ವಿಫಲ ಕೊಳವೆಬಾವಿ 4 ದಿನದಲ್ಲಿ ಮುಚ್ಚಲು ಗಡುವು

7

ವಿಫಲ ಕೊಳವೆಬಾವಿ 4 ದಿನದಲ್ಲಿ ಮುಚ್ಚಲು ಗಡುವು

Published:
Updated:
ವಿಫಲ ಕೊಳವೆಬಾವಿ 4 ದಿನದಲ್ಲಿ ಮುಚ್ಚಲು ಗಡುವು

ಬಳ್ಳಾರಿ: ‘ಜಿಲ್ಲೆಯಲ್ಲಿ ವಿಫಲ ಕೊಳವೆಬಾವಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮುಚ್ಚಲು ನಾಲ್ಕು ದಿನ ಗಡುವು ನೀಡಲಾಗಿದೆ. ನಂತರವೂ ಮುಚ್ಚದಿರುವುದು ಕಂಡುಬಂದರೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ಶಶಿಧರ್ ದೇವನಾಳ ತಿಳಿಸಿದರು.

‘ವಿಫಲ ಕೊಳವೆಬಾವಿಗಳನ್ನು ಸಮೀಕ್ಷೆ ಮೂಲಕ ಪತ್ತೆ ಹಚ್ಚಲು ಪ್ರತಿ ತಾಲ್ಲೂಕಿನಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿದೆ. ತಂಡದಲ್ಲಿ ತಹಸೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಾಗೂ ಗ್ರಾಮಲೆಕ್ಕಾಧಿಕಾರಿ ಇದ್ದು, ಜ.12ರ ಒಳಗೆ ವರದಿ ಸಲ್ಲಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ತೆರೆದ ಕೊಳವೆಬಾವಿಗಳಿರುವ ಸ್ಥಳದಲ್ಲಿ ಆಗುವ ದುರ್ಘಟನೆಗಳನ್ನು ತಡೆಯುವ ಸಲುವಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸೂಚಿಸಿರುವ ಮೇರೆಗೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ’ ಎಂದರು. ‘ ವಿವಿಧ ಯೋಜನೆಗಳ ಅಡಿ ಕೊಳವೆಬಾವಿ ಕೊರೆಯುವ ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜು ಅರಸು ನಿಗಮ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳೂ ವರದಿ ಸಲ್ಲಿಸಬೇಕು’ ಎಂದರು.

ನಿಯಮ ಪಾಲನೆ ಕಡ್ಡಾಯ: ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸುವ 15 ದಿನ ಮೊದಲು ಜಮೀನು ಮಾಲೀಕ ಹಾಗೂ ಗುತ್ತಿಗೆದಾರರು, ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಕೊಳವೆಬಾವಿ ಕೊರೆಯುವ ಸಂಸ್ಥೆಗಳು ಜಿಲ್ಲಾಧಿಕಾರಿ ಬಳಿ ನೋಂದಾಯಿಸಬೇಕು.

ನಿಯಮ ಮೀರಿದರೆ ಯಂತ್ರದ ಲಾರಿಯನ್ನು ಜಪ್ತಿ ಮಾಡಲಾಗುವುದು. ಇದುವರೆಗೆ ಜಿಲ್ಲೆಯಲ್ಲಿ 9 ಸಂಸ್ಥೆಗಳು ಮಾತ್ರ ನೋಂದಾಯಿಸಿವೆ. ಹೊರಜಿಲ್ಲೆಗಳ ಸಂಸ್ಥೆಗಳು ಜಿಲ್ಲೆಗೆ ಬಂದು ಕೊಳವೆಬಾವಿಗಳನ್ನು ಕೊರೆಯುತ್ತಿರುವುದು ಗಮನಕ್ಕೆಬಂದೆ. ಅಂಥ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಎಲ್ಲ ಮುಚ್ಚಿವೆ: 2015ರಿಂದ 2017ರ ಅಂತ್ಯದವರೆಗಿನ ವಿಫಲ ಕೊಳವೆಬಾವಿಗಳೆಲ್ಲವನ್ನೂ ಮುಚ್ಚಲಾಗಿವೆ. ಆದರೆ ಮುಚ್ಚದೇ ಉಳಿದ ಬಾವಿಗಳನ್ನು ಪತ್ತೆ ಹಚ್ಚಿ ಮುಚ್ಚುವುದರ ಕಡೆಗೆ ಗಮನ ಹರಿಸಲಾಗಿದೆ’ ಎಂದರು. ಹಿರಿಯ ಭೂವಿಜ್ಞಾನಿ ಜೆ.ಪಿ.ರವೀಂದ್ರನಾಥ್‌ ಇದ್ದರು.

ಸಿದ್ಧತೆ ಇಲ್ಲದೆ ಸುದ್ದಿಗೋಷ್ಠಿ

ಬಳ್ಳಾರಿ: ಕೊಳವೆಬಾವಿಗಳ ಕುರಿತು ಮಾಹಿತಿ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಸುದ್ದಿಗೋಷ್ಠಿ ನಡೆಸಿದ ಶಶಿಧರ್ ದೇವನಾಳ ಅವರು ಸುದ್ದಿಗಾರರ ಕೆಲವು ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಾಗದೆ ಪೇಚಾಡಿದರು.

‘ಜಿಲ್ಲೆಯಲ್ಲಿ ಇದುವರೆಗೆ ಕೊರೆಯಿಸಿದ ಕೊಳವೆಬಾವಿಗಳ ಸಂಖ್ಯೆ 27988’ ಎಂದು ಹೇಳಿದ ಅವರಿಗೆ, ‘ಈ ಕೊಳವೆಬಾವಿಗಳನ್ನು ಎಷ್ಟು ಕಾಲಾವಧಿಯಲ್ಲಿ ಕೊರೆಯಲಾಗಿದೆ’ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಆಗಲಿಲ್ಲ. ‘ವಿಭಾಗ ಅಸ್ತಿತ್ವಕ್ಕೆ ಬಂದ ನಂತರದ ಅಂಕಿ ಅಂಶ ಇದು’ ಎಂದು ವಿಭಾಗದ ಭೂವಿಜ್ಞಾನಿ ಪ್ರಸನ್ನಕುಮಾರ್‌ ಪ್ರತಿಕ್ರಿಯಿಸಿದರು. ‘ಅದಕ್ಕೂ ಮುಂಚೆ ಜಿಲ್ಲೆಯಲ್ಲಿ ಎಷ್ಟು ಕೊಳವೆಬಾವಿಗಳನ್ನು ಕೊರೆಯಲಾಗಿತ್ತು’ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಅವರು ಮತ್ತೆ ಕಚೇರಿ ಸಿಬ್ಬಂದಿಯನ್ನು ಎಡತಾಕಿದರು.

‘ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದ್ದರಿಂದ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ’ ಎಂದ ಹಲವು ಬಾರಿ ಹೇಳಿದ ಅವರು ‘ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬೇರೆ ಪ್ರಶ್ನೆಗಳನ್ನು ಈಗ ಕೇಳಬೇಡಿ’ ಎಂದು ಮನವಿ ಮಾಡಿದರು. ಬೆಳಿಗ್ಗೆ 11 ಗಂಟೆಗೆ ಗೋಷ್ಠಿ ಏರ್ಪಡಿಸಿದ್ದ ಅವರೇ ಅರ್ಧ ಗಂಟೆ ಕಾಲ ತಡವಾಗಿ ಬಂದರು.

* * 

ವಿಫಲವಾದ ತೆರೆದ ಕೊಳವೆಬಾವಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿದವರಿಗೆ ಪ್ರಶಂಸಾ ಪತ್ರವನ್ನು ನೀಡಲಾಗುವುದು

–ಶಶಿಧರ್ ದೇವನಾಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರಿ ಇ.ಇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry