ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಲ್ಲದೆ ವಿಫಲವಾದ ಜಿಲ್ಲಾಡಳಿತದ ಜನಸ್ಪಂದನ

Last Updated 10 ಜನವರಿ 2018, 9:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಜನರೇ ಬರಲಿಲ್ಲ. ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆ  ಹುಸಿಯಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಿವಿಧ ಸರ್ಕಾರಿ ಇಲಾಖೆಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆವರಣ ಸುತ್ತಲೂ ಸರ್ಕಾರದ ಪ್ರತಿ ಇಲಾಖೆಗೂ ಪ್ರತ್ಯೇಕವಾದ ಶಾಮಿಯಾನ ಹಾಕಲಾಗಿತ್ತು. ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾದ ಜನಸ್ಪಂದನದಲ್ಲಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಇದ್ದರು.

ಜಿಲ್ಲಾಡಳಿತವೇ ಒಂದೆಡೆ ಸೇರಿದ್ದರೂ ಕೂಡ ಗಣಕಯಂತ್ರದಲ್ಲಿ ಡಾಟಾ ಎಂಟ್ರಿ ಮಾಡುವವರ ಬಳಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹೋಗಿ ಆನ್‍ ಲೈನ್‍ ಮೂಲಕ ಅರ್ಜಿ ಸಲ್ಲಿಸುತ್ತಿದ್ದರು. ಪಕ್ಕದಲ್ಲೇ ಸಿಇಒ ಇದ್ದರೂ  ಸಮಸ್ಯೆ ಹೇಳಿಕೊಳ್ಳುವವರ ಸಂಖ್ಯೆ ಅಲ್ಲಿಯೂ ತುಂಬಾ ವಿರಳವಾಗಿತ್ತು.

ಯಾವ ಇಲಾಖೆಗಳಲ್ಲಿ ಕೆಲಸವಾಗಬೇಕೊ ಅಲ್ಲಿಗೆ ನೇರವಾಗಿ ಜನರು ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಲು ಸುಲಭವಾಗಲಿ ಎಂಬ ಉದ್ದೇಶದಿಂದ ಪ್ರತಿ ಇಲಾಖೆಯವರೂ ನಾಮಫಲಕ ಮುಂಭಾಗದಲ್ಲಿ ಹಾಕಿಕೊಂಡಿದ್ದರು. ಅಲ್ಲಿಯೂ ಜನತೆ ಕಂಡು ಬರಲಿಲ್ಲ.

ವೈಯಕ್ತಿಕ ಕೆಲಸಗಳಿಗಾಗಿ ಅಧಿಕಾರಿಗಳನ್ನು ಕಾಣಲು ವಿವಿಧ ಇಲಾಖೆಗಳಿಗೆ ಜನ ಅಲೆದಾಡುವುದು ಸಾಮಾನ್ಯ. ಆದರೆ, ಇಲಾಖೆಯ ಅಧಿಕಾರಿಗಳೇ ಜನ ಬರಬಹುದು ಎಂದು ಸಂಜೆವರೆಗೂ ಕಾಯುವಂತಾಯಿತು. ಜನರೇ ಬರದಿದ್ದಾಗ ಕೆಲ ಅಧಿಕಾರಿಗಳು ಮೊಬೈಲ್ ಫೋನ್ ಕರೆಗಳಲ್ಲಿ ಮಗ್ನರಾದರೆ, ಮತ್ತೆ ಕೆಲವರು ಫೇಸ್ ಬುಕ್, ವಾಟ್ಸ್ ಆ್ಯಪ್ ನೋಡುತ್ತಿದ್ದರು.

ಸಂಜೆ 4 ಗಂಟೆ ಸುಮಾರಿಗೂ ಕೇವಲ 75 ಅರ್ಜಿಗಳನ್ನು ಮಾತ್ರ ಜನಸ್ಪಂದನದಲ್ಲಿ ಸಲ್ಲಿಸಲಾಗಿತ್ತು. ನೂರರ ಗಡಿ ದಾಟುತ್ತದೋ ಇಲ್ಲವೋ ಎಂಬ ಅನುಮಾನವೂ ಈ ವೇಳೆ ಕಂಡು ಬಂತು. ಆದರೆ, ಮುಕ್ತಾಯದ ಹೊತ್ತಿಗೆ 116 ಅರ್ಜಿಗಳು ಆನ್ ಲೈನ್‍ ನಲ್ಲಿ ಸಲ್ಲಿಕೆಯಾದವು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಎನ್.ಐ.ಸಿ.ರವಿಶಂಕರ್, ಇ ಆಡಳಿತದ ಜಿಲ್ಲಾ ಯೋಜನಾ ವ್ಯವಸ್ಥಾಪಕ ಸಮರ್ಥ್, ತಹಶೀಲ್ದಾರ್ ಮಲ್ಲಿಕಾರ್ಜುನ್ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಜನಸ್ಪಂದನ; ಒಂದೇ ವೇದಿಕೆಯಲ್ಲಿ ಪರಿಹಾರ: ಸಾರ್ವಜನಿಕರ ಸಮಸ್ಯೆಗಳನ್ನು ಹಾಗೂ ಅಹವಾಲುಗಳನ್ನು ಒಂದೇ ವೇದಿಕೆಯಲ್ಲಿ ಸ್ವೀಕರಿಸಿ, ಅವುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಹಾಗೂ ಕಾಲಾವಕಾಶ ಬೇಕಾಗುವ ಅರ್ಜಿಗಳಿಗೆ ಹಿಂಬರಹ ನೀಡುವ ಉದ್ದೇಶ ಜನಸ್ಪಂದನ ಹೊಂದಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎನ್.ರವೀಂದ್ರ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಿಂದ ತಾಲ್ಲೂಕು, ಗ್ರಾಮ ಮಟ್ಟದವರೆಗೆ ಸಾರ್ವಜನಿಕರ ಅಹವಾಲು, ಕುಂದುಕೊರತೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿ ಮಂಗಳವಾರ ಸಭೆ ನಡೆಯಲಿದೆ. ಮಂಗಳವಾರ ನಡೆದ ಜನಸ್ಪಂದನದಲ್ಲಿ 28 ಕ್ಕೂ ಹೆಚ್ಚು ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಮಳಿಗೆಗಳಲ್ಲಿ ಅರ್ಜಿ ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT