ಮೈಲಾರಲಿಂಗ ಜಾತ್ರೆ ಪೂರ್ವಸಿದ್ಧತೆ ಜೋರು

7

ಮೈಲಾರಲಿಂಗ ಜಾತ್ರೆ ಪೂರ್ವಸಿದ್ಧತೆ ಜೋರು

Published:
Updated:
ಮೈಲಾರಲಿಂಗ ಜಾತ್ರೆ ಪೂರ್ವಸಿದ್ಧತೆ ಜೋರು

ಯಾದಗಿರಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೈಲಾಪುರದಲ್ಲಿ ಮೈಲಾರಲಿಂಗ ಜಾತ್ರೆ ಅಂಗವಾಗಿ ಜಾತ್ರಾ ಪೂರ್ವಸಿದ್ಧತೆ ಭರದಿಂದ ಸಾಗಿದೆ. ಗಂಗಾಸ್ನಾನಕ್ಕೆ ಮೈಲಾರಲಿಂಗಸ್ವಾಮಿ ಪಲ್ಲಕ್ಕಿ ಸಾಗುವ ರಸ್ತೆಯನ್ನು ವಿಸ್ತರಿಸಲಾಗಿದೆ.

‘ಬೆಟ್ಟದ ಬುಡದಿಂದ ಹೊನ್ನಕೆರೆಯತ್ತ ಪಲ್ಲಕ್ಕಿ ಸಾಗುವಾಗ ಕಿರಿದಾದ ದಾರಿಯಲ್ಲಿ ಅಂಗಡಿ, ತೊಟ್ಟಿಲುಗಳಿಂದಾಗಿ ದಟ್ಟ ಜನಸಂದಣಿ ಉಂಟಾಗುತ್ತಿತ್ತು. ಈ ಸಂದರ್ಭದಲ್ಲಿ ಮೈಲಾರಲಿಂಗಸ್ವಾಮಿಯ ಪಲ್ಲಕ್ಕಿ ಸಾಗಲು ಹರಸಾಹಸ ಪಡಬೇಕಿತ್ತು.

ಉಸಿರುಗಟ್ಟುವ ವಾತಾವರಣದಿಂದ ಭಕ್ತರು ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ, ಆ ಹಾದಿಯಲ್ಲಿ ಹಾಕುತ್ತಿದ್ದ ತೊಟ್ಟಿಲುಗಳನ್ನು ಹಾಗೂ ಅಂಗಡಿಗಳನ್ನು ಊರಿಗೆ ಹೊಂದಿ ಕೊಂಡಂತೆ ಗ್ರಾಮಠಾಣಾ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು. ಅಧಿಕಾರಿಗಳ ತಂಡದೊಂದಿಗೆ ತಹಶೀಲ್ದಾರ್ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿ ಜಾತ್ರಾ ಪೂರ್ವಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮೈಲಾರಲಿಂಗನ ದರ್ಶನ ಪಡೆಯಲು ಬೆಟ್ಟದ ತುದಿಯಿಂದ ಬುಡದವರೆಗೂ ಸಾಲುಗಟ್ಟಿ ನಿಲ್ಲುತ್ತಾರೆ. ಇಡೀ ದಿನ ದರ್ಶನಕ್ಕಾಗಿ ಕಾಯಬೇಕಾಗುತ್ತದೆ. ಇಂಥಾ ಸಂದರ್ಭದಲ್ಲಿ ಬಿಸಿಲಿಗೆ ಬಳಲುತ್ತಾರೆ. ಭಕ್ತರ ಈ ಸಂಕಷ್ಟ ಪರಿಹರಿಸಲು ದೇಗುಲ ನಿಧಿಯಿಂದ ₹38.52 ಲಕ್ಷ ವೆಚ್ಚದಲ್ಲಿ ಗ್ರಿಲ್‌, ₹25.37 ಲಕ್ಷ ವೆಚ್ಚದಲ್ಲಿ ಛಾವಣಿ ನಿರ್ಮಿಸಲಾಗುತ್ತಿದೆ. ಅದೇ ರೀತಿಯಲ್ಲಿ ದೇಗುಲ ನಿಧಿಯಿಂದ ಗ್ರಾಮದಲ್ಲಿ ವ್ಯಾಪಾರ ಒಟ್ಟು ಒಂಬತ್ತು ವ್ಯಾಪಾರ ಮಳಿಗೆಗಳು ನಿರ್ಮಾಣ ಹಂತದಲ್ಲಿವೆ. ಗ್ರಿಲ್, ಛಾವಣಿ, ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಜ.12ರ ಒಳಗಾಗಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ವಿವರಿಸಿದರು.

’ಪ್ರವಾಸೋದ್ಯಮ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಾತ್ರೆ ಮುಗಿದ ಮೇಲೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಖ್ಯವಾಗಿ ಜಾತ್ರೆಯಲ್ಲಿ ಬೆಳಕಿನ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಮರ್ಕ್ಯೂರಿ ದೀಪಗಳನ್ನು ಹೆಚ್ಚು ಅಳವಡಿಸಲಾ ಗುತ್ತಿದೆ. ವಾಹನ ನಿಲುಗಡೆಗೆ ಗ್ರಾಮದ ಹೊರವಲಯದಲ್ಲಿ ಸ್ಥಳ ಗುರುತಿಸಿ ಸಿದ್ಧತೆ ನಡೆಸಲಾಗಿದೆ’ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ಇಲಾಖೆ ಎಂಜಿನಿಯರ್ ಗೋಪಾಲರಡ್ಡಿ ಮಾತನಾಡಿ, ‘ಗ್ರಾಮದ ಉತ್ತರ– ದಕ್ಷಿಣ ಹಾಗೂ ಪೂರ್ವ ದಿಕ್ಕುಗಳಲ್ಲಿ ಸ್ಥಳ ಗುರುತಿಸಿ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಲಾಗಿದೆ. ಒಟ್ಟು ನಾಲ್ಕು ಕೊಳವೆಬಾವಿಗಳಿದ್ದು, ಟ್ಯಾಂಕರ್ ಮೂಲಕ ಭಕ್ತರಿಗೆ ನೀರು ಪೂರೈಕೆ ಮಾಡಲಾಗುವುದು. ಗ್ರಾಮ ಪಂಚಾಯಿತಿ ಆಶ್ರಯದೊಂದಿಗೆ ಗ್ರಾಮದಲ್ಲಿ ಇರುವ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಕೆರೆಯಲ್ಲಿ ಈ ಬಾರಿ ನೀರಿನ ಸಂಗ್ರಹ ಕಡಿಮೆ ಇದೆ. ಕೆರೆಯಲ್ಲಿ ತಾವರೆ ಬಳ್ಳಿ ಇದ್ದು, ಯಾವುದೇ ತ್ಯಾಜ್ಯ ಇಲ್ಲ. ಕೆರೆದಂಡೆ, ಗ್ರಾಮಗಳಲ್ಲಿನ ಎಲ್ಲ ರಸ್ತೆಗಳನ್ನೂ ಸ್ವಚ್ಛಗೊಳಿಸಲಾಗಿದೆ’ ಎಂದು ತಿಳಿಸಿದರು.

* * 

ಈ ಬಾರಿ ಜಾತ್ರಾ ಉತ್ಸವಕ್ಕೆ ಜಿಲ್ಲಾಡಳಿತ ಸಮಗ್ರ ಮೂಲ ಸೌಕರ್ಯ ಒದಗಿಸಿದೆ. ಮುಖ್ಯವಾಗಿ ಛಾವಣಿ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತರ ಬೇಡಿಕೆ ಈಡೇರಿಸಿದೆ. ಚನ್ನಮಲ್ಲಪ್ಪ ಘಂಟಿ

ತಹಶೀಲ್ದಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry