ಬೀದರ್ ಬಂದ್‌: ದಲಿತ ಸಂಘಟನೆಗಳ ಬೃಹತ್‌ ಪ್ರತಿಭಟನೆ

7

ಬೀದರ್ ಬಂದ್‌: ದಲಿತ ಸಂಘಟನೆಗಳ ಬೃಹತ್‌ ಪ್ರತಿಭಟನೆ

Published:
Updated:
ಬೀದರ್ ಬಂದ್‌: ದಲಿತ ಸಂಘಟನೆಗಳ ಬೃಹತ್‌ ಪ್ರತಿಭಟನೆ

ಬೀದರ್‌: ದೇಶದ ವಿವಿಧ ರಾಜ್ಯಗಳಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಹಾಗೂ ಕೇಂದ್ರ ಸಚಿವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟವು ಮಂಗಳವಾರ ಕರೆ ನೀಡಿದ್ದ ಬೀದರ್‌ ಹಾಗೂ ಭಾಲ್ಕಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಿಜೆಪಿ ಮುಖಂಡ ಸುಭಾಷ ಕಲ್ಲೂರು ಕಾರು ಸೇರಿದಂತೆ ಒಟ್ಟು 18 ವಾಹನಗಳ ಗಾಜು ಒಡೆಯಲಾಗಿದೆ. ಪ್ರತಿಭಟನಾಕಾರರು ಬೆಳಗಿನ ಜಾವದಿಂದ ಗುಂಪು ಗುಂಪಾಗಿ ಸೇರಿ ಘೋಷಣೆಗಳನ್ನು ಕೂಗುತ್ತ ದ್ವಿಚಕ್ರ ವಾಹನಗಳಲ್ಲಿ ಓಡಾಡಿದ್ದರಿಂದ ಭಯಭೀತರಾದ ವ್ಯಾಪಾರಸ್ಥರು ಅಂಗಡಿಗಳ ಬಾಗಿಲುಗಳನ್ನು ತೆರೆಯಲಿಲ್ಲ. ಜಾಬ್‌ ಶೆಟ್ಟಿ ಆಯುರ್ವೇದ ಕಾಲೇಜಿನ ಕಿಟಕಿ ಗಾಜುಗಳನ್ನು ಪ್ರತಿಭಟನಾಕಾರರು ಒಡೆದಿದ್ದಾರೆ.

ಪೆಟ್ರೋಲ್‌ ಬಂಕ್, ಹೋಟೆಲ್‌ ಗಳು, ಚಿತ್ರಮಂದಿರ, ಬ್ಯಾಂಕ್‌ ಬಂದ್‌ ಆಗಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದವು. ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು.

ಮಾತಿನ ಚಕಮಕಿ: ಬೀದರ್‌ ತಾಲ್ಲೂಕಿನ ಆಣದೂರಲ್ಲಿ ಹೋಟೆಲ್‌ ಬಂದ್‌ ಮಾಡುವ ವಿಷಯದಲ್ಲಿ ಪ್ರತಿಭಟನಾಕಾರರು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಖಾಸಗಿ ಚಾನೆಲ್‌ ಕ್ಯಾಮೆರಾಮನ್‌ ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿಯುತ್ತಿದ್ದಾಗ ಮೊಬೈಲ್‌ ಕಿತ್ತುಕೊಂಡರು. ಸ್ಥಳದಲ್ಲಿದ್ದ ದಲಿತ ಮುಖಂಡರು ಮೊಬೈಲ್‌ ವಾಪಸ್‌ ಕೊಡಿಸಿದರು. ಪ್ರತಿಭಟನಾಕಾರರು ಒತ್ತಾಯದಿಂದ ಹೋಟೆಲ್‌ ಬಂದ್‌ ಮಾಡಲು ಮುಂದಾದಾಗ ಪೊಲೀಸರು ಲಾಠಿ ಬೀಸಿ ಅವರನ್ನು ಚದುರಿಸಿದರು.

ರಸ್ತೆಗೆ ಇಳಿಯದ ಬಸ್: ಬೀದರ್‌ ಸಾರಿಗೆ ಘಟಕದ ಬಸ್‌ಗಳು ಹಾಗೂ ನಗರ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಖಾಸಗಿ ವಾಹನ ಸಂಚಾರ ಸಹ ಸಂಪೂರ್ಣ ಸ್ಥಗಿತಗೊಂಡಿತ್ತು. ಹುಮನಾಬಾದ್, ಭಾಲ್ಕಿ, ಔರಾದ್ ಹಾಗೂ ಹೈದರಾಬಾದ್‌ ಕಡೆಗೆ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಪೇಪರ್‌, ಹಾಲು ಕೊಡುವವರಿಗೂ ಬಂದ್‌ ಬಿಸಿ ಮುಟ್ಟಿಸಿತು. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಗಳು ಚಹಾ ಸಹ ಸಿಗದೆ ಪರದಾಡಿದರು.

‘ತೆಲಂಗಾಣ ಹಾಗೂ ಮಹಾರಾಷ್ಟ್ರದ ಬಸ್‌ಗಳು ಬೀದರ್‌, ಭಾಲ್ಕಿಗೆ ಬರಲಿಲ್ಲ. ಬೀದರ್‌ ಹಾಗೂ ಭಾಲ್ಕಿ ಸಾರಿಗೆ ಘಟಕದ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಂದ್‌ನಿಂದಾಗಿ ಸಾರಿಗೆ ಸಂಸ್ಥೆಗೆ ₹ 30 ಲಕ್ಷ ಹಾನಿ ಆಗಿದೆ’ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೊಟ್ರಪ್ಪ ತಿಳಿಸಿದರು.

ಬೃಹತ್ ಮೆರವಣಿಗೆ: ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಹಾಗಂಜ್‌, ಗವಾನ್ ಚೌಕ್‌, ಚೌಬಾರಾ, ನೂರಖಾನ್‌ ತಾಲೀಂ, ನಯಾಕಮಾನ್, ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಾಬುರಾವ್‌ ಪಾಸ್ವಾನ್‌ ಹಾಗೂ ಕೆಡಿಎಸ್‌ಎಸ್‌ (ಪ್ರೊ.ಕೃಷ್ಣಪ್ಪ ಸ್ಥಾಪಿತ ) ರಾಜ್ಯ ಸಂಘಟನಾ ಸಂಚಾಲಕ ರಾಜಕುಮಾರ ಮೂಲಭಾರತಿ ಅವರು ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಭೀಮಾ ಕೋರೆಗಾಂವದಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಭಗವಾ ಬ್ರಿಗೇಡ್‌ ಹಾಗೂ ಸಂಘ ಪರಿವಾರದ ಸದಸ್ಯರು ದಲಿತರ ಮೇಲೆ ಹಲ್ಲೆ ನಡೆಸಿದರೂ ಅಲ್ಲಿನ ಬಿಜೆಪಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ವಿರುದ್ಧ ಹೇಳಿಕೆ ನೀಡುತ್ತಿರುವ ಅನಂತಕುಮಾರ ಹೆಗಡೆ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ದೇಶ ದ್ರೋಹಿಯ

ಪ್ರಕರಣ ದಾಖಲಿಸಬೇಕು. ವಿಜಯ ಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪೇಜಾವರ ಸ್ವಾಮೀಜಿ ಹಾಗೂ ಗೋ ಮಧುಸೂದನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತ್ರಿವಳಿ ತಲಾಕ್‌ ನಿಷೇಧ ಮಸೂದೆಯನ್ನು ರದ್ದುಪಡಿಸಬೇಕು. ಮುಸ್ಲಿಮರು ಹಾಗೂ ಕ್ರೈಸ್ತರ ಮೇಲೆ ಹಲ್ಲೆ ನಡೆಸುತ್ತಿರುವ ಬಿಜೆಪಿ, ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಮತ್ತು ಶ್ರೀರಾಮ ಸೇನೆಯ ಪದಾಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್, ಜೆಡಿಎಸ್‌ನ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಮಹಾ ಮಾನವ ಸಂಸ್ಥೆ, ದಲಿತ ಸೇನೆ, ದಲಿತ ಸಂಘರ್ಷ ಸಮಿತಿ(ಭೀಮವಾದ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ), ಟೈಗರ್‌ ಹೋರಾಟ ಸಮಿತಿ, ಬೀಫ್‌ ಅಂಗಡಿ ಮಾಲೀಕರ ಸಂಘ, ಅಂಬೇಡ್ಕರ್‌ ಯುವ ಸೇನೆ, ಮಾದಾರ ಚನ್ನಯ್ಯ ಹೋರಾಟ ಸಮಿತಿ, ಎಸ್‌.ಸಿ.,ಎಸ್‌.ಟಿ ವಕೀಲರ ಸಂಘ, ಬಹುಜನ ವಿದ್ಯಾರ್ಥಿ ಸಂಘ, ಗೊಂಡ ವಿದ್ಯಾರ್ಥಿಗಳ ಸಂಘ, ವೀರ ಸಂಗೊಳ್ಳಿ ರಾಯಣ್ಣ ಸೇನೆ, ಮುಸ್ಲಿಂ ಹುಮನ್‌ ರೈರ್ಟ್‌, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮಿನ್(ಎಐಎಂಐಎಂ) ಪಕ್ಷ, ಜೆಡಿಎಸ್‌, ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ , ಬಹುಜನ ಸಮಾಜವಾದಿ ಪಕ್ಷ ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಭದ್ರತೆ

ಬಂದ್‌ ಪ್ರಯುಕ್ತ ಬೀದರ್‌ ನಗರದಲ್ಲಿ 250 ಪೊಲೀಸರು, ಕೆಎಸ್‌ಆರ್‌ಪಿಯ ಎರಡು ಹಾಗೂ ಜಿಲ್ಲಾ ಸಶಸ್ತ್ರ ಪಡೆಯ ಮೂರು ತುಕಡಿಗಳನ್ನು ನಿಯೋಜಿಸಲಾಗಿತ್ತು. ನಗರದ ಹೊರ ವಲಯದಲ್ಲಿ ನಾಕಾ ಬಂದಿ ಮಾಡಲಾಗಿತ್ತು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ತಿಳಿಸಿದರು.

ಖಾಸಗಿ ವಾಹನಗಳಲ್ಲಿ ಹೊರ ರಾಜ್ಯಗಳಿಂದ ನಗರಕ್ಕೆ ಬಂದಿದ್ದ ಪ್ರವಾಸಿಗರಿಗೆ ಪೊಲೀಸರು ರಕ್ಷಣೆ ಒದಗಿಸಿದರು. ತೆಲಂಗಾಣ ಹಾಗೂ ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿದ್ದ ವಾಹನಗಳನ್ನು ಪೊಲೀಸ್‌ ಬೆಂಗಾವಲಿನಲ್ಲಿ ಕಳಿಸಿಕೊಡಲಾಯಿತು.

* * 

ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಪೊಲೀಸ್‌ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ.

ಶ್ರೀಹರಿ ಬಾಬು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry