ಸ್ವಚ್ಛ ಸರ್ವೇಕ್ಷಣೆಗೆ ರಾಮನಗರ ಸಜ್ಜು

7

ಸ್ವಚ್ಛ ಸರ್ವೇಕ್ಷಣೆಗೆ ರಾಮನಗರ ಸಜ್ಜು

Published:
Updated:
ಸ್ವಚ್ಛ ಸರ್ವೇಕ್ಷಣೆಗೆ ರಾಮನಗರ ಸಜ್ಜು

ರಾಮನಗರ: ರಾಜ್ಯದಾದ್ಯಂತ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಜಿಲ್ಲೆಯ ನಗರ ಪ್ರದೇಶಗಳಲ್ಲಿಯೂ ಈ ಸಮೀಕ್ಷೆ ಆರಂಭಗೊಂಡಿದೆ. ಇಲ್ಲಿನ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳನ್ನು ಈ ಪ್ರಕ್ರಿಯೆಯು ಸತ್ವ ಪರೀಕ್ಷೆಗೆ ಒಳಪಡಿಸಲಿದೆ.

ನಗರಾಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಇದೇ ತಿಂಗಳ 4ರಿಂದ ಈ ಸಮೀಕ್ಷೆಗೆ ಚಾಲನೆ ದೊರೆತಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆಯ ಮಾಪನ ಕಾರ್ಯ ನಡೆಯಲಿದೆ. ಈ ಬಾರಿ ಒಟ್ಟು 4,014 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಏಕಕಾಲಕ್ಕೆ ಈ ಕಾರ್ಯ ನಡೆಯುತ್ತಿರುವುದು

ವಿಶೇಷ. ಜಿಲ್ಲೆಯ ರಾಮನಗರ, ಕನಕಪುರ, ಚನ್ನಪಟ್ಟಣ ನಗರಸಭೆ ಮತ್ತು ಮಾಗಡಿ, ಬಿಡದಿ ಪುರಸಭೆಯ ವ್ಯಾಪ್ತಿಯಲ್ಲಿ ಈ ಸರ್ವೇಕ್ಷಣೆ ಕಾರ್ಯನಡೆಯಲಿದೆ.

ಹತ್ತಾರು ಸವಾಲು: ರಾಮನಗರವೂ ಸೇರಿದಂತೆ ಇಲ್ಲಿನ ಐದೂ ನಗರ ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಯ ವಿಷ ಯದಲ್ಲಿ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಕಸದ ಸಂಗ್ರಹಣೆ ಮತ್ತು ವಿಲೇ ವಾರಿಯು ಇಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ. ಈವರೆಗೆ ಈ ಯಾವ ಪಟ್ಟಣಗಳಿಗೂ ಕಸ ವಿಲೇವಾರಿಗೆ ಸೂಕ್ತ ಜಾಗ ನಿಗದಿಯಾಗಿಲ್ಲ. ಇದಕ್ಕೆ ಜಾಗ ಗುರುತಿಸಿಕೊಡಲು ಜಿಲ್ಲಾಡಳಿತ ವಿಫಲವಾಗಿದೆ. ಅಧಿಕಾರಿಗಳು ಗುರುತಿ ಸಿದ ಜಾಗದಲ್ಲಿ ಕಸ ಸುರಿಯಲು ಸಾರ್ವಜನಿಕರು ಬಿಡುತ್ತಿಲ್ಲ. ರಾಮ ನಗರದಲ್ಲಿ ಇಂದಿಗೂ ಅರ್ಕಾವತಿ ನದಿಯ ದಂಡೆಯಲ್ಲಿಯೇ ತ್ಯಾಜ್ಯ ಸುರಿದು ಸುಡಲಾಗುತ್ತಿದೆ. ಇದರಿಂದ ಏಕ ಕಾಲಕ್ಕೆ ಜಲ, ವಾಯು ಹಾಗೂ ಭೂಮಾಲಿನ್ಯವೂ ಆಗುತ್ತಿದೆ.

ಮನೆಮನೆಗಳಲ್ಲಿ ಕಸ ಸಂಗ್ರಹಣೆ ಅಷ್ಟು ಸಮರ್ಪಕವಾಗಿ ಇಲ್ಲ. ಹೋಟೆಲ್‌–ರೆಸ್ಟೋರೆಂಟುಗಳ ತ್ಯಾಜ್ಯ ಬೀದಿಗೆ ಬೀಳುತ್ತಿದೆ. ಆರಂಭದ ಹಂತದಲ್ಲಿಯೇ ಹಸಿ, ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸುವ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ. ಕೆಲವು ಕಡೆ ವಾರ್ಡ್‌ವಾರು ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿಕೊಂಡಿದ್ದರೂ ಅವುಗಳ ಕಾರ್ಯವೈಖರಿ ಹೇಳಿ ಕೊಳ್ಳುವಂತೆ ಇಲ್ಲ. ಇಂದಿಗೂ ಪಟ್ಟಣ ಪ್ರದೇಶಗಳ ಹಲವು ಕಡೆ ಒಳಚರಂಡಿ ನೀರು ನದಿಗೆ ಸೇರುತ್ತಲೇ ಇದೆ.

ಜಿಲ್ಲೆಯು ತಿಂಗಳುಗಳ ಹಿಂದಷ್ಟೇ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿದೆ. ಆದರೆ, ನಗರದ ಒಳಗಿನ ಕೆಲವು ಕಾಲೊನಿ ಗಳಲ್ಲಿಯೇ ಇನ್ನೂ ಕೆಲವರು ಶೌಚಕ್ಕೆ ಬಯಲು ಆಶ್ರಯಿಸಿದ್ದಾರೆ. ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ನಿರ್ವಹಣೆಯಲ್ಲಿ ನಗರ ಸಭೆಗಳು ಎಡವಿವೆ. ಜನಸಂಖ್ಯೆಗೆ ಅಗತ್ಯವಾದಷ್ಟು ಶೌಚಾಲಯಗಳು ನಿರ್ಮಾಣವಾಗಿಲ್ಲ ಎಂದು ದೂರುತ್ತಾರೆ ಐಜೂರು ನಿವಾಸಿ ಶಂಕರ್. ಎಲ್ಲ ಕಡೆಯಲ್ಲಿಯೂ ಸ್ವಚ್ಛತೆಯ ಕೊರತೆ ಇದೆ. ಜನರಲ್ಲೂ ಈ ಬಗ್ಗೆ ಜಾಗೃತಿ ಕಡಿಮೆ. ಇವುಗಳ ಬಗ್ಗೆ ನಗರಸಭೆಗಳು ಇನ್ನೂ ಗಮನ ಹರಿಸಬೇಕಿದೆ ಎನ್ನುತ್ತಾರೆ ಅವರು.

ಯಾವುದು ಧನಾತ್ಮಕ: ಸ್ವಚ್ಛತಾ ವ್ಯವಸ್ಥೆಯ ಸುಧಾರಣೆಗೆ ಸ್ಥಳೀಯ ಸಂಸ್ಥೆಗಳು ಜಾರಿಗೆ ತಂದಿರುವ ಕೆಲವೇ ಯೋಜನೆಗಳು ಸಮೀಕ್ಷೆಯಲ್ಲಿ ಒಂದಿಷ್ಟು ಅಂಕ ತಂದು ಕೊಡಲಿವೆ. ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಚರಂಡಿ ನೀರು ಶುದ್ಧೀಕರಣ ಘಟಕ ಕಾರ್ಯಾರಂಭ ಮಾಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಇದರ ಜೊತೆ ತ್ಯಾಜ್ಯ ಬಳಸಿ ಬಯೋ ಗ್ಯಾಸ್‌ ಉತ್ಪಾದನೆಗೆ ನಗರಸಭೆ ಮುಂದಾಗಿದ್ದು, ಅದರಿಂದ ಬೀದಿದೀಪ ಬೆಳಗುವ ಯೋಜನೆಯನ್ನೂ ಹಮ್ಮಿಕೊಂಡಿದೆ. ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ಸಂಪೂರ್ಣ ಯಾಂತ್ರೀಕೃತ ವ್ಯವಸ್ಥೆ ಅಳವಡಿಸಿಕೊಂಡಿರುವುದು ಗಮನ ಸೆಳೆಯಲಿದೆ.

ಕನಕಪುರದಲ್ಲಿ ಈಗಾಗಲೇ ಇ–ಶೌಚಾಲಯಗಳ ಬಳಕೆ ಆರಂಭ ವಾಗಿದೆ. ಜಿಲ್ಲೆಯಲ್ಲಿ ನಗರ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳಲ್ಲಿನ ಶೌಚಾಲಯ ಸಾರ್ವಜನಿಕ ಸೇವೆಗೆ ಮುಕ್ತ ಗೊಳಿಸಲಾಗಿದೆ. ಇದು ಸಾರ್ವಜನಿಕ ಶೌಚ ವ್ಯವಸ್ಥೆ ಸುಧಾರ ಣೆಯಲ್ಲಿ ಉತ್ತಮ ಹೆಜ್ಜೆಯಾಗಿದೆ. ಪೌರ ಕಾರ್ಮಿಕರಿಗೆ ಆರೋಗ್ಯ ಶಿಬಿರ ಆಯೋಜನೆ, ಸಿಂಗಪುರ ಪ್ರವಾಸದಂತಹ ಯೋಜನೆ ಗಳು ‘ಸಾಮರ್ಥ್ಯ ಬಲವರ್ಧನೆ’ ವಿಭಾಗದಲ್ಲಿ ಹೆಚ್ಚು ಅಂಕ ತಂದು ಕೊಡಲಿವೆ.

ಮೂರು ಹಂತದ ಸಮೀಕ್ಷೆ

ಒಟ್ಟು ಮೂರು ಮಾದರಿಯಲ್ಲಿ ಈ ಸರ್ವೇಕ್ಷಣೆ ಕಾರ್ಯವು ನಡೆಯಲಿದೆ. ಮೊದಲ ಹಂತದಲ್ಲಿ ಕೇಂದ್ರದ ಅಧಿಕಾರಿಗಳ ತಂಡವು ಖುದ್ದು ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನಂತರದಲ್ಲಿ ಇಲ್ಲಿನ ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ಸೇವಾ ವಲಯದಲ್ಲಿನ ಪ್ರಗತಿಯನ್ನು ಒರೆಗೆ ಹಚ್ಚಲಿದೆ. ಈ ಎಲ್ಲ ಪರೀಕ್ಷೆಗಳಿಗೂ ಒಟ್ಟು 4ಸಾವಿರ ಅಂಕ ನಿಗದಿಯಾಗಿದ್ದು, ಹೆಚ್ಚಿನ ಅಂಕ ಪಡೆಯುವವರಿಗೆ ಅಗ್ರ ಶ್ರೇಯಾಂಕ ದೊರೆಯಲಿದೆ.

ಏನೆಲ್ಲ ಪರಿಶೀಲನೆ: ಸ್ಥಳೀಯ ಸಂಸ್ಥೆಗಳು ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಕೈಗೊಂಡಿರುವ ಕ್ರಮಗಳು, ಸಂಸ್ಕರಣೆ, ಹೊಸ ತಂತ್ರಜ್ಞಾನದ ಬಳಕೆ ಎಲ್ಲವನ್ನೂ ಅಧ್ಯಯನ ತಂಡವು ಗಮನಿಸಲಿದೆ.

ಇಲ್ಲಿನ ಕಾಲೊನಿಗಳು, ಮಾರುಕಟ್ಟೆ, ಬಸ್‌–ರೈಲು ನಿಲ್ದಾಣ, ಹೋಟೆಲ್‌–ರೆಸ್ಟೋರೆಂಟ್, ದೇವಸ್ಥಾನ.. ಹೀಗೆ ಎಲ್ಲ ಕಡೆಯೂ ಈ ಅಧ್ಯಯನವು ನಡೆಯಲಿದೆ. ಒಳಚರಂಡಿ ವ್ಯವಸ್ಥೆ, ವೈಯಕ್ತಿಕ ಶೌಚಾಲಯ ಬಳಕೆ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಎಲ್ಲವೂ ಪರಿಶೀಲನೆಗೆ ಒಳಪಡಲಿದೆ.

* * 

ರಾಮನಗರದ ಐಜೂರು ವೃತ್ತದಲ್ಲಿ ಬೆಳಿಗ್ಗೆ ರಸ್ತೆಯಲ್ಲಿಯೇ ಕಸದ ರಾಶಿ ಬಿದ್ದಿರುತ್ತದೆ. ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

ರಮೇಶ್, ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry