ಕೊಪ್ಪಳ, ಮೈಸೂರಲ್ಲಿ ಕೌಶಲ ತರಬೇತಿ ಕೇಂದ್ರ

7

ಕೊಪ್ಪಳ, ಮೈಸೂರಲ್ಲಿ ಕೌಶಲ ತರಬೇತಿ ಕೇಂದ್ರ

Published:
Updated:

ಬೆಳಗಾವಿ: ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ರಾಷ್ಟ್ರೀಯ ಕೌಶಲ ತರಬೇತಿ ಹಾಗೂ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲಾಗುವುದು ಎಂದು ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಪ್ರಕಟಿಸಿದರು.

ಮಂಗಳವಾರ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಆ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಆಗಿರುವ ಅಸಮತೋಲನ ನಿವಾರಣೆ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ಅದೇ ರೀತಿಯ ಕೇಂದ್ರವನ್ನು ಮೈಸೂರು ಜಿಲ್ಲೆಯ ಚೋರನಹಳ್ಳಿಯಲ್ಲೂ ಸ್ಥಾಪಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದರು.

‘ದೇಶ ಹಾಗೂ ಜಗತ್ತಿನಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಮಹತ್ವದ ಬದಲಾವಣೆ ಮತ್ತು ಸುಧಾರಣೆಗಳು ಆಗುತ್ತಿವೆ. ಈ ಅಗತ್ಯಕ್ಕೆ ತಕ್ಕಂತೆ ಮತ್ತು ಸಾಮಾಜಿಕ,‌ ಆರ್ಥಿಕವಾಗಿ ಆಗುತ್ತಿರುವ ಸಂಕೀರ್ಣ ಬದಲಾವಣೆಗಳಿಗೆ ಸ್ಪಂದಿಸುವುದಕ್ಕಾಗಿ ಎಸ್‌ಎಂಪಿ (ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್‌ ಪ್ರಾಜೆಕ್ಟ್) ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ. ಉತ್ಕೃಷ್ಟ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕೇಂದ್ರದ ಸ್ಕಿಲ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದರು. ‘ವಿಶ್ವವಿದ್ಯಾಲಯವನ್ನು ಜಾಗತಿಕ ಉತ್ಕೃಷ್ಟ ಕೇಂದ್ರವನ್ನಾಗಿ ಮಾಡಲು ಗುರಿ ಹೊಂದಲಾಗಿದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದರು.

‘ವಿಶ್ವವಿದ್ಯಾಲಯವು 1956ರ ಯುಜಿಸಿ ಕಾಯ್ದೆ 12ಬಿ ವಿಭಾಗದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಯುಜಿಸಿಯಿಂದ ದೊರೆಯುವ ಹಣಕಾಸು ನೆರವು ಪಡೆಯಲು ಅರ್ಹವಾಗಿದೆ. ಮೂರು ದಿನಗಳ ಹಿಂದೆಯಷ್ಟೇ ಅಧಿಕೃತ ಆದೇಶ ಬಂದಿದೆ. ಇದು ಹೆಮ್ಮೆಯ ವಿಷಯ. ಟಿಇಕ್ಯೂಐಪಿ 1.3 (ತಾಂತ್ರಿಕ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಕಾರ್ಯಕ್ರಮ) ಯೋಜನೆಯಲ್ಲಿ ಮಾನ್ಯತೆ ಪಡೆದ ಮೂರು ತಾಂತ್ರಿಕ ವಿಶ್ವವಿದ್ಯಾಲಯಗಳ ಪೈಕಿ ವಿಟಿಯು ಒಂದಾಗಿದೆ. ವಿಶ್ವಸಂಸ್ಥೆಯಿಂದ ಆರ್ಥಿಕ ನೆರವು ಪಡೆಯಲು ಅರ್ಹತೆ ಗಳಿಸಿದೆ’ ಎಂದು ಮಾಹಿತಿ ನೀಡಿದರು.

‘ಮುದ್ದೇನಹಳ್ಳಿಯಲ್ಲಿ ಸ್ಥಾಪಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ, ವಿಟಿಯುನಿಂದ ಮಾನ್ಯತೆ ಪಡೆದ ಎಲ್ಲ ಕಾಲೇಜುಗಳ ಬೋಧಕ ಸಿಬ್ಬಂದಿ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಲು ಯೋಜಿಸಲಾಗಿದೆ. 0–5 ವರ್ಷದವರೆಗಿನ ಬೋಧನಾ ಅನುಭವ ಪಡೆದಿರುವ ಎಲ್ಲರೂ ತಾಂತ್ರಿಕ ಶಿಕ್ಷಣ ಬೋಧನೆಯ ತರಬೇತಿ ಪಡೆಯಬೇಕಾಗುತ್ತದೆ. ಮೊದಲ ತಂಡದ ತರಬೇತಿ ಇದೇ 16ರಿಂದ  ಆರಂಭಗೊಳ್ಳಲಿದೆ. ಕೌಶಲ ಹಾಗೂ ಜ್ಞಾನ ವೃದ್ಧಿ ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry