ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸವಲತ್ತಿಗೆ ಸಂಘಟಿತರಾಗಿ ಹೋರಾಡೋಣ

Last Updated 10 ಜನವರಿ 2018, 8:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ದೇವರ ಪೂಜೆ ಮತ್ತು ಆರಾಧನೆಯನ್ನೇ ನಂಬಿ ಬದುಕುತ್ತಿರುವ ಅರ್ಚಕರು ಮತ್ತು ಆಗಮಿಕರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ. ಇವತ್ತು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ನಾವೆಲ್ಲ ಒಗ್ಗೂಟ್ಟಿನಿಂದ ಹೋರಾಡುವ ಅಗತ್ಯವಿದೆ’ ಎಂದು ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಅಧ್ಯಕ್ಷ ಜಾನಕಿರಾಮ್ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅರ್ಚಕರ, ಆಗಮಿಕರ ಮತ್ತು ಪುರೋಹಿತರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಈಗಾಗಲೇ ಅರ್ಚಕರ ಕುಂದು ಕೊರತೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲು ಸಂಘ ಶ್ರಮಿಸಿದೆ. ನಗರ ಮತ್ತು ಪಟ್ಟಣಗಳ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರ ಬದುಕು ಸ್ಪಲ್ಪ ಮಟ್ಟಿಗೆ ಸುಧಾರಿಸಿದರೂ ಗ್ರಾಮೀಣ ಪ್ರದೇಶದಲ್ಲಿ ಅರ್ಚಕರು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ‘ಎ’ ಮತ್ತು ‘ಬಿ’ ದರ್ಜೆ ದೇವಾಲಯಗಳು ಆರ್ಥಿಕವಾಗಿ ಸದೃಢವಾಗಿವೆ. ಆದರೆ, ‘ಸಿ’ ದರ್ಜೆ ದೇವಸ್ಥಾನಗಳ ಸ್ಥಿತಿ ಉತ್ತಮವಾಗಿಲ್ಲ. ಜತೆಗೆ ಅಲ್ಲಿನ ಅರ್ಚಕರು ತುಂಬಾ ಸಂಕಷ್ಟದಲ್ಲಿದ್ದಾರೆ. ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ‘ಸಿ’ ದರ್ಜೆಯ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರಕ್ಕೆ ಸಂಘದಿಂದ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘‘ಸಿ’ ದರ್ಜೆಯ ದೇವಾಲಯಗಳಿಗೆ ಸಮಿತಿ ರಚಿಸಲು ಮುಂದಾಗಿರುವ ಸರ್ಕಾರ ಅದನ್ನು ಕೈ ಬಿಡಬೇಕು. ವಿದ್ಯುತ್‌ ಬಿಲ್‌, ಕುಡಿಯುವ ನೀರು, ಶೌಚಾಲಯಗಳು ಸೇರಿದಂತೆ ಅನೇಕ ಸವಲತ್ತುಗಳನ್ನು ಒದಗಿಸಬೇಕು. ದೇವಾಲಯಗಳಲ್ಲಿ ಅನುವಂಶೀಕವಾಗಿ ಸೇವೆ ಸಲ್ಲಿಸುತ್ತಿರುವವರನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಅನಂತರಾಮಾಚಾರ್‌ ಮಾತನಾಡಿ, ‘ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಇವುಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದು ಅಥವಾ ಎರಡು ದೇವಾಲಗಳು ‘ಎ’ ಮತ್ತು ‘ಬಿ’ ದರ್ಜೆಯ ದೇವಾಲಗಳಾಗಿವೆ. ಸದ್ಯ ಜಿಲ್ಲೆಯ 30 ‘ಸಿ’ ದರ್ಜೆಯ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಲು ಸರ್ಕಾರ ಅನುದಾನ ಮಂಜೂರು ಮಾಡಿದೆ. ಉಳಿದವುಗಳನ್ನು ಜೀರ್ಣೋದ್ಧಾರ ಮಾಡಬೇಕು’ ಎಂದು ಹೇಳಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿರುವ ಮುಜರಾಯಿ ದೇವಾಲಯಗಳಲ್ಲಿ ಪೂಜಾ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ಜಿಲ್ಲಾಧಿಕಾರಿಗಳಿಂದ ಅನುಮೋದಿಸಲ್ಪಟ್ಟ ಗುರುತಿನ ಚೀಟಿ ನೀಡುವಂತೆ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಕ್ಯಾಲೆಂಡರ್‌, ಮುಜರಾಯಿ ಪತ್ರಿಕೆ ಬಿಡುಗಡೆ ಮಾಡಲಾಯಿತು. ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎ.ವಿ.ಲಕ್ಷ್ಮೀನಾರಾಯಣಾಚಾರ್‌, ಉಪಾಧ್ಯಕ್ಷ ಆರ್‌.ಎನ್‌.ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ರಾಜಗೋಪಾಲಾಚಾರ್‌, ಖಜಾಂಚಿ ಎನ್‌. ವರದರಾಜ ಭಟ್ಟಾಚಾರ್‌, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ಮುಖಂಡರಾದ ಎನ್‌.ಭಾಸ್ಕರ್‌, ಸಿದ್ದಲಿಂಗ ಪ್ರಭು, ಎಂ.ವಿ.ಕೃಷ್ಣಮೂರ್ತಿ, ಎಂ.ಎಸ್‌.ವೆಂಕಟಾಚಲಯ್ಯ, ಚಂದ್ರಶೇಖರ ಶಾಸ್ತ್ರಿ, ವಿರೂಪಾಕ್ಷ ಉಪಸ್ಥಿತರಿದ್ದರು.

* * 

ಜಿಲ್ಲೆಯಲ್ಲಿ ಇರುವ ಬಹುಪಾಲು ‘ಸಿ’ ದರ್ಜೆಯ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅವುಗಳ ಜೀರ್ಣೋದ್ಧಾರ ಮಾಡುವ ಅಗತ್ಯವಿದೆ
ಎನ್‌.ಅನಂತರಾಮಾಚಾರ್‌ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT