ್ದರು. ಅನರ್ಹ ಫಲಾನುಭವಿಗಳಿಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಎಸಿಬಿಯಲ್ಲಿ ದೂರು ದಾಖಲಾಗಿತ್ತು.

ಪ್ರಾಥಮಿಕ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ವಂಚನೆ (420), ಕ್ರಿಮಿನಲ್ ಸಂಚು (120 (ಬಿ)) ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಅರ್ಕಾವತಿ ಹಗರಣ ಮುಚ್ಚಿ ಹಾಕುವ ಯತ್ನ: ಶೆಟ್ಟರ್ ಆರೋಪ

ಬೆಂಗಳೂರು: ಅರ್ಕಾವತಿ ಹಗರಣ ಮುಚ್ಚಿ ಹಾಕುವ ಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.

ಹಗರಣದ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಬಹಿರಂಗ ಪಡಿಸಲು ಸರ್ಕಾರ ತಯಾರಿಲ್ಲ. ಈಗ ವರದಿ ಅಧ್ಯಯನಕ್ಕೆ ಅಧಿಕಾರಿಗಳ ಸಮಿತಿ ರಚಿಸುವ ಮೂಲಕ ₹10,000 ಕೋಟಿ ಮೊತ್ತದ ಹಗರಣವನ್ನು ಮುಚ್ಚಿಹಾಕಲು ಮುಂದಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಿ–ಡೂ ಮೂಲಕ 750 ಎಕರೆ ಭೂಮಿ ಡಿನೋಟಿಫೈ ಮಾಡಿದ್ದರು. ಕಾಂಗ್ರೆಸ್‌ ಸರ್ಕಾರದ ಅವಧಿಯ ಅತಿ ದೊಡ್ಡ ಹಗರಣ ಇದಾಗಿದೆ ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry