ತುಂಗಭದ್ರಾ ಅಣೆಕಟ್ಟೆ ನೀರು ಕಾವೇರಿ ಸಮಸ್ಯೆ ಆಗದಿರಲಿ

6

ತುಂಗಭದ್ರಾ ಅಣೆಕಟ್ಟೆ ನೀರು ಕಾವೇರಿ ಸಮಸ್ಯೆ ಆಗದಿರಲಿ

Published:
Updated:

ರಾಯಚೂರು: ‘ತುಂಗಭದ್ರಾ ಅಣೆಕಟ್ಟಿನಿಂದ 2.5 ಟಿಎಂಸಿ ನೀರು ಬಳಕೆ ಮುಂದಾಗಿರುವ ಸರ್ಕಾರದ ನಡೆ ಖಂಡನೀಯ. ಇದನ್ನು ಮುಂದುವರಿಸಿದರೆ ಮತ್ತೊಂದು ಕಾವೇರಿ ವಿವಾದ ಆಗುವುದರಲ್ಲಿ ಸಂದೇಹವಿಲ್ಲ’ ಎಂದು ಕೃಷಿ ಬೆಲೆ ಆಯೋಗದ ಸದಸ್ಯ ಹನುಮಗೌಡ ಬೆಳಗುರ್ಕಿ ಹೇಳಿದರು.

ನಗರದ ಜೆಸಿ ಭವನದಲ್ಲಿ ಟಿಬಿ ಅಣೆಕಟ್ಟು ನೀರು ಹರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಹೋರಾಟಗಳ ರೂಪುರೇಷೆಗಳ ಕುರಿತ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಬಚಾವತ್ ಆಯೋಗ ಪ್ರಕಾರ ಈಗಾಗಲೇ 56 ಟಿಎಂಸಿ ನೀರು ತೆಲಂಗಾಣಕ್ಕೆ ಹಂಚಿಕೆಯಾಗಿದೆ. ಈಗ ಕೊಡುವುದಕ್ಕೆ ಹೆಚ್ಚುವರಿ ನೀರು ಇಲ್ಲ ಎಂದಾದರೆ ಸರ್ಕಾರ ಎಲ್ಲಿಂದ ನೀರು ತಂದು ಕೊಡುತ್ತದೆ. ಒಂದು ವೇಳೆ ಸರ್ಕಾರ ಈ ನೀರು ನೀಡಿದ್ದೇ ಆದಲ್ಲಿ ಬಚಾವತ್ ಆಯೋಗ ಹಾಗೂ ಬ್ರಜೇಶ್ ಕುಮಾರ್ ಆಯೋಗದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದರು.

ಈಗಾಗಲೇ ಅಣೆಕಟ್ಟೆಯಿಂದ ನದಿಪಾತ್ರದ ಜಿಲ್ಲೆಗಳಲ್ಲಿ 100 ಕ್ಕೂ ಅಧಿಕ ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದಕ್ಕಾಗಿ 50 ಟಿಎಂಸಿ ನೀರು ಬೇಕಾಗುತ್ತದೆ. ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ದೊರೆಯುವುದು ದುಸ್ತರವಾಗಿದೆ ಎಂದು ತಿಳಿಸಿದರು.

ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಮಾತನಾಡಿ, ‘ಬೀಸುವ ದೊಣ್ಣೆ ಎಂಬಂತೆ ರೈತರು ಮೌನ ವಹಿಸಬಾರದು. ಸರ್ಕಾರದ ಈ ನಿರ್ಧಾರವನ್ನು ಪ್ರಬಲವಾಗಿ ಎದುರಿಸಬೇಕು. ಸರ್ಕಾರಕ್ಕೆ ಎಚ್ಚರಿಕೆ ಘಂಟೆ ರವಾನೆಯಾಗಬೇಕು. ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದರೆ ಮಾತ್ರ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಆಗುತ್ತದೆ ಎಂದು ಹೇಳಿದರು.

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಮುಖಂಡ ರಜಾಕ್ ಉಸ್ತಾದ್ ಮಾತನಾಡಿ, ಜಲಾಶಯದಿಂದ ರಾಯಚೂರಿನವರೆಗೆ ಕೇವಲ ಒಂದೇ ಸಮನಾಂತರ ಅಣೆಕಟ್ಟು ಇದೆ. ಹಾಗಿದ್ದರೂ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಸರ್ಕಾರದ ನಿರ್ಧಾರದ ವಿರುದ್ಧ ಮೂರು ಜಿಲ್ಲೆಗಳನ್ನು ಏಕಕಾಲಕ್ಕೆ ಬಂದ್ ಮಾಡುವ ಮೂಲಕ ಬಿಸಿ ಮುಟ್ಟಿಸಬೇಕು. ಮುಖ್ಯಮಂತ್ರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಅದೇ ದಿನ ಬಂದ್‌ಗೆ ಕರೆ ನೀಡಬೇಕು ಎಂದು ತಿಳಿಸಿದರು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಹರವಿ ಶಂಕರಗೌಡ, ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಡಾ.ವಿ.ಎ.ಮಾಲಿಪಾಟೀಲ್ ಮಾತನಾಡಿದರು.

ಬೆಂಗಳೂರಿಗೆ ನಿಯೋಗ

ಈ ಭಾಗದ ರೈತ ಮುಖಂಡರೆಲ್ಲ ಬೆಂಗಳೂರಿಗೆ ನಿಯೋಗ ಹೋಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry