ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ಕ್ಕೆ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

Last Updated 10 ಜನವರಿ 2018, 5:15 IST
ಅಕ್ಷರ ಗಾತ್ರ

ಶಿವಮೊಗ್ಗ: ಮೊದಲ ಸುತ್ತಿನ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಜ. 28ರಂದು ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯಲ್ಲಿ  18,07,848 ಜನಸಂಖ್ಯೆ ಇದ್ದು, ಅದರಲ್ಲಿ 5 ವರ್ಷದ ಒಳಗಿರುವ ಗ್ರಾಮೀಣ ಪ್ರದೇಶದ 95,765 ಹಾಗೂ ನಗರ ಪ್ರದೇಶದ 50,460 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಆಂದೋಲನದ ಯಶಸ್ಸಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಬೇಕು. ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ವೈದ್ಯಾಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.

ಅಭಿಯಾನಕ್ಕಾಗಿ 1,033 ಬೂತ್‌ಗಳನ್ನು ಹಾಗೂ 2,066 ತಂಡಗಳನ್ನು ರಚಿಸಲಾಗಿದೆ. ಈ ಲಸಿಕೆ ಹಾಕುವ ದಿನ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತರಲು ಶಾಲಾ ಮಕ್ಕಳು, ಶಿಕ್ಷಕರು, ಅಂಗನ ವಾಡಿ ಕಾರ್ಯಕರ್ತೆಯರು, ಇತರೆ ಸೇವಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮ ಪಂಚಾಯ್ತಿ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ, ನಗರಸಭೆ ಕಾರ್ಯದರ್ಶಿಗಳು ಮತ್ತು ಗ್ರಾಮಲೆಕ್ಕಿಗರ ಸಹಕಾರ ಪಡೆಯಲಾಗುವುದು ಎಂದರು.

ಕಾರ್ಯಕ್ರಮದ ವ್ಯವಸ್ಥಿತ ಅನುಷ್ಠಾನ ಕ್ಕಾಗಿ 163 ಉಸ್ತುವಾರಿ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸುವರು. ಮೊದಲ ಸುತ್ತಿಗೆ ಬೇಕಾಗಬಹುದಾದ 1,77,184 ಡೋಸ್ ಲಸಿಕೆ ಹಾಗೂ ಅಗತ್ಯ ವಾಹನ ಸೌಲಭ್ಯ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ: ಫೆ. 12ರಂದು ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಆಚರಿಸಲಾಗುವುದು. ಜಂತುಹುಳು ಬಾಧಿತ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ತುಂಬಾ ಕುಂಠಿತಗೊಳ್ಳುತ್ತದೆ. ಹಾಗಾಗಿ, ಈ ಅವಧಿಯಲ್ಲಿ ಮಕ್ಕಳ ಆರೋಗ್ಯದ ಕುರಿತು ಪೋಷಕರಿಗೆ ಅಗತ್ಯ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

1ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಾಲೆ ಮತ್ತು ಅಂಗನವಾಡಿಗಳಲ್ಲಿ ಜಂತುಹುಳ ನಿವಾರಣಾ ಮಾತ್ರೆ ಉಚಿತವಾಗಿ ನೀಡಲಾಗುವುದು. ದಾಖಲಾಗದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಜಂತುಹುಳ ನಿವಾರಣಾ ಮಾತ್ರೆ ನೀಡಲಾಗುವುದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹನುಮಂತಪ್ಪ, ಡಾ.ನಟರಾಜ್, ಡಾ.ನಾರಾಯಣ್ ಉಪಸ್ಥಿತರಿದ್ದರು.

* * 

ಪಲ್ಸ್‌ಪೋಲಿಯೊ ಅಭಿಯಾನದ ಯಶಸ್ಸಿಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ವರ್ಷದ ಒಳಗಿನ ಪ್ರತಿಮಕ್ಕಳಿಗೂ ಲಿಸಿಕೆ ಹಾಕಲಾಗುವುದು
ಕೆ.ಚನ್ನಬಸಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT