ಕಸದ ತೊಟ್ಟಿಯಾದ ರಸ್ತೆ ಬದಿ ಚರಂಡಿ

6

ಕಸದ ತೊಟ್ಟಿಯಾದ ರಸ್ತೆ ಬದಿ ಚರಂಡಿ

Published:
Updated:

ಬಾಗೇಪಲ್ಲಿ: ಪಟ್ಟಣದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿ ಗಬ್ಬು ನಾರುತ್ತಿವೆ. ಇದರಿಂದಾಗಿ ಚರಂಡಿ ಪಕ್ಕದ ಮನೆಗಳಲ್ಲಿ ವಾಸಿಸುತ್ತಿರುವ ಜನರು ಅನಾರೋಗ್ಯದ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಪಟ್ಟಣದ ಮಧ್ಯಭಾಗದಲ್ಲಿಯೇ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿದು ಹೋಗುತ್ತಿದೆ. ಇದರ ಜೊತೆಗೆ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಲಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ಹರಿಯಲು ತ್ಯಾಜ್ಯ ಅಡ್ಡಿಯಾಗಿದೆ. ಇದರಿಂದಾಗಿ ನೀರು ಹರಿಯಲು ಅವಕಾಶ ಇಲ್ಲದೆ ತಡೆಯಾಗಿದೆ. ಇದರ ಪರಿಣಾಮ ಕೊಳಚೆ ನೀರು ಮಡುಗಟ್ಟಿ ರೋಗಕಾರಕ ವಾತಾವರಣ ನಿರ್ಮಿಸಿದೆ.

ರಸ್ತೆ ಬದಿಯಲ್ಲಿ ನಿರ್ಮಿಸಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವ, ನಿರ್ವಹಣೆ ಮಾಡುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಚರಂಡಿ ನಿರ್ಮಿಸಿದ ದಿನದಿಂದ ಇದುವರೆಗೆ ಸ್ವಚ್ಛ ಮಾಡಿಲ್ಲ. ಅಲ್ಲದೆ ಚರಂಡಿ ಮೇಲೆ ಹಾಸುಗಲ್ಲು ಹಾಕಿಲ್ಲ. ಹೀಗಾಗಿ ಸಾರ್ವಜನಿಕರು ತ್ಯಾಜ್ಯವನ್ನು ಚರಂಡಿಗೆ ಎಸೆಯಲು ಸುಲಭವಾಗಿದೆ. ಅದೂ ಕೂಡ ಕೊಳಕು ವಾತಾವರಣಕ್ಕೆ ಕಾರಣವಾಗಿದೆ. ಚರಂಡಿಯಲ್ಲಿ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯ ನಿವಾಸಿ ಆದಿನಾರಾಯಣ ಆರೋಪಿಸುವರು

ಡಾ.ಎಚ್.ಎನ್. ವೃತ್ತದಿಂದ ಕೊತ್ತಪಲ್ಲಿ ರಸ್ತೆಯ ಬದಿಯಲ್ಲಿ ಶಾಲಾ-ಕಾಲೇಜು, ಮಸೀದಿ, ಶುದ್ಧ ನೀರಿನ ಘಟಕ, ಅಂಗನವಾಡಿ ಕೇಂದ್ರ ಇವೆ. ಇಲ್ಲಿ ಪ್ರತಿದಿನ ನೂರಾರು ಮಕ್ಕಳು ಓಡಾಡುತ್ತವೆ. ಈ ರಸ್ತೆ ಪಕ್ಕದ ಚರಂಡಿ ಮಾಂಸದ ತ್ಯಾಜ್ಯ ಮಡುಗಟ್ಟಿ ನಿಂತಿದೆ. ಅದರಿಂದ ದುರ್ವಾಸನೆ ಬರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಡಾ.ಎಚ್.ಎನ್. ಪಾರ್ಕ್‌, ಗೂಳೂರು ವೃತ್ತದಿಂದ ಕೊತ್ತಪಲ್ಲಿ, ನೇತಾಜಿ ವೃತ್ತದಿಂದ ಜಿಲಕರಪಲ್ಲಿ, ಕುಂಬಾರಪೇಟೆ, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, ರಾಘವೇಂದ್ರ ಚಲನಚಿತ್ರಮಂದಿರದ ಸಮೀಪದ ಚರಂಡಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಪಟ್ಟಣದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ರಾಜಕಾಲುವೆ ಸ್ಥಿತಿಯಂತೂ ತೀರಾ ಗಂಭೀರವಾಗಿದೆ. ಕಾಲುವೆ ಹೂಳು ತೆಗೆದು ಹಲವು ವರ್ಷ ಕಳೆದಿವೆ. ಕಾಲುವೆ ವ್ಯಾಪ್ತಿಯ ನಿವಾಸಿಗಳು ನಿತ್ಯಕರ್ಮಕ್ಕೂ ಕಾಲುವೆಯನ್ನೂ ಆಶ್ರಯಿಸಿಕೊಂಡಿದ್ದಾರೆ. ಕಾಲುವೆ ದುರಸ್ತಿ ಮತ್ತು ನಿರ್ವಹಣೆಯ ಹೊಣೆ ನಗರೋತ್ಪನ್ನ ಇಲಾಖೆ ಹಾಗೂ ಪುರಸಭೆಗೆ ಸೇರಿದ್ದು. 5 ವರ್ಷದಿಂದ ದುರಸ್ತಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಅನುದಾನದ ಕೊರತೆಯ ನೆಪ ಹೇಳಲಾಗುತ್ತಿದೆ ಎಂದು ನಿವಾಸಿ ನಾಗೇಶ್ ಆರೋಪಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry