‘ಕಳೆದುಹೋದ’ ಭಾಗ ಕೊಡಲು ಮಾಲೀಕರ ಒತ್ತಾಯ

7

‘ಕಳೆದುಹೋದ’ ಭಾಗ ಕೊಡಲು ಮಾಲೀಕರ ಒತ್ತಾಯ

Published:
Updated:
‘ಕಳೆದುಹೋದ’ ಭಾಗ ಕೊಡಲು ಮಾಲೀಕರ ಒತ್ತಾಯ

ಕೊಪ್ಪಳ: ನನ್ನ ಕಟ್ಟಡದ 689.31 ಚದರ ಅಡಿ ಭಾಗ 'ಕಳೆದುಹೋಗಿದೆ'. ಅದನ್ನು ವಾಪಸ್‌ ಕೊಟ್ಟು ಕಟ್ಟಡ ಖಾಲಿ ಮಾಡಿ... ಇದು ಕಟ್ಟಡ ಮಾಲೀಕರ ಒತ್ತಾಯ. ಹೀಗೊಂದು ವಿಚಿತ್ರ ಪ್ರಹಸನಕ್ಕೆ ನಗರದ ಕಾರ್ಮಿಕರ ರಾಜ್ಯ ವಿಮಾ ಯೋಜನೆಯ ಆಸ್ಪತ್ರೆಯ ಬಾಡಿಗೆ ಕಟ್ಟಡ ವೇದಿಕೆಯಾಗಿದೆ. ಆಸ್ಪತ್ರೆಯನ್ನು ಹೊಸಪೇಟೆ ರಸ್ತೆಯಲ್ಲಿರುವ ಹಾಲಿ ಕಟ್ಟಡದಿಂದ ನಗರದ ಒಳಭಾಗದ ಪುಟ್ಟ ಕಟ್ಟಡಕ್ಕೆ ಸ್ಥಳಾಂತರಿಸಲು ಮುಂದಾಗಿರುವುದೇ ಈ ವಿದ್ಯಮಾನಕ್ಕೆ ಕಾರಣ.

’ಆಸ್ಪತ್ರೆ ಸ್ಥಳಾಂತರಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ, ಕಟ್ಟಡದ ಅಳತೆಯನ್ನು ಕಡಿಮೆ ಎಂದು ತೋರಿಸಿ ಇದಕ್ಕಿಂತಲೂ ಚಿಕ್ಕದಾದ ಕಟ್ಟಡಕ್ಕೆ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಇದರಿಂದ ನಾನು ಹಾಲಿ ಕಟ್ಟಡಕ್ಕೆ ಹೆಚ್ಚುವರಿ ಬಾಡಿಗೆ ಪಡೆದಿದ್ದೇನೆ ಎಂಬ ಆರೋಪ ಬಂದು ಬಾಡಿಗೆ ಹಣ ವಾಪಸ್‌ಗೆ ಕೇಳಿದರೆ ಏನು ಮಾಡಲಿ’ ಎಂಬುದು ಕಟ್ಟಡದ ಮಾಲೀಕರಾದ ಶೈಲಜಾ ಬಾವಿಹಳ್ಳಿ ಅವರ ಆತಂಕ.

ಆಗಿರುವುದೇನು?: ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಗೆ 2011ರಲ್ಲಿ ಬಾಡಿಗೆ ಆಧಾರದ ಮೇಲೆ ಹುಡ್ಕೋ ಕಾಲೊನಿಯಲ್ಲಿ ಶೈಲಜಾ ಬಾವಿಹಳ್ಳಿ ಅವರಿಗೆ ಸೇರಿದ ಕಟ್ಟಡವನ್ನು ಇಲಾಖೆ ಪಡೆದಿತ್ತು. ಅದಕ್ಕೂ ಮುನ್ನ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಕಟ್ಟಡದ ತಾಂತ್ರಿಕ ಪರಿಶೀಲನೆ ನಡೆಸಿ ಕಟ್ಟಡದ ಒಟ್ಟು ಅಳತೆ 1,584 ಚದರ ಅಡಿ ಇದೆ ಎಂದು ನಮೂದಿಸಿದ್ದರು. ಇದೇ ಅಳತೆಯ ಕಟ್ಟಡಕ್ಕೆ ಶೈಲಜಾ ಅವರು ನಗರಸಭೆಯಿಂದ ಪರವಾನಗಿ ಪಡೆದಿದ್ದಾರೆ. ನಗರಸಭೆಗೆ ನಿಗದಿತ ತೆರಿಗೆಯನ್ನೂ ಕಟ್ಟುತ್ತಿದ್ದಾರೆ. ಕಟ್ಟಡಕ್ಕೆ ಇಲಾಖೆಯಿಂದ ಶೈಲಜಾ ಅವರು ₹ 24,600 ಬಾಡಿಗೆ ಪಡೆಯುತ್ತಿದ್ದರು.

’ಈಗ ಕರಾರು ಅವಧಿ ಮುಗಿದಿದೆ. ಕಟ್ಟಡವನ್ನು ಸ್ಥಳಾಂತರಿಸಲು ಇಲಾಖೆ ಮುಂದಾಗಿದೆ. ಆದರೆ, ಸ್ಥಳಾಂತರಿಸುವ ಮುನ್ನ ಕಾರ್ಮಿಕ ಇಲಾಖೆಗೆ ನೀಡಿದ ಹೊಸ ಕಟ್ಟಡದ ಬಗೆಗಿನ ಪ್ರಸ್ತಾವದಲ್ಲಿ ಹಾಲಿ ಕಟ್ಟಡದ ಅಳತೆಯನ್ನು 894.69 ಅಡಿ ತೋರಿಸಲಾಗಿದೆ. ಹೊಸ ಕಟ್ಟಡದ ಪ್ರಸ್ತಾವ, ಇತರ ದಾಖಲೆಗಳನ್ನು ಶೈಲಜಾ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದುಕೊಂಡಿದ್ದಾರೆ. 1,584 ಚದರ ಅಡಿ ಅಳತೆಯಲ್ಲಿ ನಿರ್ಮಾಣವಾದ ಕಟ್ಟಡದ ಅಳತೆಯನ್ನು ಈಗ 689.31 ಚದರ ಅಡಿಯಷ್ಟು ಕಡಿಮೆ ತೋರಿಸಿದ್ದು ಹೇಗೆ? ಮಾತ್ರವಲ್ಲ, ಇವರ ಅಳತೆಯ ಪ್ರಕಾರವೇ ನೋಡುವುದಾದರೆ 894.69 ಚದರ ಅಡಿಯ ಕಟ್ಟಡಕ್ಕೆ ₹ 24,600 ಬಾಡಿಗೆ ಪಡೆದಿದ್ದೇವೆ ಎಂಬ ದೂರು ಎದುರಿಸಬೇಕಾಗುತ್ತದೆ. ಕಟ್ಟಡ 894.69 ಚದರ ಅಡಿ ಇದ್ದ ಬಗ್ಗೆ ಇಲಾಖೆ ಅಧಿಕೃತ ಏಜೆನ್ಸಿಗಳ ಮೂಲಕ ಪ್ರಮಾಣಪತ್ರ ನೀಡಲಿ’ ಎಂದು ಶೈಲಜಾ ಒತ್ತಾಯಿಸಿದರು.

ಸ್ಥಳಾಂತರಗೊಳ್ಳಲಿರುವ ಹೊಸ ಕಟ್ಟಡಕ್ಕೆ ನಗರಸಭೆ ಪರವಾನಗಿ 490 ಚದರ ಅಡಿಗೆ ಇದೆ. ಆದರೆ, ಅದರ ಮಾಲೀಕರೇ ನಮ್ಮ ಕಟ್ಟಡ 500 ಚದರ ಅಡಿ ಇದೆ ಎನ್ನುತ್ತಾರೆ. ಕಾರ್ಮಿಕ ವಿಮಾ ಇಲಾಖೆ ಅಧಿಕಾರಿಗಳು ಮಾತ್ರ ಎರಡು ಮಹಡಿ ಸೇರಿಸಿ ಕಟ್ಟಡದ ಅಳತೆಯನ್ನು 1,361.14 ಚದರ ಅಡಿ ಎಂದು ತೋರಿಸಿದ್ದಾರೆ. ಅದಕ್ಕೆ ₹ 24,538 ಬಾಡಿಗೆ ನಿಗದಿಪಡಿಸಲಾಗಿದೆ. ಮಾಲೀಕರು ಹೇಳಿದ ಅಳತೆಗಿಂತಲೂ ಅಧಿಕಾರಿಗಳು ತೋರಿಸಿದ ಅಳತೆ ಹೆಚ್ಚೇ ಇದೆ. ಇದರ ಹಿಂದೆ ಏನೋ ಷಡ್ಯಂತ್ರ ಇದೆ’ ಎಂಬುದು ಶೈಲಜಾ ಅವರ ಅನುಮಾನ.

ಸಚಿವರಮಟ್ಟದಲ್ಲೇ ಲಾಬಿ: ಈ ಬಗ್ಗೆ ವಿಮಾ ಇಲಾಖೆಯ ನಿರ್ದೇಶಕ ಡಾ.ಕುಮಾರ್‌ ಅವರನ್ನು ಸಂಪರ್ಕಿಸಿದಾಗ, ಹಾಲಿ ಕಟ್ಟಡದ ಬಳಕೆ ಪ್ರದೇಶ 894.69 ಚದರ ಅಡಿ ಇದೆ. ಅದನ್ನು ಮಾತ್ರ ನಮ್ಮ ಇಲಾಖೆ ಅಧಿಕಾರಿಗಳು ತೋರಿಸಿದ್ದಾರೆ. ಅವರು ನೀಡಿದ ವರದಿಯ ಪ್ರಕಾರ ನಾವು ಹೊಸ ಕಟ್ಟಡವನ್ನು ಬಾಡಿಗೆಗೆ ಪಡೆಯಲು ಸಮ್ಮತಿಸಿದ್ದೇವೆ’ ಎಂದರು.

ಬಳಕೆ ಪ್ರದೇಶದ ಅಳತೆಯಲ್ಲಿಯೂ ಹಾಲಿ ಕಟ್ಟಡವೇ ವಿಶಾಲವಾಗಿದೆ. ಜಿಲ್ಲಾ ಆಸ್ಪತ್ರೆ ಸಹಿತ ಇಲಾಖೆಯಿಂದ ನೋಂದಾಯಿತ ಆಸ್ಪತ್ರೆಗಳಿಗೆ ಹತ್ತಿರವಾಗಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲವೂ ಕಾರ್ಮಿಕ ಸಚಿವರ ಮಟ್ಟದಲ್ಲೇ ನಡೆದಿದೆ. ಅವರು ಸೂಚಿಸಿದಂತೆ ನಾವು ಆದೇಶ ಪಾಲಿಸಿದ್ದೇವೆ ಅಷ್ಟೇ ಏನಿದ್ದರೂ ಅವರನ್ನೇ ಕೇಳಬೇಕು’ ಎಂದು ಹೇಳಿದರು.

ಸ್ವಂತ ಕಟ್ಟಡವೇ ಪರಿಹಾರ

ಕಟ್ಟಡ ಸ್ಥಳಾಂತರ ಸಂಬಂಧಿಸಿ ಇಷ್ಟೊಂದು ಜಟಾಪಟಿ ನಡೆಸುವುದಕ್ಕಿಂತ ಶೀಘ್ರವೇ ಸ್ವಂತ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಒತ್ತಾಯ. ಹಲವಾರು ವರ್ಷಗಳಿಂದ ಈ ಬಗ್ಗೆ ಹೋರಾಟ ನಡೆಸುತ್ತಿದ್ದೇವೆ. ಆದರೂ ಫಲಕಾರಿ ಆಗಿಲ್ಲ. ಸಚಿವರು ಮತ್ತು ಅಧಿಕಾರಿಗಳು ಲಾಬಿ ನಡೆಸುವುದರಿಂದ ಖಾಸಗಿ ಕಟ್ಟಡದ ಮಾಲೀಕರಿಗೆ ಲಾಭ ಮಾಡಿಕೊಡುವ ಕೆಲಸವಷ್ಟೇ ಆಗುತ್ತಿದೆ. ಇದು ಬದಲಾಗಬೇಕು ಎಂದು ಕಾರ್ಮಿಕ ಮುಖಂಡರು ಒತ್ತಾಯಿಸಿದರು.

* * 

ನಮ್ಮ ಕಟ್ಟಡದ ಅಳತೆ ಬಗ್ಗೆ ಸರ್ಕಾರಿ ಏಜೆನ್ಸಿಗಳೇ ಪ್ರಮಾಣಪತ್ರ ನೀಡಲಿ. ಅದು ಸರಿಪಡಿಸುವವರೆಗೂ ಕಟ್ಟಡ ಖಾಲಿ ಮಾಡುವಂತಿಲ್ಲ.

ಶಂಭು ಬಾವಿಹಳ್ಳಿ, ಶೈಲಜಾ ಬಾವಿಹಳ್ಳಿ ಅವರ ಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry