ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪ ಭೂಮಿಯಲ್ಲಿ ಸಮೃದ್ಧ ಟೊಮೆಟೊ ಬೆಳೆದ ರೈತ

Last Updated 10 ಜನವರಿ 2018, 9:14 IST
ಅಕ್ಷರ ಗಾತ್ರ

ದಾವಣಗೆರೆ: ಭೂಮಿ ಇದ್ದು, ಕೃಷಿಯಿಂದ ಹಿಂದೆ ಸರಿಯುವ ಜನರೇ ಇಂದು ಹೆಚ್ಚು. ಆದರೆ ಇಲ್ಲಿನ ರೈತರೊಬ್ಬರು ಪಿತ್ರಾರ್ಜಿತವಾಗಿ ಬಂದ ಒಂದೂವರೆ ಎಕರೆ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನದ ಪ್ಲಾಸ್ಟಿಕ್‌ ಹೊದಿಕೆ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು 45 ಟನ್‌ ಟೊಮೆಟೊ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಸಮೀಪದ ಕೋಡಿಕೊಪ್ಪ ಗ್ರಾಮದ ನಾಗರಾಜಪ್ಪ ಈ ಸಾಧನೆ ಮಾಡಿದವರು. ಪ್ರಾರಂಭದಲ್ಲಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ಇವರು, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ನಾಲ್ಕೈದು ವರ್ಷಗಳಿಂದ ಆಧುನಿಕ ಬೆಳೆ ವಿಧಾನ ಅಳವಡಿಸಿಕೊಂಡಿದ್ದಾರೆ. ಸ್ವಂತ ಕೊಳವೆಬಾವಿ ನೀರಿನಲ್ಲಿ ಉತ್ತಮ ಬೆಳೆ ಬೆಳೆದು, ಅಧಿಕ ಲಾಭ ಗಳಿಸಿದ್ದಾರೆ.

ತರಕಾರಿಗೆ ಕೋಡಿಕೊಪ್ಪ ಪ್ರಸಿದ್ಧಿ: ಕೋಡಿಕೊಪ್ಪ ತರಕಾರಿ ಬೆಳೆಗೆ ಹೆಚ್ಚು ಪ್ರಸಿದ್ಧಿ. ನಾಗರಾಜಪ್ಪ ಅವರ ಜಮೀನು ‌ಮರಳು ಮಿಶ್ರಿತ ಕೆಂಪು ಮಣ್ಣಿನದಾಗಿದ್ದು, ಹೆಚ್ಚು ಫಲವತ್ತತೆಯಿಂದ ಕೂಡಿದೆ. ರೈತರು ತರಕಾರಿ ಬೆಳೆಯುವ ಜಮೀನುಗಳಿಗೆ ಖರೀದಿದಾರರೇ ನೇರ ಭೇಟಿ ನೀಡಿ ತರಕಾರಿ ಖರೀದಿಸಿ, ನ್ಯಾಮತಿ ಎಪಿಎಂಸಿಗೆ ಒಯ್ಯುತ್ತಾರೆ.

ಪ್ಲಾಸ್ಟಿಕ್ ಹೊದಿಕೆ ಅಳವಡಿಸುವ ವಿಧಾನ: ಟೊಮೆಟೊ ನಾಟಿ ಮಾಡುವ ಮುನ್ನ ಎರಡೂ ತಗ್ಗುಗಳ ನಡುವೆ ನಾಲ್ಕು ಅಡಿ ಸಾಲಿನಿಂದ ಸಾಲಿಗೆ ಏರುಮಡಿ ಮಾಡಿಕೊಳ್ಳಲಾಗುವುದು. ಈ ಮಡಿಗಳು ತಂಬಾಕು, ಸೆಣಬು ಬೆಳೆಯುವ ಮಡಿಗಳ ಮಾದರಿ ಯಲ್ಲಿರುತ್ತವೆ. ಟೊಮೆಟೊ ಸಸಿ ನೆಡುವ ಜಾಗಕ್ಕೆ ಎರಡು ಅಡಿಗೆ ಒಂದರಂತೆ ಡ್ರಿಪ್‌ ಮೂಲಕ ರಂಧ್ರ ಮಾಡಿ, ಸಸಿಗೆ ನೀರು ಹನಿಸಲಾಗುವುದು. ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಅಗತ್ಯ ಗೊಬ್ಬರ ನೀಡಿ ಪ್ಲಾಸ್ಟಿಕ್‌ ಹೊದಿಕೆ ಹಾಸಿ, ನಂತರ ನಾಟಿ ಮಾಡಲಾಗುವುದು.

ಪ್ಲಾಸ್ಟಿಕ್‌ ಮಲ್ಚಿಂಗ್‌ ಹೊರಮುಖ ಸಿಲ್ವರ್‌, ಒಳಮುಖ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹಾಗಾಗಿ ಅದು ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಸ್ಪರ್ಶಿಸುವುದನ್ನು ತಡೆಹಿಡಿದು ಭೂಮಿಯಲ್ಲಿನ ತೇವಾಂಶ ರಕ್ಷಿಸುತ್ತದೆ. ಜತೆಗೆ ಬೆಳೆಗೆ ರೋಗ, ಕಳೆ ಆಗದಂತೆ ತಡೆಯುತ್ತದೆ. ಇದರಿಂದ ಉತ್ತಮ ಬೆಳೆ ಬರುವ ಜತೆಗೆ ರೈತರಿಗೆ ಹೆಚ್ಚು ಲಾಭವಾಗುತ್ತದೆ.

ಗೊಬ್ಬರ, ಔಷಧ ಸಿಂಪರಣೆ ವಿಧಾನ: ಒಂದು ಎಕರೆ ಟೊಮೆಟೊ ಬೆಳೆಗೆ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ, ಎರಡೂವರೆ ಕ್ವಿಂಟಲ್‌ ಬೇವಿನ ಹಿಂಡಿ, 25 ಕೆ.ಜಿ. ಬಯೋವೀಟಾ, ಡಿಎಪಿ 1 ಕ್ವಿಂಟಲ್‌, 4 ಕೆ.ಜಿ. ಟೈಕೋ ಡರ್ಮಾದಂತಹ ಗೊಬ್ಬರವನ್ನು ಹಾಕಲಾಗುವುದು. ರೆಡ್‌ ಮಿಲ್‌, ಪ್ಲೋರಿ ಪ್ಯಾರಿಪಸ್ ಔಷಧವನ್ನು ನಾಟಿ ಮಾಡಿದ 1 ವಾರದಲ್ಲಿ ಸಿಂಪರಣೆ ಮಾಡಬೇಕು. ನಂತರ 15 ದಿನಕ್ಕೊಮ್ಮೆ ವಾತಾವರಣ, ರೋಗಬಾಧೆ ಪ್ರಮಾಣ ನೋಡಿಕೊಂಡು ಬೆಳೆಗೆ ಔಷಧ ಸಿಂಪರಣೆ ಮಾಡಬೇಕು. ಇದಕ್ಕೆ ಅಧಿಕಾರಿಗಳ ಸಲಹೆ ಕೂಡ ಮುಖ್ಯ ಎನ್ನುತ್ತಾರೆ ನಾಗರಾಜಪ್ಪ.

ರೈತನ ಯಶೋಗಾಥೆ: ಕಳೆದ ಅಕ್ಟೋಬರ್, ನವೆಂಬರ್‌ನಲ್ಲಿ 25 ಕೆ.ಜಿ.ಬಾಕ್ಸ್‌ ಒಂದಕ್ಕೆ ₹ 800ವರೆಗೂ ದರ ಇತ್ತು. ಆ ಸಮಯದಲ್ಲಿ ಕೆ.ಜಿ. ಟೊಮೆಟೊವನ್ನು ₹ 30ರವರೆಗೂ ಮಾರಿದ್ದುಂಟು. ನಂತರ ಕೆ.ಜಿಗೆ ₹ 10ಕ್ಕೆ ಕುಸಿಯಿತು. ಹೀಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ಲಾಭ ಪಡೆಯಲು ಸಾಧ್ಯವಾಯಿತು. ಈಗ ಬಾಕ್ಸ್‌ ಒಂದಕ್ಕೆ ₹ 70 ಮಾತ್ರ ಇದೆ. ಇದು ಕೂಲಿಗೂ ಸಾಲುತ್ತಿಲ್ಲ. ಇಳುವರಿ ಹೆಚ್ಚಾಗಿರುವುದರಿಂದ ಅಂತಹ ನಷ್ಟವೇನೂ ಆಗುವುದಿಲ್ಲ ಎನ್ನುತ್ತಾರೆ ಎನ್ನುತ್ತಾರೆ ರೈತ.

ಅಧಿಕ ಇಳುವರಿ, ನೆರೆ ರಾಜ್ಯದಿಂದ ಆಮದು, ಒಂದೇ ಬೆಳೆಯನ್ನು ಹೆಚ್ಚು ಬೆಳೆಯುವುದರಿಂದ ಇಲ್ಲಿನ ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಆಗುವುದು ಸಾಮಾನ್ಯ. ಚಳಿಗಾಲದಲ್ಲಿ ಟೊಮೆಟೊ ಬೆಳೆಯ ಹೆಚ್ಚು ಇಳುವರಿ ಬರಲಿದ್ದು, ವರ್ಷವಿಡೀ ರೈತರು ಯಾವ ಋತುವಿನಲ್ಲಿ ನಾಟಿ ಮಾಡಬೇಕು ಎಂಬುದರ ಬಗ್ಗೆ ದೂರದೃಷ್ಟಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿ ರೇಖ್ಯಾನಾಯ್ಕ.

ಪ್ಲಾಸ್ಟಿಕ್‌ ಹೊದಿಕೆ, ಹನಿ ನೀರಾವರಿ ಪದ್ಧತಿಯಲ್ಲಿ ಎಫ್ 1 ಹೈಬ್ರೀಡ್ ಟೊಮೆಟೊ ಬೆಳೆಯುವ ತಾಲ್ಲೂಕಿನ ಕ್ಲಸ್ಟರ್‌ ಭಾಗದ ಗ್ರಾಮಗಳಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ರೈತರಿಗೆ ಇಲಾಖೆಯಿಂದ ಸಹಾಯಧನವನ್ನು ನೀಡಲಾಗುತ್ತದೆ. ಹಾಗಾಗಿ ಈ ರೀತಿಯ ವೈಜ್ಞಾನಿಕ ಮಾದರಿಯಲ್ಲಿ ತರಕಾರಿ ಬೆಳೆಯುವ ರೈತರು ಸದಾ ಇಲಾಖೆಯ ಸಂಪರ್ಕದಲ್ಲಿರಬೇಕು. ಇಲಾಖೆ ರೈತರಿಗೆ ಮಾಹಿತಿ ನೀಡಲು ಸದಾ ಉತ್ಸುಕತೆಯಿಂದ ಸಿದ್ಧವಿದೆ ಎನ್ನುತ್ತಾರೆ ಅಧಿಕಾರಿ.

ಎಕರೆಗೆ ₹ 25 ಸಾವಿರ ಪ್ರೋತ್ಸಾಹಧನ

ವೈಜ್ಞಾನಿಕ ಹನಿ ನೀರಾವರಿ ಪದ್ಧತಿಯಲ್ಲಿ, ಮೊದಲ ಬಾರಿ ಟೊಮೆಟೊ ಬೆಳೆಯುವ ರೈತರಿಗೆ ಪ್ಲಾಸ್ಟಿಕ್‌ ಹೊದಿಕೆ ಸೇರಿದಂತೆ ಇತರೆ ಸಲಕರಣೆ ಕೊಳ್ಳಲು ಎಕರೆಗೆ ₹ 25 ಸಾವಿರ, ಹೆಕ್ಟೇರ್‌ಗೆ ₹ 50 ಸಾವಿರ ಪ್ರೋತ್ಸಾಹಧನವನ್ನು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೀಡಲಾಗುತ್ತಿದೆ. ಈ ರೀತಿಯ ಬೆಳೆಯಲ್ಲಿ ಹೆಚ್ಚು ಇಳುವರಿ, ಅಧಿಕ ಲಾಭ ಬರುವುದರಿಂದ ರೈತರಿಗೆ ಕಡಿಮೆ ಬೆಲೆ ಸಿಕ್ಕರೂ ಯಾವುದೇ ರೀತಿ ನಷ್ಟ ಉಂಟಾಗುವುದಿಲ್ಲ ಎಂದು ಬೆಳಗುತ್ತಿ ರೈತ ಸಂಪರ್ಕ ಇಲಾಖೆ ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ ರೇಖ್ಯಾನಾಯ್ಕ ತಿಳಿಸಿದರು.

* * 

ಈಚಿನ ದಿನಗಳಲ್ಲಿ ಕೂಲಿಕಾರರ ಕೊರತೆ, ಕಡಿಮೆ ಬೆಲೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾಗಿ ಸರ್ಕಾರ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು.
ನಾಗರಾಜಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT