ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಬಾಲಕಿ ಕುಟುಂಬಕ್ಕೆ ಬೆದರಿಕೆ: ಬಜರಂಗದಳದ ಇಬ್ಬರ ಬಂಧನ

Last Updated 10 ಜನವರಿ 2018, 8:43 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ದಲಿತ ಕುಟುಂಬದ ಮಹಿಳೆಯೊಬ್ಬರ ಮನೆಗೆ ಹೋಗಿ ಅವರ ಮಗಳು ಮುಸ್ಲಿಂ ಯುವಕನ ಜತೆ ಮಾತನಾಡುತ್ತಿರುವುದನ್ನು ತಡೆಯುವಂತೆ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಬಜರಂಗದಳದ ಇಬ್ಬರು ಕಾರ್ಯಕರ್ತರನ್ನು ಮಂಗಳವಾರ ಬಂಧಿಸಲಾಗಿದೆ.

‘ಆಟೊ ಚಾಲಕ ಉಮೇಶ್‌ (33) ಮತ್ತು ಸಣ್ಣ ಹೋಟೆಲ್‌ ನಡೆಸುತ್ತಿರುವ ರಮೇಶ್‌ (48) ಬಂಧಿತರು. ರಮೇಶ್‌ ಸಹೋದರ ರಾಜೇಶ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ. ಇನ್ನೂ ಕೆಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಪತ್ತೆಗೆ ಶೋಧ ನಡೆಯುತ್ತಿದೆ’ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಬಂಧಿತ ಉಮೇಶ್‌ ಮತ್ತು ರಮೇಶ್‌ ಇಬ್ಬರೂ ಬಜರಂಗದಳದಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಬಿಜೆಪಿಯಲ್ಲೂ ಸಕ್ರಿಯರಾಗಿದ್ದರು. ದಲಿತ ಕುಟುಂಬದ ಮಹಿಳೆಯ ಮನೆಗೆ ತೆರಳಿದ್ದ ಆರೋಪಿಗಳು, ‘ನಿಮ್ಮ ಮಗಳು ಮುಸ್ಲಿಂ ಯುವಕನ ಜತೆ ಮಾತನಾಡುತ್ತಿದ್ದಾಳೆ. ತಕ್ಷಣ ನಿಲ್ಲಿಸಲು ಹೇಳಿ. ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ, ನಿಮ್ಮನ್ನು ಊರಿನಿಂದಲೇ ಹೊರಗೆ ಹಾಕಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದ್ದರು.

ಈ ಗುಂಪು ಬೆದರಿಕೆ ಹಾಕಿದ ಮರುದಿನವೇ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಗಳ ತಂಡ ಬೆದರಿಕೆ ಹಾಕಿರುವ ಮಾಹಿತಿ ತನಿಖಾ ತಂಡಕ್ಕೆ ದೊರೆಯಿತು. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.

‘ನಾಪತ್ತೆಯಾಗಿರುವ ಬಾಲಕಿಗೆ ಯಾವುದೇ ಮುಸ್ಲಿಂ ಯುವಕರು ಸ್ನೇಹಿತರಾಗಿರಲಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿಗಳು ದುರುದ್ದೇಶದಿಂದ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ. ಬಾಲಕಿ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT