‘ಲಿಂಗಾಯತರು ಯಾರಿಗೂ ಗುಲಾಮರಾಗಬೇಕಿಲ್ಲ’

7

‘ಲಿಂಗಾಯತರು ಯಾರಿಗೂ ಗುಲಾಮರಾಗಬೇಕಿಲ್ಲ’

Published:
Updated:
‘ಲಿಂಗಾಯತರು ಯಾರಿಗೂ ಗುಲಾಮರಾಗಬೇಕಿಲ್ಲ’

ಬಬಲೇಶ್ವರ (ವಿಜಯಪುರ): ‘ಕಾಯಕ ತತ್ವ ನಂಬಿರುವ ಲಿಂಗಾಯತರು ಯಾರಿಗೂ ಗುಲಾಮರಾಗುವ ಅವಶ್ಯಕತೆಯಿಲ್ಲ’ ಎಂದು ರಾಷ್ಟ್ರೀಯ ಬಸವ ಸೇನಾ ಅಧ್ಯಕ್ಷ, ಸಚಿವ ವಿನಯ ಕುಲಕರ್ಣಿ ಹೇಳಿದರು.

ಗ್ರಾಮದಲ್ಲಿ ಸಪ್ತ ಪೂಜ್ಯರ ಪ್ರತಿಮೆ ಪ್ರತಿಷ್ಠಾಪನೆಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ‘ನಾವು ದುಡಿಯುವ ಕೈಗಳಿಂದ ಸ್ವಾಭಿಮಾನಿ ಬದುಕು ಸಾಗಿಸುವ 99 ಉಪ ಪಂಗಡ ಹೊಂದಿರುವ ಲಿಂಗಾಯತರು. ತತ್ವ ನಿಷ್ಠರು’ ಎಂದರು.

‘ಪಂಚಪೀಠಗಳು 15 ದಿನಗಳ ಅಂತರದಲ್ಲಿ ಬಬಲೇಶ್ವರದಲ್ಲೇ ಮತ್ತೆ ಕಾರ್ಯಕ್ರಮ ನಡೆಸುವ ಅವಶ್ಯಕತೆಯಿತ್ತೆ’ ಎಂದು ಪ್ರಶ್ನಿಸಿದ ಸಚಿವ ವಿನಯ, ‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಎಂ.ಬಿ.ಪಾಟೀಲರನ್ನು ಈ ರೀತಿ ಹೆದರಿಸಬಹುದು ಎಂದು ಪಂಚಪೀಠಗಳು ಭಾವಿಸಿದಂತಿದೆ.

ಆದರೆ ಇದು ಎಂದೆಂದಿಗೂ ಸಾಧ್ಯವಿಲ್ಲ. ಅವರು ಈ ಭಾಗದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿನ ಶ್ರೀರಕ್ಷೆ. ಇಲ್ಲಿಯೂ ಸಹ ಅಭಿವೃದ್ಧಿ ನಮ್ಮ ಜಾತಿಯಾಗಬೇಕು. ಸ್ವಜಾತಿಗೆ ಜೋತು ಬಿದ್ದು ಅಭಿವೃದ್ಧಿಯ ಹರಿಕಾರರನ್ನು ಕಡೆಗಣಿಸಬಾರದು’ ಎಂದು ವಿನಂತಿಸಿದರು.

‘ನಾವು ಸ್ವತಂತ್ರ ಧರ್ಮ ಹೋರಾಟಕ್ಕೆ ಇಳಿದ ಮೇಲೆ ಪಂಚ ಪೀಠಗಳಿಗೆ ಭಕ್ತರ, ಗ್ರಾಮಗಳ ನೆನಪಾಗಿದೆ. ದಿಢೀರನೆ ಹಳ್ಳಿಗಳಿಗೆ ಬರುತ್ತಿರುವ ಈ ಪೀಠಾಧೀಶರು, ಬಬಲೇಶ್ವರದ ಸ್ವಾಮಿಯಂತವರನ್ನು ಹಿಡಿದು ಮಠವನ್ನು ಸೇರಿ, ಒಗ್ಗೂಡುತ್ತಿರುವ ಲಿಂಗಾಯತರನ್ನು ಒಡೆಯುವ ಪಿತೂರಿ ಕೆಲಸ ಮಾಡುತ್ತಿದ್ದಾರೆ. ಬಹಳ ವರ್ಷಗಳ ನಂತರ ಎಲ್ಲ ಉಪ ಪಂಗಡಗಳವರು ಒಂದಾಗುತ್ತಿದ್ದು, ನಾವು ಖಂಡಿತವಾಗಿ ಪ್ರತ್ಯೇಕ ಧರ್ಮ ಮಾನ್ಯತೆ ಪಡೆದೇ ಪಡೆಯುತ್ತೇವೆ’ ಎಂದರು.

‘ನಾವು ಬಸವ ಪರಂಪರೆಯಿಂದ ಬಂದವರು. ಎಲ್ಲರನ್ನೂ ಜತೆಗೆ ಕರೆದೊಯ್ಯುವವರು. ಎಲ್ಲ ಉಪ ಪಂಗಡಗಳು ನಮ್ಮೊಂದಿಗೆ ಇದ್ದು, ಬೆರಳೆಣಿಕೆಯ ಪೀಠಗಳಿಗೆ ಯಾರೂ ಹೆದರುವ ಅವಶ್ಯಕತೆಯಿಲ್ಲ’ ಎಂದರು. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ‘ಎಂ.ಬಿ.ಪಾಟೀಲ ಹೋರಾಟ ಮಾಡಿದ್ದರ ಪರಿಣಾಮ 99 ಲಿಂಗಾಯತ ಉಪ ಜಾತಿಯವರು ಒಂದಾಗಿದ್ದಾರೆ. ಒಂದಾಗಿದ್ದ ಲಿಂಗಾಯತರು ಉಪ ಜಾತಿಗಳಲ್ಲಿ ವಿಘಟನೆಯಾಗಿ ನಾಶವಾಗುತ್ತಿರುವ ಸಂದರ್ಭದಲ್ಲಿ, ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಸಾಕಷ್ಟು ಸಂಕಷ್ಟ, ನೋವುಗಳನ್ನು ಅನುಭವಿಸಿದ್ದಾರೆ’ ಎಂದು ಹೇಳಿದರು.

‘ಕೆಲವರು ಲಿಂಗಾಯತ ಸಮಾವೇಶ, ಸಭೆಗಳಿಗೆ ಹೋಗಬೇಡಿ. ಹೋದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರ್ಯಗಳಿಗೆ ನಾವು ಬರುವುದಿಲ್ಲ ಎಂದು ಹೆದರಿಸುತ್ತಿದ್ದಾರೆ. ನೀವೂ ಇದೇ ರೀತಿ ಬೆದರಿಕೆ ತಂತ್ರವನ್ನು ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ಬಸವ ಧರ್ಮದ ಪ್ರಕಾರವೇ ವಿಧಿ ವಿಧಾನ ಮಾಡಲು ನಾವು ತಯಾರಿ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನಾನು ನೀಡುತ್ತೇನೆ. ನಾವು ಮನೆಯಲ್ಲಿನ ತಂದೆ-ತಾಯಿಗಳಿಗೆ ನಮಸ್ಕರಿಸಿದರೆ ಅದುವೇ ದೇವರ ಪೂಜೆ ಎಂದು ಭಾವಿಸುವ ಲಿಂಗಾಯತರು ಎನ್ನುವುದನ್ನು ಮರೆಯಬಾರದು’ ಎಂದರು.

‘ಬಬಲೇಶ್ವರ ಮಠದ ಹಿಂದಿನ ಪೂಜ್ಯರು ಎಂದಿಗೂ ವೈದಿಕ ಪರಂಪರೆಗೆ, ಪಂಚಪೀಠಗಳಿಗೆ ಮಣೆ ಹಾಕಿದವರಲ್ಲ. ಅವರು ಬಸವತತ್ವ ನಿಷ್ಠರು, ಭಕ್ತ ವರ್ಗದ ಪ್ರೀತಿಗೆ ಪಾತ್ರರಾಗಿದ್ದರು. ಇಂದಿನ ಮಹಾದೇವ ಶಿವಾಚಾರ್ಯರು ಮುಗ್ಧರಾಗಿದ್ದು, ಅವರನ್ನು ದುರ್ಬಳಕೆ ಮಾಡಿಕೊಂಡು ಪಂಚಪೀಠದವರು ಇಲ್ಲಿ ಆಕ್ರಮಿಸಿಕೊಂಡಿದ್ದಾರೆ. ಬಸವ ಜನ್ಮಭೂಮಿಯಲ್ಲಿ ಎಂದಿಗೂ ಬಸವತತ್ವಗಳಿಗೆ ಜಯ ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

ಬೌದ್ಧ ಧರ್ಮದ ಬಂತೇಜಿ ಮಾತನಾಡಿ ‘ಬುದ್ಧ, ಬಸವ, ಅಂಬೇಡ್ಕರ್ ತತ್ವಗಳು ಸಾಮ್ಯವಿದ್ದು, ಸರ್ವರಿಗೂ ಸಮಪಾಲು, ಸಮಬಾಳು ಅಡಿಯಲ್ಲಿ ಲಿಂಗಾಯತ ತತ್ವಗಳಿದ್ದು, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದರು.

ಭವ್ಯ ಮೆರವಣಿಗೆ

ಮಹಾತ್ಮ ಬಸವೇಶ್ವರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬಬಲೇಶ್ವರದ ಶಾಂತವೀರ ಪೂಜ್ಯರು, ವೀರರಾಣಿ ಕಿತ್ತೂರ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣನವರ ಪ್ರತಿಮೆಗಳ ಶಂಕು ಸ್ಥಾಪನೆ ನಿಮಿತ್ಯ ನಡೆದ ಭವ್ಯ ಮೆರವಣಿಗೆಗೆ ಬಬಲೇಶ್ವರ ಸಾಕ್ಷಿಯಾಯಿತು.

ಮಧ್ಯಾಹ್ನ 1 ಗಂಟೆಗೆ ಕಿತ್ತೂರ ರಾಣಿ ಚನ್ನಮ್ಮ ವೃತ್ತ ಶಂಕುಸ್ಥಾಪನೆಯೊಂದಿಗೆ ಆರಂಭಗೊಂಡ ಭವ್ಯ ಮೆರವಣಿಗೆ, ಬಸ್ ನಿಲ್ದಾಣದ ಹತ್ತಿರ ಶಾಂತವೀರ ಶ್ರೀಗಳು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ವೃತ್ತ ಶಂಕುಸ್ಥಾಪನೆ ನಂತರ ಬಬಲೇಶ್ವರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಸಾಗಿತು.

ಬಸವೇಶ್ವರರ ಭಾವಚಿತ್ರ, ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಪ್ರಕಟಿಸಿರುವ ಬಸವಾದಿ ಶರಣರ ಸಾಹಿತ್ಯ ಗ್ರಂಥಗಳನ್ನು ಹೊತ್ತ ಆನೆ ಮೆರವಣಿಗೆಯಲ್ಲಿ ಮುಂದೆ ಸಾಗಿತು. ಸಾಗರದ ಮಹಿಳಾ ಡೊಳ್ಳು ತಂಡ, ಅಮಲಿಹಾಳದ ವೀರಗಾಸೆ ತಂಡ, ರಬಕವಿಯ ಜಾಂಜ್ ಪಥಕ, ಡೊಳ್ಳು ಕುಣಿತ, ಕಣಿ ವಾದನ, ಕರಡಿ ಮಜಲು, ಹಲಗೆ ತಂಡಗಳು ಮೆರವಣಿಗೆ ಉದ್ದಕ್ಕೂ ಸಾಗಿದವು.ಮೆರವಣಿಗೆ ಉದ್ದಕ್ಕೂ ನಾನು ಲಿಂಗಾಯತ ಟೋಪಿ ಧರಿಸಿದ್ದ ಜನರು, ಲಿಂಗಾಯತ ಸ್ವತಂತ್ರ ಧರ್ಮದ ಪರ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಮೊಳಗಿಸಿದರು.

‘ಚತುರ್‌ವರ್ಗ ತೊರೆದು ಲಿಂಗಾಯತನಾದ ಬಸವಣ್ಣ’

‘ಶ್ರೇಷ್ಠ ಶೈವನಾಗಿದ್ದ ಬಸವಣ್ಣ ಚತುರ್‌ ವರ್ಗ ತೊರೆದು, ಲಿಂಗಾಯತನಾಗಿದ್ದಾನೆ. ಆದರೆ ಕೆಲವು ಲಿಂಗಾಯತರು ವೀರಶೈವರಾಗಲು ಹೊರಟಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.

‘ಪಲ್ಲಕ್ಕಿಯಲ್ಲಿ ಕೂಡುವ ನಿಮಗೆ ಎಸ್.ಸಿ. ಸರ್ಟಿಫೀಕೆಟ್ ಬೇಕು. ನಿಮ್ಮನ್ನು ಹೊರುವ ನಮಗೆ ಪ್ರತ್ಯೇಕ ಧರ್ಮವಾದರೆ ಸಂಕಟವೇ ?’ ಎಂದು ಪಂಚಪೀಠಾಧೀಶರನ್ನು ಮಂಗಳವಾರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

‘ನನ್ನನ್ನು ಸೋಲಿಸಲು ನಡೆದಿರುವ ಷಡ್ಯಂತ್ರಕ್ಕೆ ಕೆಲ ಸ್ವಾಮೀಜಿಗಳು ಕೈಜೋಡಿಸಿದ್ದು, ಅದರ ಭಾಗವೇ ಇಂದಿನ ಬಬಲೇಶ್ವರದ ಕಾರ್ಯಕ್ರಮ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು ಹತಾಶರಾಗಿದ್ದಾರೆ ಎಂದು ಹೇಳಿರುವ ಮಹಾದೇವ ಶಿವಾಚಾರ್ಯರು ಲಿಂಗಾಯತರಲ್ಲವೇ ?’ ಎಂದು ಇದೇ ಸಂದರ್ಭ ಪ್ರಶ್ನಿಸಿದರು.

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ ‘ಮನುಷ್ಯನ ಬದುಕಿನ ಸ್ವಾಭಿಮಾನವನ್ನು ಎತ್ತಿ ಹಿಡಿದ ಮಹಾಪೂಜ್ಯರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಬಬಲೇಶ್ವರ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ’ ಎಂದರು.

* * 

ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನು ಪಂಚಪೀಠಾಧೀಶರು ಮಾಡುತ್ತಿದ್ದು, ಇದಕ್ಕೆ ನಾವು ಬಗ್ಗುವವರಲ್ಲ

ವಿನಯ ಕುಲಕರ್ಣಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry