ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಬೆಲೆ ಕುಸಿತ; ರೈತರ ಆಕ್ರೋಶ

Last Updated 10 ಜನವರಿ 2018, 5:43 IST
ಅಕ್ಷರ ಗಾತ್ರ

ಶಿರಾ : ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ತೊಗರಿ ಬೆಲೆ ಕುಸಿದಿದ್ದರಿಂದ ರೈತರು ಆಕ್ರೋಶ ವ್ಯಕ್ತ ಪಡಿಸಿದರು. ಎಪಿಎಂಸಿ ಮಾರುಕಟ್ಟೆಗೆ ನಿರೀಕ್ಷೆಗೆ ಮೀರಿ ತೊಗರಿ ಬಂದ ಹಿನ್ನೆಲೆಯಲ್ಲಿ ಬೆಲೆ ಕುಸಿತ ಉಂಟಾಗಿದೆ. ಸರ್ಕಾರ ₹ 5,450 ಬೆಲೆ ನಿಗದಿ ಮಾಡಿದ್ದರೂ ಸಹ ಮಂಗಳವಾರ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ₹ 2,200ರಿಂದ ₹ 3,400 ದರ ನಿಗದಿಯಾಗಿರುವುದರಿಂದ ರೈತರು ಆಕ್ರೋಶ ವ್ಯಕ್ತ ಪಡಿಸಿದರು. ರೈತ ಸಂಘದ ಮುಖಂಡರು ಮಧ್ಯೆ ಪ್ರವೇಶಿಸಿ ರೈತರಿಗೆ ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಧನಂಜಯಾರಾಧ್ಯ, ‘ದಲ್ಲಾಳಿಗಳು ಮತ್ತು ಖರೀದಿದಾರರ ಅಪವಿತ್ರ ಮೈತ್ರಿಯಿಂದಾಗಿ ಮಾರುಕಟ್ಟೆಗೆ ಬೇರೆ ಕಡೆಯಿಂದ ಖರೀದಿದಾರರು ಬರದೇ ಇರುವುದರಿಂದ ದರ ಕುಸಿಯುವಂತಾಗಿದೆ. ದಲ್ಲಾಲಿಗಳು ರೈತರಿಂದ ತೊಗರಿಯನ್ನು ತಾವೇ ಖರೀದಿ ಮಾಡಿ ಬಿಳಿ ಚೀಟಿ ಕೊಡುತ್ತಾರೆ ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

ರೈತರ ಆಕ್ರೋಶ ಹೆಚ್ಚಾದ ಕಾರಣ ಎಪಿಎಂಸಿ ಕಾರ್ಯದರ್ಶಿ ಜಯಣ್ಣ ಅವರು ರೈತ ಮುಖಂಡರು ಹಾಗೂ ಮಂಡಿ ವರ್ತಕರ ಜತೆ ಸಭೆ ನಡೆಸಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ರೈತರು ತಂದ ತೊಗರಿಯನ್ನು ನೆಲದ ಮೇಲೆ ಸುರಿಯಬಾರದು. ರೈತರಿಗೆ ಟೆಂಡರ್ ದರ ಒಪ್ಪಿಗೆಯಾಗದಿದ್ದರೆ ವಾಪಸು ತೆಗೆದುಕೊಂಡು ಹೋಗಲು ಬಿಡಬೇಕು ಹಾಗೂ ಕ್ವಿಂಟಾಲ್‌ಗೆ  ₹ 2800 ನೀಡಲು ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT