ಹಾಲು ಉತ್ಪಾದಕರಿಗೆ ವಿಮಾ ಯೋಜನೆ

7

ಹಾಲು ಉತ್ಪಾದಕರಿಗೆ ವಿಮಾ ಯೋಜನೆ

Published:
Updated:

ದೊಡ್ಡಬಳ್ಳಾಪುರ: ಹಾಲು ಉತ್ಪಾದಕರಿಗೆ ಬಮೂಲ್ ವಿಮಾ ಯೋಜನೆ ಜಾರಿಗೆ ತಂದಿದ್ದು, ಸದಸ್ಯರ ಮರಣ ವಿಮೆ ₹2ಲಕ್ಷ ಮತ್ತು ಅಪಘಾತ ವಿಮೆ ₹ 4ಲಕ್ಷದವರೆಗೆ ನೀಡಲಾಗುವುದು ಎಂದು ಬಮೂಲ್‌ ವ್ಯವಸ್ಥಾಪಕ ಡಿ.ಸಿ.ನಾಗರಾಜ್‌ ಹೇಳಿದರು.

ಬೆಂಗಳೂರು ಗ್ರಾಮಾಂತರ ಸಹಕಾರ ಹಾಲು ಒಕ್ಕೂಟ ಹಾಗೂ ಬಮೂಲ್‌ ಕಲ್ಯಾಣ ಟ್ರಸ್ಟ್‌ ವತಿಯಿಂದ ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯಣ್ಣ ಅವರ 71ನೇ ಹುಟ್ಟು ಹಬ್ಬ ಸಮಾರಂಭದಲ್ಲಿ ಮಾತನಾಡಿದರು.

ಹಾಲು ಉತ್ಪಾದಕರ ಒಂದು ಕುಟುಂಬದ ಪತಿ, ಪತ್ನಿಗೆ ಬಮೂಲ್ ವಿಮೆ ನೀಡಲಿದ್ದು, ವಿಮಾ ಮೊತ್ತ ಇಬ್ಬರಿಗೂ ಸೇರಿ ₹920ಗಳನ್ನು ಪಾವತಿಸಬೇಕು. ಉಳಿದ ₹920ಗಳನ್ನು ಬಮೂಲ್ ಆಡಳಿತ ಮಂಡಲಿ ಭರಿಸಲಿದೆ. ಅಗತ್ಯ ಇದ್ದಲ್ಲಿ ಕುಟುಂಬದ ಇತರೆ ಸದಸ್ಯರು ಪೂರ್ಣ ಮೊತ್ತ ಭರಿಸಿ ವಿಮೆ ಪಡೆಯಬಹುದಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಮಾತನಾಡಿ, ತಾಲ್ಲೂಕಿನಲ್ಲಿ ಹೈನುಗಾರಿಕೆಗೆ ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯಣ್ಣ ಅವರ ಕೊಡುಗೆ ಸಾಕಷ್ಟು ಇದೆ. ಎಂದರು.

ಸಾಸಲು ಹೋಬಳಿಯಲ್ಲಿ ಪಶು ಆಹಾರ ಘಟಕ ಸ್ಥಾಪನೆಗೆ 20 ಎಕರೆ ಭೂಮಿ ನೀಡುವಂತೆ ಬಮೂಲ್‌ ವತಿಯಿಂದ ಬಂದಿರುವ ಮನವಿಗೆ ಒಪ್ಪಿಗೆ ನೀಡಲಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ ಉಚಿತ ಅಕ್ಕಿ ವಿತರಣೆಯಿಂದ ಕೃಷಿ ಕೆಲಸಕ್ಕೆ ತೊಂದರೆಯಾಗಿದೆ. ಹೈನುಗಾರಿಕೆಯಿಂದ ಮಾತ್ರ ರೈತರು ಒಂದಿಷ್ಟು ಹಣ ಗಳಿಸಲು ಸಾಧ್ಯವಾಗಿದೆ ತಾಲ್ಲೂಕಿನಲ್ಲಿ ಈ ಹಿಂದೆ ಶಾಸಕರಾಗಿ ಆಡಳಿತ ನಡೆಸಿರುವವರೆಲ್ಲರೂ ಸಾಮರ್ಥ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.

ಸಭೆಯಲ್ಲಿ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯಣ್ಣ, ಉಪಾಧ್ಯಕ್ಷ ಬಿ.ಡಿ.ಆಂಜಿನಪ್ಪ, ಡಾ.ಆಂಜನಿಪ್ಪ, ಶಾಸಕ ಪಿಳ್ಳಮುನಿಶಾಮಪ್ಪ, ವರ್ತೂರು ಆರ್‌.ಪ್ರಕಾಶ್‌, ಬಿಜೆಪಿ ಹಿರಿಯ ಮುಖಂಡ ಜೆ.ನರಸಿಂಹಸ್ವಾಮಿ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌,

ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಪುಟ್ಟಬಸವರಾಜು, ಜೆಡಿಎಸ್‌ ಜಿಲ್ಲಾ ವೀಕ್ಷಕ ಡಾ.ಎಚ್‌.ಜಿ.ವಿಜಯ್‌ಕುಮಾರ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ನರಸಿಂಹಯ್ಯ, ಮುಖಂಡ ಎಲ್‌.ವೆಂಕಟೇಶಯ್ಯ, ಟಿಎಪಿಎಂಸಿಎಸ್‌ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ಉಪಾಧ್ಯಕ್ಷೆ ರತ್ನಮ್ಮ ರಾ.ಬೈರೇಗೌಡ, ನಿರ್ದೇಶಕರದ ವೆಂಕಟೇಶ್‌ಬಾಬು, ಕೆ.ಸಿ.ಲಕ್ಷ್ಮೀನಾರಾಯಣ್‌, ಆನಂದ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry