ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: 6 ಹುಲಿಗಳ ದರ್ಶನ

Last Updated 10 ಜನವರಿ 2018, 4:51 IST
ಅಕ್ಷರ ಗಾತ್ರ

ಮೈಸೂರು: ಹುಲಿ ಗಣತಿಯ ಮೊದಲ ದಿನ ಯಾವುದೇ ಹುಲಿ ಸಿಗದೆ ನಿರಾಶೆಗೆ ಒಳಗಾಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗಣತಿದಾರರಿಗೆ ಮಂಗಳವಾರ 6 ಹುಲಿಗಳು ಕಾಣಿಸಿಕೊಂಡಿವೆ. ಇತ್ತ ನಾಗರಹೊಳೆಯ ವೀರನಹೊಸಹಳ್ಳಿಯಲ್ಲೂ ಹುಲಿಯೊಂದು ಮುಖಾಮುಖಿಯಾಗಿದೆ. ಸೋಮವಾರ ನಾಗರಹೊಳೆಯಲ್ಲಿ ಐದು ಕಾಣಿಸಿದ್ದವು.

ಬಂಡೀಪುರ, ಹಾಗೂ ಹೆಡಿಯಾಲದಲ್ಲಿ ತಲಾ ಒಂದೊಂದು ಹುಲಿಗಳು, ಎನ್.ಬೇಗೂರು ವಲಯದಲ್ಲಿ 4 ಹುಲಿಗಳುಗಣತಿದಾರರಿಗೆ ಕಾಣಿಸಿವೆ. ಉಳಿದಂತೆ, ಬಹುತೇಕ ಕಡೆ ಹುಲಿ ಹೆಜ್ಜೆ ಗುರುತು, ಮಲ ಸಿಕ್ಕಿದೆ.

ಗುಂಡ್ರೆ ವಲಯದಲ್ಲಿ 1 ಚಿರತೆ, ಎನ್.ಬೇಗೂರಿನಲ್ಲಿ 1 ಕರಡಿ, ಕುಂದಕೆರೆಯಲ್ಲಿ 46 ಆನೆಗಳು, ಮಲೆಯೂರಿನಲ್ಲಿ 13 ಸೀಳುನಾಯಿಗಳು ಸೇರಿದಂತೆ ಇತರೆ ವನ್ಯಜೀವಿಗಳು ಕಾಣಿಸಿವೆ. ಕೊಡಗಿನ ಪೊನ್ನಂಪೇಟೆ ಅರಣ್ಯ ಕಾಲೇಜಿನ 24 ವಿದ್ಯಾರ್ಥಿಗಳು ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

ಇವರಲ್ಲಿ 7 ವಿದ್ಯಾರ್ಥಿಗಳನ್ನು ನಾಗರಹೊಳೆ ವಲಯಕ್ಕೆ, 8 ಮಂದಿಯನ್ನು ಕಲ್ಲಹಳ್ಳಿ ವಲಯಕ್ಕೆ, 4 ವಿದ್ಯಾರ್ಥಿಗಳನ್ನು ಮೇಟಿಕುಪ್ಪೆ ವಲಯ ಮತ್ತು 5 ವಿದ್ಯಾರ್ಥಿಗಳನ್ನು ಡಿ.ಬಿ.ಕುಪ್ಪೆ ವಲಯಕ್ಕೆ ನಿಯೋಜಿಸಲಾಗಿದೆ. ಇವರಲ್ಲಿ 8 ಮಂದಿ ವಿದ್ಯಾರ್ಥಿನಿಯರೂ ಇದ್ದಾರೆ.

ಹೊಸ ಅನುಭವ: ‘ಅರಣ್ಯದಲ್ಲಿನ ಅನುಭವ ಅವಿಸ್ಮರಣೀಯ. ಕಾಲ್ನಡಿಗೆ ಚಾರಣಗಳಲ್ಲಿ ತೆರಳಿದ ಅನುಭವಕ್ಕೂ ಅರಣ್ಯದೊಳಗಿನ ಸಂಚಾರಕ್ಕೂ ವಿಭಿನ್ನ ಅನುಭವ ಕಂಡುಕೊಂಡಿದ್ದೇನೆ’ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಲ್ಮಾನ್‌ ಪ್ರತಿಕ್ರಿಯಿಸಿದರು.

‘ಪಠ್ಯದಲ್ಲಿ ಹುಲಿ ಕುರಿತು ಓದಿ ತಿಳಿಯುತ್ತಿದ್ದೆವು, ಈಗ ಸ್ವ ಅನುಭವ ಆಗುತ್ತಿದೆ. ನಮ್ಮ ವ್ಯಾಸಂಗದ ಅವಧಿಯಲ್ಲೇ ಹುಲಿ ಗಣತಿ ಕಾರ್ಯಕ್ಕೆ ಬಂದಿರುವುದು ಖುಷಿ ತಂದಿದೆ. ಅರಣ್ಯದಲ್ಲಿ ನಡೆದು ಹೋಗುವುದು ಒಳ್ಳೆ ಅನುಭವ’ ಎಂದು ಶರಣ್‌ ಬಸಪ್ಪ ತಿಳಿಸಿದರು.

ಗಣತಿಯಲ್ಲಿ ಐಎಎಸ್ ಅಧಿಕಾರಿ ಪಂಕಜ್‌

ಹುಲಿ ಗಣತಿ ಕಾರ್ಯದಲ್ಲಿ ಐಎಎಸ್ ಅಧಿಕಾರಿ ಪಂಕಜ್‌ ಕುಮಾರ್ ಪಾಂಡೆ ಅವರು ಸೇರಿದಂತೆ ವೈದ್ಯರು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ‘ಇವರೆಲ್ಲ ಸ್ವಯಂಸೇವಕರಾಗಿ ಗಣತಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗಣತಿ ಕಾರ್ಯಕ್ಕೆ ಬೇಕಾದ ತರಬೇತಿಯನ್ನು ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT