ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಪರಿವರ್ತನೆಗೆ ಸದಸ್ಯರ ಆಕ್ಷೇಪ

Last Updated 10 ಜನವರಿ 2018, 5:19 IST
ಅಕ್ಷರ ಗಾತ್ರ

ಸಾಗರ: ಗಣಪತಿ ಕೆರೆ ಪಕ್ಕದ ಚಂದ್ರಮಾವಿನಕೊಪ್ಪಲು ಪ್ರದೇಶದ ಕೃಷಿ ಭೂಮಿಯನ್ನು ಹಸಿರು ವಲಯದಿಂದ ಹಳದಿ ವಲಯಕ್ಕೆ ಪರಿವರ್ತಿಸಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವ ಸಂಬಂಧ ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಸಭೆಯ ಆರಂಭದಲ್ಲಿ ಚಂದ್ರಮಾವಿನಕೊಪ್ಪಲು ಪ್ರದೇಶದ 25 ಎಕರೆ ಪ್ರದೇಶದ ಕೃಷಿ ಭೂಮಿಯನ್ನು ಹಸಿರು ವಲಯದಿಂದ ಹಳದಿ ವಲಯಕ್ಕೆ ಪರಿವರ್ತಿಸಿ ಭೂ ಉಪಯೋಗ ಮಾಡಲು ನಿರಾಕ್ಷೇಪಣಾ ಪತ್ರ ಕೋರಿ ಬಂದ ಅರ್ಜಿಯ ವಿಷಯವನ್ನು ಸಭೆಗೆ ತಂದಿದ್ದಕ್ಕೆ ವಿರೋಧ ಪಕ್ಷವಾಗಿರುವ ಬಿಜೆಪಿಯ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಹಿಂದಿನ ಸಭೆಯಲ್ಲಿ ಈ ವಿಷಯ ಚರ್ಚಿಸಿದಾಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೊಂದಿಗೆ ಸಮಾಲೋಚಿಸಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಭೆಗೆ ವಿಷಯ ತರಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದರು. ಈ ಸಂಬಂಧ ಸಚಿವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಸಿ’ ಎಂದು ವಿರೋಧ ಪಕ್ಷದ ಸದಸ್ಯರಾದ ಸಂತೋಷ್‌ ಆರ್‌.ಶೇಟ್‌, ಎಸ್‌.ಎಲ್‌.ಮಂಜುನಾಥ್‌, ಆರ್.ಶ್ರೀನಿವಾಸ್‌, ಅರವಿಂದ್ ರಾಯ್ಕರ್‌ ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಬೀಬಿ ಫಸಿಯಾ,  ಕಾನೂನಿನ ಪ್ರಕಾರ ನಿರಾಕ್ಷೇಪಣಾ ಪತ್ರ ನೀಡಲು ಅವಕಾಶವಿದ್ದರೆ ಕೊಡಿ ಎಂದು ಸಚಿವರು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಆಡಳಿತ ಪಕ್ಷದ ಸದಸ್ಯ ಐ.ಎನ್‌.ಸುರೇಶ್‌ಬಾಬು ಮಾತನಾಡಿ, ‘ಕಳೆದ ಸಭೆಯಲ್ಲಿ ಚರ್ಚೆಯಾಗಿರುವ ವಿಷಯವನ್ನು ಓದಿ ದಾಖಲು ಮಾಡದೆ ಮತ್ತೆ ಅದೇ ವಿಷಯವನ್ನು ಸಭೆಗೆ ತರಲು ಕಾನೂನಿನ ನಿಯಮಾವಳಿಗಳ ಪ್ರಕಾರ ಅವಕಾಶ ಇಲ್ಲ’ ಎಂದು ತಕರಾರು ತೆಗೆದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಸುಂದರ್‌ ಸಿಂಗ್‌, ಪುರಸಭೆ ಕಾಯ್ದೆಯಲ್ಲಿರುವ ಸಂಬಂಧಪಟ್ಟ ಕಲಂ ಅನ್ನು ಸಭೆಗೆ ಓದಿ ತಿಳಿಸಿದರು.

‘ಚಂದ್ರಮಾವಿನಕೊಪ್ಪಲು ಭೂಮಿ ವಿಷಯ ಕಳೆದ ಸಭೆಯಲ್ಲಿ ತೀರ್ಮಾನ ಆಗಿರಲಿಲ್ಲ. ಮುಂದಿನ ಸಭೆಗೆ ವಿಷಯ ತರಬೇಕು ಎಂದು ತೀರ್ಮಾನಿಸಿದ್ದರಿಂದ ಈ ಸಭೆಯಲ್ಲಿ ವಿಷಯ ತರಲಾಗಿದೆ’ ಎಂದು ಆಯುಕ್ತ ಎಸ್‌.ರಾಜು ಸ್ಪಷ್ಟಪಡಿಸಿದರು.

ಸುಂದರ್‌ಸಿಂಗ್‌ ಮಾತನಾಡಿ, ‘ಗಣಪತಿ ಕೆರೆ ಈಗಾಗಲೇ ಸಾಕಷ್ಟು ಒತ್ತುವರಿಯಾಗಿದೆ. ಅದರ ಪಾರ್ಶ್ವದಲ್ಲೇ ಇರುವ ಚಂದ್ರಮಾವಿನಕೊಪ್ಪಲು ಪ್ರದೇಶವನ್ನು ನಾವು ಉಳಿಸಿಕೊಳ್ಳದಿದ್ದರೆ ಗಣಪತಿ ಕೆರೆ ಸಂಪೂರ್ಣವಾಗಿ ನಾಶವಾಗುತ್ತದೆ. ಹೀಗಾಗಿ ಅಲ್ಲಿನ ಪ್ರದೇಶವನ್ನು ನಗರಸಭೆ ಸ್ವಾಧೀನಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಬೆಂಬಲ ಸೂಚಿಸಿದ ಸಂತೋಷ್ ಶೇಟ್‌, ‘ಕೆರೆಯ ಪಕ್ಕದಲ್ಲಿ ಇರುವುದರ ಜೊತೆಗೆ ವರದಾ ನದಿಯ ಒಡಲು ಕೂಡ ಇದೆ. ಈ ಪ್ರದೇಶವನ್ನು ವ್ಯವಸಾಯೇತರ ಉದ್ದೇಶಕ್ಕೆ ಬಳಸಲು ಅನುಮತಿ ನೀಡಿದರೆ ದೊಡ್ಡ ತಪ್ಪು ಮಾಡಿದಂತಾಗುತ್ತದೆ’ ಎಂದರು.

‘ಈಗಾಗಲೇ ಅನೇಕ ಗೇಣಿ ರೈತರು ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಕೆಲವು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ರೈತರ ಮೂಗಿಗೆ ತುಪ್ಪ ಸವರಿ ಬೆಲೆ ಬಾಳುವ ಜಮೀನನ್ನು ಕಬಳಿಸಲು ಸಂಚು ಮಾಡಿದ್ದಾರೆ. ಇದಕ್ಕೆ ನಾವು ನೆರವು ನೀಡಬಾರದು’ ಎಂದು ಹೇಳಿದರು.

ಆಡಳಿತ ಪಕ್ಷದ ಸದಸ್ಯ ಎನ್‌.ಶ್ರೀನಾಥ್‌ ಮಾತನಾಡಿ, ‘ಬಿಜೆಪಿ ಸದಸ್ಯರು ಗೇಣಿ ರೈತರ ಬಗ್ಗೆ ಈಗ ಕಾಳಜಿ ತೋರುತ್ತಿದ್ದಾರೆ. ಆದರೆ, ಅವರು ಅಧಿಕಾರದಲ್ಲಿದ್ದಾಗ ಅಪಾರ ಪ್ರಮಾಣದಲ್ಲಿ ಗೇಣಿ ರೈತರ ಭೂಮಿಯನ್ನು ವ್ಯವಸಾಯೇತರ ಉದ್ದೇಶಕ್ಕೆ ಬಳಸಲು ಅನುಮತಿ ನೀಡಿದ್ದಾರೆ. ರೈತರ ಬಗ್ಗೆ ಆಗ ಇಲ್ಲದ ಕಾಳಜಿ ಈಗ ಏಕೆ’ ಎಂದು ಆಕ್ಷೇಪಿಸಿದರು.

‘ನಗರದ ಭದ್ರಕಾಳಿ ದೇವಸ್ಥಾನಕ್ಕೆ ಸಂಬಂಧಪಟ್ಟ ಭೂಮಿಯನ್ನು ವ್ಯವಸಾಯೇತರ ಉದ್ದೇಶಕ್ಕೆ ಬಳಸಲು ಅನುಮತಿ ನೀಡಲು ಬರುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಿ ನಂತರ ಪ್ರಭಾವಿಗಳ ಒತ್ತಾಯಕ್ಕೆ ಮಣಿದು ನಿರ್ಧಾರವನ್ನು ಬದಲಿಸಲಾಯಿತು’ ಎಂದು ಆಡಳಿತ ಪಕ್ಷದ ಸದಸ್ಯ ಆರ್‌.ಗಣಾಧೀಶ ಹೇಳಿದ್ದು ವಿಪಕ್ಷ ಸದಸ್ಯರನ್ನು ಕೆರಳಿಸಿತು.

‘ಯಾವ ಪ್ರಭಾವಿಗಳಿಂದ ನಿರ್ಣಯ ಬದಲಾಯಿತು ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಪಟ್ಟುಹಿಡಿದರು. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಆಶ್ರಯ ನಿವೇಶನ ವಿತರಣೆಗಾಗಿ ಅರ್ಜಿ ಕರೆಯಲಾಗಿದ್ದು, ಈ ಬಗ್ಗೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡದೆ ಇರುವುದಕ್ಕೆ ವಿಪಕ್ಷ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಅರ್ಜಿ ಸ್ವೀಕರಿಸುವ ದಿನಾಂಕವನ್ನು ಜ.20ವರೆಗೆ ಮುಂದೂಡಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT