ಯಳಂದೂರಿಗೆ ಬಾರದ ಮುಖ್ಯಮಂತ್ರಿ

7

ಯಳಂದೂರಿಗೆ ಬಾರದ ಮುಖ್ಯಮಂತ್ರಿ

Published:
Updated:
ಯಳಂದೂರಿಗೆ ಬಾರದ ಮುಖ್ಯಮಂತ್ರಿ

ಯಳಂದೂರು: ಜಿಲ್ಲೆಯ ಹನೂರು, ಕೊಳ್ಳೇಗಾಲ ಹಾಗೂ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ.10 ರಂದು ಭೇಟಿ ನೀಡಲಿದ್ದಾರೆ. ಆದರೆ, ಜಿಲ್ಲೆಯಲ್ಲಿ ಚಿಕ್ಕ ತಾಲ್ಲೂಕಾಗಿರುವ ಯಳಂದೂರಿಗೆ ಆಗಮಿಸದಿರುವುದು ಬೇಸರ ತರಿಸಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಚುನಾವಣಾ ಸಂದರ್ಭದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಹೊರತು ಪಡಿಸಿದರೆ ಮತ್ತೆ ಅವರು ಇತ್ತ ತಿರುಗಿಯೂ ನೋಡಿಲ್ಲ. ಅದರಿಂದಾಗಿ ತಾಲ್ಲೂಕಿನ ಅಭಿವೃದ್ಧಿ ಕನಸು ಮರೀಚಿಕೆಯಾಗಿದೆ ಎನ್ನುತ್ತಾರೆ ನಾಗರಿಕರು.

ಸಾಕಾರಗೊಳ್ಳದ ಆಸ್ಪತ್ರೆ ಕನಸು: ‘ತಾಲ್ಲೂಕು ಆಸ್ಪತ್ರೆಯನ್ನು ಅನೇಕ ವರ್ಷಗಳಿಂದ ಮೇಲ್ದರ್ಜೆಗೇರಿಸುವು ದಾಗಿ ಭರವಸೆ ಮಾತ್ರ ನೀಡಲಾಗುತ್ತಿದೆ. ದಿನಕ್ಕೊಂದು ನೆಪವೊಡ್ಡಿ ಅಭಿವೃದ್ಧಿ ಕಾರ್ಯವನ್ನು ಮುಂದೂಡಿಕೊಂಡು ಬರಲಾಗುತ್ತಿದೆ. 100 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲು ಜನಪ್ರತಿನಿಧಿಗಳು ಆಸಕ್ತಿ ಯನ್ನೇ ತೋರಿಸುತ್ತಿಲ್ಲ. ಮುಖ್ಯ ಮಂತ್ರಿಗಳು ಈಗಲಾದರೂ ಇದಕ್ಕೆ ಸ್ಪಂದಿಸಲಿ’ ಎಂಬುದು ಪಟ್ಟಣದ ರಂಗನಾಥರಾವ್ ಹಾಗೂ ಶ್ರೀನಿವಾಸ ಅವರ ಆಗ್ರಹವಾಗಿದೆ.

ಅಭಿವೃದ್ಧಿ ಮರೀಚಿಕೆ: ದಲಿತರು ಹಾಗೂ ಇತರೆ ಹಿಂದುಳಿದ ಜನಾಂಗಗಳನ್ನು ಒಳಗೊಂಡಿರುವ ತಾಲ್ಲೂಕು ಮೂಲಸೌಕರ್ಯಗಳಿಂದಲೂ ವಂಚಿತವಾಗಿದೆ. ತಾಲ್ಲೂಕಿನಲ್ಲಿ ಸುಸ್ಜಜಿತ ಬಸ್ ನಿಲ್ದಾಣ, ಅಗ್ನಿಶಾಮಕ ಠಾಣೆ, ಒಳ ಚರಂಡಿ ವ್ಯವಸ್ಥೆ, ಕ್ರೀಡಾಂಗಣ, ಕಾಲೇಜು ವಿದ್ಯಾರ್ಥಿ ನಿಲಯ, ಸಭೆ-ಸಮಾರಂಭ ನಡೆಸಲು ಸೂಕ್ತ ಸಭಾಂಗಣ, ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸದಿರುವುದು ತಾಲ್ಲೂಕಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಭದ್ರಕೋಟೆ: ‘ಯಳಂದೂರು ತಾಲ್ಲೂಕು ಸಂಪೂರ್ಣವಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಕ್ಷೇತ್ರದ ಹೆಸರು ಮಾತ್ರ ಕೊಳ್ಳೇಗಾಲ ಆಗಿದೆ. ಯಳಂದೂರು ತಾಲ್ಲೂಕಿನಿಂದ ಇಬ್ಬರು ಶಾಸಕರು, ಇಬ್ಬರು ಜಿ.ಪಂ. ಸದಸ್ಯರು, ಏಳು ತಾ.ಪಂ. ಸದಸ್ಯರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಅಲ್ಲದೇ, ಪಟ್ಟಣ ಪಂಚಾಯಿತಿ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳಲ್ಲೂ ಕಾಂಗ್ರೆಸ್ ಬೆಂಬಲಿತರು ಅಧಿಕಾರಲ್ಲಿದ್ದಾರೆ. ಆದರೂ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಮಾತ್ರ ಹಾಗೆಯೇ ಉಳಿದಿದೆ’ ಎನ್ನುತ್ತಾರೆ ಪಟ್ಟಣದ ಸೂರಿ.

ಬಿಆರ್‌ಟಿ ಬಗ್ಗೆ ನಿರ್ಲಕ್ಷ್ಯ: ಪ್ರಸಿದ್ಧ ಬಿಳಿಗಿರಿರಂಗನಬೆಟ್ಟ ತಾಲ್ಲೂಕಿನ ಪ್ರಮುಖ ಯಾತ್ರಸ್ಥಳ. ಆದರೆ, ಮುಖ್ಯಮಂತ್ರಿಗಳು ಬಿಳಿಗಿರಂಗನಬೆಟ್ಟಕ್ಕೆ ಒಮ್ಮೆಯೂ ಬಂದಿಲ್ಲ. ದೇವಾಲಯದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕು ಹಾಗೂ ಸುಸಜ್ಜಿತ ಬಸ್ ನಿಲ್ದಾಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

ಯಳಂದೂರಿನಲ್ಲಿ ದಿವಾನ್ ಪೂರ್ಣಯ್ಯ ಸ್ಮರಣಾರ್ಥ ಜಹಗೀರ್‌ದಾರ್‌ ಬಂಗಲೆಯನ್ನು ವಸ್ತುಸಂಗ್ರಹಾಲಯ ಎಂದು ಘೋಷಿಸಿ, ಹಳೆ ಕಟ್ಟಡವನ್ನು ಜೀರ್ಣೋದ್ಧಾರ ಮಾಡಿರುವುದನ್ನು ಬಿಟ್ಟರೆ, ವಸ್ತುಸಂಗ್ರಹಾಲಯ ಎಂದು ಪರಿಗಣಿಸಲು ಅಗತ್ಯವಿರುವ ಯಾವುದೇ ಸವಲತ್ತುಗಳಿಲ್ಲ. ಇತರೆ ತಾಲ್ಲೂಕುಗಳಂತೆ ಇಲ್ಲೂ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಹಿಂದುಳಿದ ತಾಲ್ಲೂಕು ಎನ್ನುವ ಹಣೆಪಟ್ಟಿ ಹೋಗಲಾಡಿಸಬೇಕು ಎಂದು ಪಟ್ಟಣದ ರಮೇಶ, ಮಹಾದೇವಸ್ವಾಮಿ, ರಂಗಸ್ವಾಮಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry