ರಾಗಿ ಖರೀದಿ ಕೇಂದ್ರದತ್ತ ಸುಳಿಯದ ರೈತರು

7

ರಾಗಿ ಖರೀದಿ ಕೇಂದ್ರದತ್ತ ಸುಳಿಯದ ರೈತರು

Published:
Updated:

ಚನ್ನಗಿರಿ: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ 9 ದಿನಗಳ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ರಾಗಿ ಖರೀದಿ ಕೇಂದ್ರವನ್ನು ತೆರೆದಿದ್ದು, ಇದುವರೆಗೆ ಒಂದೇ ಒಂದು ಕ್ವಿಂಟಲ್ ರಾಗಿಯನ್ನೂ ತಾಲ್ಲೂಕಿನ ರೈತರು ಇಲ್ಲಿಗೆ ಮಾರಾಟ ಮಾಡಿಲ್ಲ. ಖರೀದಿ ಕೇಂದ್ರ ರೈತರೇ ಇಲ್ಲದೆ ಬಿಕೋ ಎನ್ನುತ್ತಿದೆ.

ಜ. 1ರಂದು ರಾಗಿ ಖರೀದಿ ಕೇಂದ್ರವನ್ನು ಪಟ್ಟಣದಲ್ಲಿ ತೆರೆಯಲಾಗಿದೆ. ಎಫ್‌ಎಕ್ಯೂ ದರ್ಜೆಯ ರಾಗಿಯನ್ನು ಮಾತ್ರ ಈ ಖರೀದಿ ಕೇಂದ್ರದಲ್ಲಿ ಖರೀದಿ ಮಾಡಲಾಗುತ್ತದೆ. ಪ್ರತಿ ಕ್ವಿಂಟಲ್ ರಾಗಿಗೆ ಕೇಂದ್ರ ಸರ್ಕಾರದ ₹ 1900 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹ 400 ನೀಡಿ ಖರೀದಿ ಮಾಡಲಾಗುವುದು ಎಂದು ಫಲಕದಲ್ಲಿ ನಮೂದಿಸಲಾಗಿದೆ. ಆದರೆ ಖಾಸಗಿ ಖರೀದಿದಾರರು ಕ್ವಿಂಟಲ್ ರಾಗಿಯನ್ನು ₹ 2500ರಿಂದ ₹ 2600ಕ್ಕೆ ಖರೀದಿ ಮಾಡುತ್ತಿದ್ದಾರೆ. ಹೀಗಿರುವಾಗ ಕಡಿಮೆ ಬೆಲೆ ನೀಡುವ ರಾಗಿ ಖರೀದಿ ಕೇಂದ್ರಕ್ಕೆ ರೈತರು ಯಾಕೆ ತಾನೆ ರಾಗಿ ತಂದು ಮಾರಾಟ ಮಾಡುತ್ತಾರೆ ಎಂಬುದು ಪ್ರಶ್ನೆಯಾಗಿದೆ.

‘ಒಂಬತ್ತು ದಿನಗಳಲ್ಲಿ ಒಬ್ಬರೂ ರಾಗಿ ಮಾರಾಟ ಮಾಡಿಲ್ಲ. ರಾಗಿ ಖರೀದಿಸಲು ಈ ಬಾರಿ ಇಲಾಖೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ರೈತರು ಬೆಳೆ ದೃಢೀಕರಣ ಪತ್ರ, ಪಹಣಿ, ಆಧಾರ್ ಕಾರ್ಡ್‌ನೊಂದಿಗೆ ಬಂದು ಬಯೋಮೆಟ್ರಿಕ್ ನೀಡಬೇಕಾಗಿದೆ. ಬಯೋಮೆಟ್ರಿಕ್ ನೀಡಿದಾಗ ಆ ರೈತರ ಸಾಚಾತನವು ತಂತ್ರಜ್ಞಾನದ ಮೂಲಕ ಖಾತರಿಯಾಗುತ್ತದೆ. ನಂತರ ರೈತರು ತಂದಿರುವ ರಾಗಿಯನ್ನು ಜರಡಿ ಹಾಕಿ, ಖರೀದಿ ಮಾಡಲಾಗುವುದು.

ರೈತರು ನೀಡಿದ ರಾಗಿಯ ಹಣವನ್ನು ನೇರವಾಗಿ ರೈತರ ಖಾತೆಗೆ ಆನ್‌ಲೈನ್ ಮೂಲಕ ಜಮೆ ಮಾಡಲಾಗುತ್ತದೆ. ಖಾಸಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವುದರಿಂದ ಈ ಕೇಂದ್ರಕ್ಕೆ ಇದುವರೆಗೆ ಒಂದು ಚೀಲ ರಾಗಿಯನ್ನೂ ಮಾರಾಟ ಮಾಡಿಲ್ಲ. ಇಬ್ಬರು ಸಹಾಯಕರು ಇಲ್ಲಿದ್ದು, ರಾಗಿಯನ್ನು ದಾಸ್ತಾನು ಮಾಡಲು ಗೊದಾಮು ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ’ ಎಂದು ಖರೀದಿ ಕೇಂದ್ರದ ಅಧಿಕಾರಿ ಯು. ಶಿವಾನಂದ ಮಾಹಿತಿ ನೀಡಿದರು.

ಈ ಬಾರಿ ತಾಲ್ಲೂಕಿನಾದ್ಯಂತ ಕೇವಲ 4314 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯವಾಗಿತ್ತು. ರೈತರು ಬೆಳೆದಿರುವ ರಾಗಿಯಲ್ಲಿ ಅರ್ಧ ಭಾಗ ಸ್ವಂತಕ್ಕೆ ಉಪಯೋಗ ಮಾಡಲಾಗುತ್ತದೆ. ಈ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರಕ್ಕಿಂತ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕಾಗಿದೆ. ಯಾಕೆಂದರೆ, ಇಡೀ ತಾಲ್ಲೂಕಿನಲ್ಲಿ ಈ ಬಾರಿ 25,170 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಬೆಳೆಯಲಾಗಿದೆ. ಮೆಕ್ಕೆಜೋಳ ಬೆಲೆ ಖಾಸಗಿ ಮಾರುಕಟ್ಟೆಯಲ್ಲಿ ಕೇವಲ ₹ 1100ರಿಂದ ₨ 1200 ಇದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಾಗೇನಹಳ್ಳಿ ಲಕ್ಷ್ಮೀಪತಿ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry