'ಗೋವು ಪ್ರಾಣಿಯಲ್ಲ, ದೇಶದ ಪ್ರಾಣ'

7

'ಗೋವು ಪ್ರಾಣಿಯಲ್ಲ, ದೇಶದ ಪ್ರಾಣ'

Published:
Updated:

ಬೀರೂರು: ಕೃಷಿ ಪ್ರಧಾನ ರಾಷ್ಟ್ರವಾಗಿರುವ ಭಾರತದಲ್ಲಿ ಗೋವು ಕೇವಲ ಪ್ರಾಣಿಯಲ್ಲ, ಅದು ದೇಶದ ಬೆನ್ನೆಲುಬು ಮತ್ತು ಪ್ರಾಣವಾಗಿದೆ ಎಂದು ಗೋಸಂರಕ್ಷಣಾ ಅಭಿಯಾನದ ಶಿಶಿರ ಹೆಗಡೆ ಅಭಿಪ್ರಾಯಪಟ್ಟರು. ಗೋಸಂರಕ್ಷಣಾ ಅಭಿಯಾನದ ಅಂಗವಾಗಿ ಅಭಯಾಕ್ಷರ ಸಹಿ ಸಂಗ್ರಹ ರಥಯಾತ್ರೆಯಲ್ಲಿ ಮಂಗಳವಾರ ಬೀರೂರಿನಲ್ಲಿ ಮಾತನಾಡಿದರು.

‘ದೇಶದಲ್ಲಿ ರಾಜಕೀಯ ಕಾರಣಗಳು ಮತ್ತು ಮತ ಗಳಿಸುವ ಸಲುವಾಗಿ ಗೋಹತ್ಯೆಗೆ ಉತ್ತೇಜನ ನೀಡುತ್ತಿದ್ದು, ಗೋ ಸಂರಕ್ಷಣೆ ಹಾಲನ್ನು ಸೇವಿಸುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಸುಗಳು ಜಾತಿ -ಧರ್ಮ ನೋಡಿ ಹಾಲು ಕೊಡುವುದಿಲ್ಲ, ಅದು ಕೊಲ್ಲುವವನಿಗೂ, ಕಾಯುವವನಿಗೂ ಒಂದೇ ರೀತಿಯಲ್ಲಿ ತನ್ನ ಅಮೃತಧಾರೆ ಹರಿಸುತ್ತದೆ.

ಈ ಕಾರಣದಿಂದಾಗಿಯೇ ನಾವು ಗೋಸಂರಕ್ಷಣೆಗೆ ಒತ್ತು ನೀಡಬೇಕಿದ್ದು, ಇದರಿಂದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಉಳಿಸಿದಂತಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಒಂದುಕೋಟಿ ಜನರಿಂದ ಅಭಯಾಕ್ಷರ ಸಹಿಸಂಗ್ರಹ ನಡೆಸಿದ್ದು, ರಾಜ್ಯದ 27 ಜಿಲ್ಲೆಗಳಲ್ಲಿ ಸಂಚರಿಸಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಇದೇ 21ರಂದು ಅಭಿಯಾನ ಸಮಾರೋಪಗೊಳ್ಳಲಿದೆ’ ಎಂದು ತಿಳಿಸಿದರು.

‘ಶ್ರೀರಾಮಭಕ್ತ ಮಂಡಳಿ ಕಾರ್ಯದರ್ಶಿ ಕೆ.ಎಸ್.ಸೋಮಶೇಖರ್ ‘ಅಭಿವೃದ್ಧಿ ನೆಪದಲ್ಲಿ ಗೋಸಂಪತ್ತನ್ನು ಕೇವಲ ಹಾಲಿಗೆ ಸೀಮಿತಗೊಳಿಸಿ ಅದರ ಬಹೂಪಯೋಗಿ ಕೊಡುಗೆಗಳನ್ನು ಮರೆತಿದ್ದೇವೆ. ಹಿಂದೆ ಪ್ರತಿ ಕುಟುಂಬದಲ್ಲಿಯೂ ಗೋಸಾಕಣೆ ಇರುತ್ತಿತ್ತು. ಹಸುವಿನ ಉತ್ಪನ್ನಗಳನ್ನು ಬಳಸಿದ ಜನರು ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದರು. ಮನುಷ್ಯರಿಗೆ ಬದುಕುವ ಹಕ್ಕು ಇರುವಂತೆ ಪ್ರಾಣಿಗಳ ರಕ್ಷಣೆಗೂ ಮಸೂದೆ ಜಾರಿಯಾಗಲಿ. ಅಭಿಯಾನದ ಕೂಗು ಸಂಸತ್ ತಲುಪಿ ಸಂರಕ್ಷಣಾ ಅಭಿಯಾನದ ಉದ್ದೇಶ ಈಡೇರಲಿ. ನಾಗರಿಕರಲ್ಲಿಯೂ ಈ ಕುರಿತು ಜಾಗೃತಿ ಮೂಡಲಿ’ ಎಂದು ಆಶಿಸಿದರು.

ನಾಗರಿಕರಿಂದ ಸಂಗ್ರಹಿಸಿದ ಅಭಯಾಕ್ಷರ ಪತ್ರಗಳನ್ನು ಆರ್.ವಿ.ಮಹಾಬಲರಾವ್ ಸ್ವಯಂಸೇವಕರಿಗೆ ಹಸ್ತಾಂತರಿಸಿದರು. ರಥಯಾತ್ರೆಯಲ್ಲಿ ಮಾನಸ, ರಾಘವೇಂದ್ರ, ಪ್ರಸನ್ನಕುಮಾರ್, ಗುರುರಾಜ್, ನಾಗೇಂದ್ರ, ಮಧು, ಡಾ.ರವಿ, ಪ್ರಿಯಕುಮಾರ್, ಶ್ರೀಧರ್, ಮಾಧವ, ಅರವಿಂದ್,ಕೃಷ್ಣಮೂರ್ತಿ, ನಟರಾಜ್, ಶಾರದಮ್ಮ, ಮಾಲತೀಶ್ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry