ಭಾಷಾಭಿವೃದ್ಧಿಗೆ ಶ್ರಮಿಸುತ್ತಿರುವ ರಿಬ್ಬನಪಲ್ಲಿ ಪ್ರೌಢಶಾಲೆ

7

ಭಾಷಾಭಿವೃದ್ಧಿಗೆ ಶ್ರಮಿಸುತ್ತಿರುವ ರಿಬ್ಬನಪಲ್ಲಿ ಪ್ರೌಢಶಾಲೆ

Published:
Updated:
ಭಾಷಾಭಿವೃದ್ಧಿಗೆ ಶ್ರಮಿಸುತ್ತಿರುವ ರಿಬ್ಬನಪಲ್ಲಿ ಪ್ರೌಢಶಾಲೆ

ಸೇಡಂ: ತಾಲ್ಲೂಕಿನ ಗಡಿಭಾಗ ಹಾಗೂ ತೆಲಂಗಾಣ ಸಮೀಪದಲ್ಲಿರುವ ರಿಬ್ಬನಪಲ್ಲಿ ಸರ್ಕಾರಿ ಪ್ರೌಢಶಾಲೆಯೂ ಕನ್ನಡ ಭಾಷೆಯ ಏಳಿಗೆಗೆ ಶ್ರಮಿಸುತ್ತಿದೆ. ತೆಲುಗು ಮಾತನಾಡುವ ಜನಸಂಖ್ಯೆ ಹೆಚ್ಚಿರುವ ರಿಬ್ಬನಪಲ್ಲಿ ಗ್ರಾಮ ಸೇರಿದಂತೆ ಸುತ್ತಮುತ್ತ ಲಿನ ಅನಂತಪುರ ಹಾಗೂ ಖಂಡೆರಾಯನಪಲ್ಲಿ ಗ್ರಾಮದ ವಿದ್ಯಾರ್ಥಿಗಳು ಈ ಶಾಲೆಗೆ ಆಗಮಿಸು ತ್ತಾರೆ. ಕನ್ನಡ ಮಾತನಾಡುವ ಬೆರಳೆಣಿಕೆ ಯಷ್ಟಿರುವ ಗ್ರಾಮದಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮಾತ್ರ ಕನ್ನಡ ಭಾಷೆ ಕಲಿತು, ಕನ್ನಡ ವಿಷಯದಲ್ಲಿ ಉತ್ತೀರ್ಣರಾಗಿ ಭಾಷಾಭಿಮಾನದಿಂದ ಮೆರೆಯುತ್ತಿದ್ದಾರೆ.

ಶಾಲೆಯ ಶಿಕ್ಷಕರು ಸಹ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳು ತೆಲಗು ಭಾಷೆ ಮಾತನಾಡಿದರೆ ಅವರಿಗೆ ₹2 ದಂಡ ವಿಧಿಸುವ ನಿಯಮಾವಳಿಯನ್ನು ಜಾರಿಗೊಳಿಸಿದ್ದಾರೆ. ಇದರಿಂದ ಕನ್ನಡದ ಬೆಳವಣಿಗೆ ಗಡಿಭಾಗದಲ್ಲಿ ಹೆಚ್ಚಿದ್ದು, ಕನ್ನಡ ಮಾತನಾಡುವವರ ಸಂಖ್ಯೆ ಮಕ್ಕಳಿಂದ ಬೆಳೆಯುತ್ತಿದೆ.

2001ರಲ್ಲಿ ಕೇವಲ 20 ವಿದ್ಯಾರ್ಥಿ ಗಳಿಂದ ಪ್ರಾರಂಭಗೊಂಡ 8ನೇ ತರಗತಿ ಶಾಲೆ, ಇಂದು 9 ಮತ್ತು 10ನೇ ತರಗತಿಯವರೆಗೆ ವಿಸ್ತೃತಗೊಂಡಿದೆ. ಇದಕ್ಕೆ ಗ್ರಾಮದ ಪರ್ವತರೆಡ್ಡಿ ಕೋಲಂ ಪಲ್ಲಿ ಭೂದಾನ ಮಾಡಿದ್ದು, ಗ್ರಾಮದಲ್ಲಿ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದೆ.

ಒಂದು ಕೋಣೆಯಲ್ಲಿ ಕೇವಲ 20 ವಿದ್ಯಾರ್ಥಿಗಳಿಂದ ಆರಂಭಗೊಂಡ ಶೈಕ್ಷಣಿಕ ಯಾತ್ರೆ, ಇಂದು ಸುಮಾರು 165 ವಿದ್ಯಾರ್ಥಿಗಳು ಅಧ್ಯಯನ ಮಾಡುವ ಹಂತ ತಲುಪಿದೆ. ವಿಷಯವಾರು ಶಿಕ್ಷಕರು ಸೇರಿದಂತೆ ಸುಮಾರು 11 ಸಿಬ್ಬಂದಿ ಬಳಗ ಇಲ್ಲಿದೆ. 2008 ಮತ್ತು 2012ರಲ್ಲಿ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರತಿಶತ ಫಲಿತಾಂಶ ಪಡೆದಿದೆ. 2013ರಲ್ಲಿ 93 ಪ್ರತಿಶತದಷ್ಟು ಫಲಿತಾಂಶ ಪಡೆದಿತ್ತು.

ಫಲಿತಾಂಶದ ಹೆಚ್ಚಳಕ್ಕೆ ಇಲ್ಲಿನ ಶಾಲೆಯ ಸಿಬ್ಬಂದಿ ಸಹಕಾರ ಮನೋಭಾವದಿಂದ ಮೆರೆಯುತ್ತಿ ದ್ದಾರೆ. ಮಕ್ಕಳಿಂದಲೇ ಕಿರು ಉಪನ್ಯಾಸ, ವಿಷಯವಾರು ಪ್ರಾತಿನಿಧ್ಯ, ಪ್ರಶ್ನಾವಳಿ, ಬೆಳಿಗ್ಗೆ ಮತ್ತು ಸಾಯಂಕಾಲ ವಿಶೇಷ ತರಗತಿಗಳು, ಕಾಪಿರಹಿತ ಪರೀಕ್ಷೆ ಸೇರಿದಂತೆ ಅನೇಕ ವಿನೂತನ ಯೋಜನೆಗಳನ್ನು ಶಾಲಾ ಸಿಬ್ಬಂದಿ ಹಾಕಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗಾಗಿಯೇ ಶಾಲಾ ಬ್ಯಾಂಕ್, ಚುನಾವಣೆ ನಡೆಸಿ ಶಾಲಾ ಸಂಸತ್ತು ರಚನೆ, ಗ್ರಂಥಾಲಯದಲ್ಲಿನ ಪುಸ್ತಕ ನೀಡಿದ ಮೇಲೆ ಒಂದು ವಾರದ ನಂತರ ಪುಸ್ತಕದಲ್ಲಿನ ಸಾರಾಂಶವನ್ನು ಹೇಳುವ ಪರಿಪಾಠ, ಎರಡು ತಿಂಗಳಲ್ಲಿ ಸ್ಪಷ್ಟ ಓದು, ಶುದ್ಧ ಬರಹ ಮತ್ತು ಸರಳ ಲೆಕ್ಕಾಚಾರಕ್ಕೆ ಆದ್ಯತೆ ಸೇರಿದಂತೆ ಮಕ್ಕಳ ಬೌದ್ಧಿಕ ಶಕ್ತಿ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

‘ಶಾಲೆಯ ಶೈಕ್ಷಣಿಕ ಬೆಳವಣಿಗೆ ಗ್ರಾಮದ ಜನರು ಸಹಕರಿಸುತ್ತಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಕೆಂಭಾವಿ ಮತ್ತು ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದಯ್ಯಸ್ವಾಮಿ ಹೆಚ್ಚಿನ ಕಾಳಜಿಯಿಂದ ತಕ್ಷಣಕ್ಕೆ ಸ್ಪಂದಿಸುತ್ತಾರೆ’ ಎಂದು ಮುಖ್ಯಶಿಕ್ಷಕ ಲಕ್ಷ್ಮಣ ತುರೆ ತಿಳಿಸಿದರು.

‘ಕೇವಲ ಓದಿಗೆ ಮಾತ್ರ ಶಾಲೆಯ ವಿದ್ಯಾರ್ಥಿಗಳು ಸೀಮಿತವಾಗದೇ, 2011 ಮತ್ತು 2013ರಲ್ಲಿ ಶಾಲೆಯ ವಿದ್ಯಾರ್ಥಿನಿಯರು ಎರಡು ಬಾರಿ ಕಬಡ್ಡಿ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2013 ರಲ್ಲಿ ಬಾಲಕೀಯರು ಥ್ರೋಬಾಲ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ದ್ದರು. 2013ರಲ್ಲಿ ಬಾಲಕರು ಹ್ಯಾಂಡ್ಬಾಲ್ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು. ಎರಡು ಬಾರಿ ಕೊಕ್ಕೊ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಸ್ಪರ್ಧಿಸಿದ್ದಾರೆ. ‘ಕೊಕ್ಕೊದಲ್ಲಿ ನರೇಶ ಚಿನ್ನಕಾಶಪ್ಪ ವಿದ್ಯಾರ್ಥಿ ಎರಡು ಬಾರಿ ರಾಷ್ಟ್ರೀಯ ಕೊಕ್ಕೊ ಶಿಬಿರಕ್ಕೆ ಆಯ್ಕೆಗೊಂಡಿದ್ದರು’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಪರಸಗೊಂಡ ತಿಳಿಸುತ್ತಾರೆ.

‘ಒಟ್ಟು ನಾಲ್ಕು ಕೋಣೆಗಳ ಕಟ್ಟಡ ಹೊಂದಿರುವ ಶಾಲಾ ಆವರಣ ಹಸಿರಿನಿಂದ ಕೂಡಿದ್ದು, ಒಂದೇ ಕೋಣೆಯನ್ನು ಸಿಬ್ಬಂದಿ, ಮುಖ್ಯಶಿಕ್ಷಕ ಹಾಗೂ ಕಂಪ್ಯೂಟರ್ ಕೋಣೆಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಇನ್ನೂ ಹೆಚ್ಚಿನ ಕೋಣೆಗಳ ಅವಶ್ಯಕತೆ ಇದ್ದು, ಸರ್ಕಾರ ಕಟ್ಟಡ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಲಕ್ಷ್ಮಣ ತುರೆ ಮನವಿ ಮಾಡಿದರು.

ಶೌಚಾಲಯ ನಿರ್ಮಿಸಿಕೊಂಡ ವಿದ್ಯಾರ್ಥಿನಿ!

ಸೇಡಂ: ಶಾಲೆಯಲ್ಲಿನ ವಿದ್ಯಾರ್ಥಿನಿ ಮಾಧವಿ ಶೌಚಾಲಯ ಕಟ್ಟಿಸಿಕೊಡುವಂತೆ ಪಾಲಕರೊಂದಿಗೆ ಹಠ ಹಿಡಿದು ಶೌಚಾಲಯ ಕಟ್ಟಿಸಿಕೊಂಡು ಗಮನ ಸೆಳೆದಿದ್ದಾಳೆ. ‘ಮನೆಯಲ್ಲಿ ಉಪವಾಸವಿದ್ದು, ಮನೆಯಲ್ಲಿನ ಒಡವೆ ಒತ್ತೆ ಇಟ್ಟಾದರೂ ನಮಗೆ ಶೌಚಾಲಯ ನಿರ್ಮಿಸಬೇಕು’ ಎಂದು ಹಠ ಹಿಡಿದಿದ್ದಳು. ಮಗಳ ಹಠಕ್ಕೆ ಒಲಿದ ಪಾಲಕರು ಶೌಚಾಲಯ ನಿರ್ಮಿಸಿದ್ದರು. ಇದರಿಂದಾಗಿ ಅವರಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ ‘ಭರಮಣ್ಣನಾಯಕ ಶೌರ್ಯ ಪ್ರಶಸ್ತಿ’ ದೊರೆತಿದೆ.

ಅಲ್ಲದೆ, ಶೌಚಾಲಯ ಕುರಿತು ಆಕಾಶವಾಣಿ ಕಾರ್ಯಕ್ರಮ ನೀಡಿ ಜನಮೆಚ್ಚುಗೆಗೆ ಮಾಧವಿ ಪಾತ್ರಳಾಗಿದ್ದಳು. ಕಲಬುರ್ಗಿ ಜಿಲ್ಲಾ ಸಿಇಒ ಹೆಬ್ಸಿಬಾರಾಣಿ ಕೊರ್ಲಪಾರ್ಟಿ ಅವರು ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಂಬಿನಂದಿಸಿದ್ದಾರೆ.

* * 

ಭಾಷಾ ಬೆಳವಣಿಗೆ ಉತ್ತೇಜಿಸಲು ಅನೇಕ ಕಾರ್ಯಕ್ರಮ ಹಾಕಿ ಕೊಂಡು, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಅಭಿಮಾನವನ್ನು ಬೆಳೆಸಲಾಗುತ್ತಿದೆ.

ಲಕ್ಷ್ಮಣ ತುರೆ, ಮುಖ್ಯಶಿಕ್ಷಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry