ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆಗೆ ಅಮಿತ್‌ ಷಾ ಆಗಮನ ಇಂದು

Last Updated 10 ಜನವರಿ 2018, 5:18 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜ.10ರಂದು ಮಧ್ಯಾಹ್ನ 12ಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದ ಸಿದ್ಧತೆಗಳು ಪೂರ್ಣಗೊಂಡಿವೆ.

ಕಾಲೇಜಿನ ಮೈದಾನದಲ್ಲಿ ನಿರ್ಮಿಸಿರುವ ವಿಶಾಲ ಶಾಮಿಯಾನದ ಕೆಳಗೆ ಸುಮಾರು 40 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಶಾಮಿಯಾನದ ಕಂಬಗಳಿಗೆ ಬಿಜೆಪಿಯ ಗುರುತಾದ ಕಮಲದ ಚಿತ್ರವಿರುವ ಬಾವುಟಗಳನ್ನು ಕಟ್ಟಲಾಗಿದೆ. ವೇದಿಕೆಯ ಹೊರಭಾಗದಲ್ಲಿ ಪಕ್ಷದ ಚಿಹ್ನೆ ಇರುವ ಬಂಟಿಂಗ್ಸ್ ಕಟ್ಟಲಾಗಿದೆ. ವೇದಿಕೆಯ ಮೇಲೆ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ವೇದಿಕೆಯ ಮುಂಭಾಗ ಪಕ್ಷದ ಮುಖಂಡರು, ನಾಯಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ನಗರದ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ಸುಮಾರು 3 ಕಿ.ಮೀವರೆಗೆ ರಾಜ್ಯ, ರಾಷ್ಟ್ರ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಪಟ್ಟಣದ ನಾಲ್ಕು ಕಡೆ ಬಿಜೆಪಿ ನಾಯಕರ ಭಾವಚಿತ್ರಗಳಿರುವ ಬೃಹತ್ ಬಲೂನುಗಳನ್ನು ಹಾರಿ ಬಿಡಲಾಗಿದೆ.

500 ಬಸ್ ವ್ಯವಸ್ಥೆ: ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ಜನರನ್ನು ಕರೆತರಲು ಸುಮಾರು 500 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಜವಾಬ್ದಾರಿ ಹೊತ್ತಿರುವ ಮಾಜಿ ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ.

‘ಅಮಿತ್ ಷಾ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮಾತುಗಳನ್ನು ಕೇಳಲು ಜನ ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ. ಸುಮಾರು 200 ಟಾಟಾ ಏಸ್‌, ಒಂದು ಸಾವಿರ ಕಾರು, ಕನಿಷ್ಠ 10 ಸಾವಿರ ಬೈಕ್‌ಗಳಲ್ಲಿ ಜನ ಬರಲಿದ್ದಾರೆ. ತಾಲ್ಲೂಕಿನ ಜನ ಸೇರಿದಂತೆ, ಪಕ್ಕದ ಹೊಸದುರ್ಗ, ಚಿತ್ರದುರ್ಗ, ಚನ್ನಗಿರಿ, ಮಾಯಕೊಂಡ, ತರಿಕೆರೆ ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಅವರು ಮಾಹಿತಿ ನೀಡಿದರು.

ಕುತೂಹಲ ಮೂಡಿಸಿದ ಷಾ ತಂತ್ರ

ಅಮಿತ್ ಷಾ ಅವರು ಜಿಲ್ಲಾ ಕೇಂದ್ರವನ್ನು ಬಿಟ್ಟು, ತಾಲ್ಲೂಕು ಕೇಂದ್ರದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿದ್ದು ಬಿಜೆಪಿಯ ಶಾಸಕರಿದ್ದರೂ, ಅಲ್ಲಿನ ಸಮಾವೇಶವನ್ನು ಬಿಟ್ಟು ಪಕ್ಷದ ಮಾಜಿ ಶಾಸಕರಿರುವ ತಾಲ್ಲೂಕು ಕೇಂದ್ರವನ್ನು ಷಾ ಆಯ್ಕೆ ಮಾಡಿಕೊಂಡಿದ್ದಾರೆ. ಬಿಜೆಪಿಯ ‘ಚಾಣಕ್ಯ’ ಎಂದೇ ಹೆಸರಾಗಿರುವ ಷಾ ಅವರು ಚುನಾವಣಾ ತಂತ್ರ ರೂಪಿಸಿರುವುದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಕಾರ್ಯಕ್ರಮದ ಯಶಸ್ಸಿಗೆ ಮಾಜಿ ಶಾಸಕ ಎಂ.ಚಂದ್ರಪ್ಪ ಶ್ರಮಿಸುತ್ತಿದ್ದಾರೆ. ಒಂದು ವಾರದಿಂದ ಅವರ ಮೇಲುಸ್ತುವಾರಿಯಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಚಂದ್ರಪ್ಪ ಅವರ ಮಕ್ಕಳಾದ ರಘು ಚಂದನ್, ದೀಪ್ ಚಂದನ್ ಕೂಡ ಸಾಥ್ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT