ಕಾರ್ಮಿಕರ ಹೆಸರು ನೋಂದಣಿ ಮಾಡದ ಗುತ್ತಿಗೆದಾರು: ರವೀಂದ್ರನಾಥ ಶಾನುಭಾಗ್

7

ಕಾರ್ಮಿಕರ ಹೆಸರು ನೋಂದಣಿ ಮಾಡದ ಗುತ್ತಿಗೆದಾರು: ರವೀಂದ್ರನಾಥ ಶಾನುಭಾಗ್

Published:
Updated:

ಉಡುಪಿ: ಗುತ್ತಿಗೆದಾರರು ಕಾರ್ಮಿಕರ ಹೆಸರನ್ನು ನೋಂದಣಿ ಮಾಡಿಸದ ಪರಿಣಾಮ, ಅವಘಡಗಳು ಸಂಭವಿಸಿದಾಗ ಅವರಿಗೆ ಪರಿಹಾರ ಸಿಗುತ್ತಿಲ್ಲ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣ, ಸೆಂಟ್ರಿಂಗ್, ಪೇಂಟಿಂಗ್ ಮುಂತಾದ ಕೆಲಸ ಮಾಡಿಸುವ ನೂರಾರು ಮಂದಿ ಗುತ್ತಿಗೆದಾರರು ಇದ್ದಾರೆ. ನಿಯಮದಂತೆ ಗುತ್ತಿಗೆದಾರರು ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರ ಪಟ್ಟಿಯನ್ನು ಕಾರ್ಮಿಕ ಇಲಾಖೆಗೆ ನೀಡಿ ನೋಂದಣಿ ಮಾಡಿಸಬೇಕು. ಅವಘಡಗಳು ಸಂಭವಿಸಿ ಕಾರ್ಮಿಕರು ಮೃತಪಟ್ಟರೆ ಇಲಾಖೆಯಿಂದ ₹2 ಲಕ್ಷ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಆದರೆ ಹೆಚ್ಚಿನ ಗುತ್ತಿಗೆದಾರರಿಗೆ ಈ ವಿಷಯವೇ ಗೊತ್ತಿಲ್ಲ. ಆದ್ದರಿಂದ ಕಾರ್ಮಿಕರ ಕುಟುಂಬಗಳು ಸೌಲಭ್ಯ ವಂಚಿತವಾಗುತ್ತಿವೆ. ಈ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳಬೇಕು. ಎಲ್ಲ ಗುತ್ತಿಗೆದಾರರನ್ನು ನೋಂದಣಿ ಮಾಡಿಸಬೇಕು ಎಂದು ಅವರು ಆಗ್ರಹಿಸಿದರು.

ಪಡುಬಿದ್ರಿಯ ಕಂಚಿನಡ್ಕದ ಶ್ರೀಕಾಂತ್‌ ಪಡುಬಿದ್ರಿ ಎಂಬ 25 ವರ್ಷದ ಯುವಕ ಕೇಶವ ಎಂಬ ಗುತ್ತಿಗೆದಾರನೊಂದಿಗೆ ಕೆಲಸ ಮಾಡುತ್ತಿದ್ದ. ಕಟ್ಟಡ ಮೇಲ್ಚಾವಣಿ ಕುಸಿದು ಬಿದ್ದ ಕಾರಣ ಆತ ಮೃತಪಟ್ಟಿದ್ದ. ಈ ಬಗ್ಗೆ ಗುತ್ತಿಗೆದಾರ ವಿರುದ್ಧ ದಾಖಲಾಗಿದ್ದ ಪ್ರಕರಣ ಸಾಕ್ಷ್ಯಗಳಿಲ್ಲದ ಕಾರಣ ವಜಾ ಆಗಿದೆ. ಪರಿಹಾರವೂ ಆತನಿಗೆ ಸಿಕ್ಕಿಲ್ಲ. ಶ್ರೀಕಾಂತ್ ಅವರ ಪತ್ನಿ ಮೋನಿಕ ಮತ್ತು ಅಮ್ಮ ಅಪ್ಪಿ ಅವರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಪರಿಹಾರಕ್ಕಾಗಿ ಕಾರ್ಮಿಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು. ಆದರೆ ಕಾರ್ಮಿಕರು ಮತ್ತು ಗುತ್ತಿಗೆದಾರರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು. ಮೋನಿಕ, ಅಪ್ಪಿ ಉಪಸ್ಥಿತರಿದ್ದರು.

* * 

ಗುತ್ತಿಗೆದಾರರನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕು. ಕಾರ್ಮಿಕರು ಸಹ ವೈಯಕ್ತಿಕ ನೋಂದಣಿ ಮಾಡಿಕೊಳ್ಳಬೇಕು.

ಡಾ. ರವೀಂದ್ರನಾಥ ಶಾನುಭಾಗ್

ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry