ಇಸ್ರೊದ 100ನೇ ಉಪಗ್ರಹ ಉಡಾವಣೆ 12ಕ್ಕೆ

7
ಆಸ್ಟ್ರೊಸ್ಯಾಟ್‌ ಮಾದರಿ ಪ್ರದರ್ಶನಕ್ಕೆ ಚಾಲನೆ

ಇಸ್ರೊದ 100ನೇ ಉಪಗ್ರಹ ಉಡಾವಣೆ 12ಕ್ಕೆ

Published:
Updated:
ಇಸ್ರೊದ 100ನೇ ಉಪಗ್ರಹ ಉಡಾವಣೆ 12ಕ್ಕೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿಸಿದ (ಇಸ್ರೊ) 100ನೇ ಉಪಗ್ರಹ ಉಡಾವಣೆಗೆ ದಿನಗಣನೆ ಆರಂಭವಾಗಿದೆ. ಈ ಉಪಗ್ರಹವನ್ನು ಹೊತ್ತ ಧ್ರುವಗಾಮಿ ಉಡಾವಣಾ ವಾಹನವು (ಪಿಎಸ್‌ಎಲ್‌ವಿ) ಇದೇ 12ರಂದು ಬಾಹ್ಯಾಕಾಶಕ್ಕೆ ಹಾರಲಿದೆ ಎಂದು ಇಸ್ರೊ ನಿರ್ದೇಶಕ ಎಂ.ಅಣ್ಣಾದೊರೈ ತಿಳಿಸಿದರು.

ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಆಸ್ಟ್ರೊಸ್ಯಾಟ್‌ ಮಾದರಿ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ’ರಾಕೆಟ್ ಕಾರ್ಟೊಸ್ಯಾಟ್–3 ದೂರಸಂವೇದಿ ಉಪಗ್ರಹ, ಸೂಕ್ಷ್ಮ ಉಪಗ್ರಹ, ನ್ಯಾನೊ ಉಪಗ್ರಹ ಹಾಗೂ 28 ವಿದೇಶಿ ನ್ಯಾನೊ ಉಪಗ್ರಹಗಳನ್ನು ಪಿಎಸ್‌ಎಲ್‌ವಿ -ಸಿ40 ಹೊತ್ತೊಯ್ಯಲಿದೆ’ ಎಂದು ಹೇಳಿದರು.

‘ಆಗಸ್ಟ್‌ನಲ್ಲಿ ಭಾರತೀಯ ಪ್ರಾದೇಶಿಕ ಪಥ ದರ್ಶಕ ಉಪಗ್ರಹ ವ್ಯವಸ್ಥೆಯ 1ಎಚ್ (ಐಆರ್‌ಎನ್‌ಎಸ್‌ಎಸ್‌–1ಎಚ್) ಉಪಗ್ರಹವನ್ನು ಹೊತ್ತಿದ್ದ ಪಿಎಸ್‌ಎಲ್‌ವಿ–ಸಿ39 ಕಾರ್ಯಾಚರಣೆ ಪೂರ್ಣಗೊಳಿಸುವಲ್ಲಿ ವಿಫಲವಾಗಿತ್ತು. ಅದು ಪುನಾರಾವರ್ತನೆ ಆಗದಂತೆ ಎಚ್ಚರವಹಿಸಲಾಗಿದೆ.ಈ ಕುರಿತು ಎಲ್ಲಾ ರೀತಿಯ ತಪಾಸಣೆಗಳೂ ಪೂರ್ಣಗೊಂಡಿವೆ. ವೈಫಲ್ಯದ ನಂತರ ಮೊದಲ ಬಾರಿ ಪಿಎಸ್‌ಎಲ್‌ವಿಯನ್ನು ಬಳಸಲಾಗುತ್ತಿದೆ’ ಎಂದು ವಿವರಿಸಿದರು.

‘ಚಂದ್ರಯಾನ–2 ಅಂತಿಮ ಘಟ್ಟದಲ್ಲಿದೆ. ಜಿಎಸ್‌ಎಲ್‌ವಿ– ಎಂಕೆ 2 ರಾಕೆಟ್‌ 3,300 ಕೆ.ಜಿ ತೂಕದ ಕಕ್ಷೆಗಾಮಿ, ಲ್ಯಾಂಡರ್‌ ಮತ್ತು ರೋವರ್‌ ಅನ್ನು ಹೊತ್ತೊಯ್ಯಲಿದೆ. ಲ್ಯಾಂಡರ್‌ ಅನ್ನು ಚಂದ್ರನಲ್ಲಿ ಯಾವ ಪ್ರದೇಶದಲ್ಲಿ ಇಳಿಸಬೇಕು ಎಂಬುದು ಇನ್ನೂ ನಿರ್ಧಾರ ಆಗಿಲ್ಲ’ ಎಂದು ತಿಳಿಸಿದರು.

ಎರಡು ತಿಂಗಳು ‘ಆಸ್ಟ್ರೊಸ್ಯಾಟ್‌’ ಪ್ರದರ್ಶನ: ಖಗೋಳ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವ ‘ಆಸ್ಟ್ರೊಸ್ಯಾಟ್‌’ ಸಾಧನೆ ಬಗ್ಗೆ ಜನರಿಗೆ ತಿಳಿಸಲು ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಇದು 2015ರಲ್ಲಿ ಉಡಾವಣೆಯಾಗಿತ್ತು. ಪ್ರದರ್ಶನ ಎರಡು ತಿಂಗಳ ಕಾಲ ಮುಂದುವರಿಯಲಿದೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬಹುದು ಎಂದು ಅಣ್ಣಾದೊರೈ ಮಾಹಿತಿ ನೀಡಿದರು.

ಉಪಗ್ರಹ ಉಡಾವಣೆಯ ಮಾಹಿತಿ, ಉಪಗ್ರಹದಿಂದ ಆಗಿರುವ ಉಪಯೋಗ, ಆಸ್ಟ್ರೊಸ್ಯಾಟ್‌ ಸಿದ್ಧಗೊಂಡ ಬಗೆ ... ಹೀಗೆ ಆಸ್ಟ್ರೊಸ್ಯಾಟ್‌ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ.

ಕಪ್ಪುರಂಧ್ರದ ಮಾಹಿತಿ: ಪಿಎಸ್‌ಎಲ್‌ವಿ–ಸಿ30 ಆಸ್ಟ್ರೊಸ್ಯಾಟ್‌ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದೆ. ಇದು ಭೂಮಿಯಿಂದ 650 ಕಿ.ಮೀ. ಎತ್ತರದಲ್ಲಿರುವ ಕಕ್ಷೆಯಲ್ಲಿ ಸುತ್ತುಹಾಕುತ್ತಿದ್ದು, ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಒದಗಿಸುವ ಮಾಹಿತಿಯಿಂದ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವದ ವಿಜ್ಞಾನಿಗಳ ಸಮುದಾಯಕ್ಕೆ ಅನುಕೂಲವಾಗುತ್ತಿದೆ ಎಂದರು.

ಆಸ್ಟ್ರೊಸ್ಯಾಟ್‌ನಲ್ಲಿ ಎಕ್ಸ್‌–ರೇ ಕಿರಣಗಳನ್ನು ಗ್ರಹಿಸುವ ಟೆಲಿಸ್ಕೋಪ್‌ ಇದೆ. ಜೊತೆಗೆ, ಅತ್ಯಾಧುನಿಕ ಹಾಗೂ ಅತಿ ಸಂವೇದನಾಶೀಲ ಉಪಕರಣಗಳಿದ್ದು, ವಿಶಾಲ ವಿದ್ಯುತ್ಕಾಂತೀಯ ವಲಯದಿಂದ ಮಾಹಿತಿಗಳನ್ನು ಸಂಗ್ರಹಿಸುತ್ತವೆ ಎಂದು ವಿವರಿಸಿದರು.

ಕಪ್ಪುರಂಧ್ರಗಳು ಹಾಗೂ ನಕ್ಷತ್ರಗಳ ಅಯಸ್ಕಾಂತೀಯ ವಲಯಗಳು ಸೇರಿದಂತೆ ಅಂತರಿಕ್ಷದ ಮಾಹಿತಿಗಳನ್ನು ಸಂಗ್ರಹಿಸಿ ದತ್ತಾಂಶಗಳನ್ನು ಭೂಮಿಗೆ ರವಾನಿಸುತ್ತಿದೆ. ಇಲ್ಲಿಯವರೆಗೆ 20 ಟೆರಾಬೈಟ್‌ ಮಾಹಿತಿಯನ್ನು ಆಸ್ಟ್ರೊಸ್ಯಾಟ್‌ ರವಾನಿಸಿದ್ದು, ಅದರಲ್ಲಿ 12 ಟೆರಾಬೈಟ್‌ ಮಾಹಿತಿಯನ್ನು ಡೌನ್‌ಲೋಡ್‌ ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry