ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರವೇ ಆಭರಣವಾದಾಗ!

ಬೆಳದಿಂಗಳು
Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ಕಾಲಿದಾಸ ಸಂಸ್ಕೃತದ ಮಹಾಕವಿಯಷ್ಟೆ ಅಲ್ಲ, ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲೂ ಸೇರತಕ್ಕವನು. ಅವನು ನಮ್ಮ ರಾಷ್ಟ್ರಕವಿಯೇ ಹೌದು. ಅವನ ರಚನೆಗಳಾದ ಮೇಘದೂತಮ್‌, ಅಭಿಜ್ಞಾನ ಶಾಕುಂತಲಮ್‌, ಕುಮಾರಸಂಭವಮ್, ರಘುವಂಶಮ್ – ವಾಙ್ಮಯಪ್ರಪಂಚದ ಅಪೂರ್ವ ರತ್ನಗಳೇ ಸರಿ. ಹೀಗಿದ್ದರೂ ಅವನ ಜೀವನದ ಬಗ್ಗೆ ವಿವರಗಳು ಸಿಗುವುದಿಲ್ಲ. ಆದರೆ ಅವನ ಕೃತಿಗಳಲ್ಲಿಯೇ ಅವನ ವ್ಯಕ್ತಿತ್ವವನ್ನು ಕಾಣಬಹುದು ಎಂದರೆ ಅದೇನೂ ತಪ್ಪಾಗದು.

ಕಾಲಿದಾಸನ ಅತ್ಯಂತ ಪ್ರೌಢಕಾವ್ಯವೂ ಶ್ರೇಷ್ಠಕಾವ್ಯವೂ ಎಂದರೆ ರಘುವಂಶ ಎನ್ನುವುದನ್ನು ವಿದ್ವಾಂಸರೆಲ್ಲರೂ ಒಪ್ಪುತ್ತಾರೆ. ಅವನ ಕಾವ್ಯಶಕ್ತಿಯ ಪರಿಪೂರ್ಣತೆಗೂ ಅದು ನಿದರ್ಶನದಂತಿದೆ. ಅವನ ಪ್ರಬುದ್ಧತೆಗೂ ಸಾಕ್ಷ್ಯವಾಗಿದೆ. ಶ್ರೀರಾಮನಂಥವನು ಹುಟ್ಟಿದ ವಂಶವೇ ರಘುವಂಶ; ಅವನಂತೆಯೇ ಇನ್ನೂ ಹಲವರು ಮಹಾತ್ಮರು ಆ ವಂಶದಲ್ಲಿ ಜನಿಸಿ ಕೀರ್ತಿತರಾಗಿದ್ದರು. ನೂರಾರು ವರ್ಷಗಳು ರಾಜ್ಯವನ್ನು ನಡೆಸಿ, ಪ್ರಜೆಗಳ ಪಾಲಿಗೆ ದೇವತೆಗಳೇ ಎನಿಸಿದ್ದವರು ಆ ವಂಶದ ರಾಜರು. ಹೀಗಿದ್ದರೂ ಆ ಆದರ್ಶಕುಲದಲ್ಲಿ ಭ್ರಷ್ಟನಾದವನು ಹುಟ್ಟುತ್ತಾನೆ; ಕೊನೆಗೆ ರಘುವಂಶ ಅವನತಿಯ ಹಾದಿಯನ್ನು ಹಿಡಿಯುತ್ತದೆ. ಇಂಥ ರಘುವಂಶದ ಏಳು–ಬೀಳುಗಳ ಚಿತ್ರಣವೇ ‘ರಘುವಂಶ’ ಮಹಾಕಾವ್ಯದ ವಸ್ತು.

ರಾಜರ ಜೀವನಚರಿತ್ರೆಗಷ್ಟೆ ಸೀಮಿತವಾಗಬಹುದಾಗಿದ್ದ ಕಾವ್ಯವನ್ನು ಸಂಸ್ಕೃತಭಾಷೆಯ ಶ್ರೇಷ್ಠ ಕಾವ್ಯವನ್ನಾಗಿಸಿದ್ದು ಕಾಲಿದಾಸನ ಮಹಾಪ್ರತಿಭೆಯ ದರ್ಶನವೇ ಹೌದು. ಜೀವನದ ಹಲವು ವಿವರಗಳ ಆಳವಾದ ಚಿಂತನೆಯನ್ನೂ ಈ ಕೃತಿಯಲ್ಲಿ ಕಾಣಬಹುದು; ಮನುಷ್ಯನ ಸಾರ್ಥಕತೆಯ ಗೊತ್ತು–ಗುರಿಗಳನ್ನೂ ಇಲ್ಲಿ ಸಮೃದ್ಧಿಯಾಗಿ ನೋಡಬಹುದು. ಪುರುಷಾರ್ಥಗಳ ಮೀಮಾಂಸೆಗೆ ರಘುವಂಶದಂಥ ಮತ್ತೊಂದು ಮಹಾಕಾವ್ಯ ಸಿಗಲಾರದೇನೋ! ಆದರೆ ಎಲ್ಲಿಯೂ ವೈಚಾರಿಕತೆ ವಾಚ್ಯವಾಗಿಲ್ಲ; ಕವಿ ಎಲ್ಲಿಯೂ ಭಾಷಣವನ್ನು ಮಾಡುವುದಿಲ್ಲ. ಕಾವ್ಯಮರ್ಯಾದೆಯ ಬೆಳಕಿನಲ್ಲಿಯೇ ಜೀವನಮೀಮಾಂಸೆಯನ್ನು ನಡೆಸಿರುವುದು ಕಾಲಿದಾಸನ ಹಿರಿಮೆ.

ಬಹುಶಃ ಕಾಲಿದಾಸ ಈ ಕೃತಿಯನ್ನು ರಚಿಸುವ ವೇಳೆಗೆ ಸಾಕಷ್ಟು ಪ್ರಖ್ಯಾತನಾಗಿದ್ದನೆಂದು ಊಹಿಸಬಹುದು. ಅವನ ಆಲೋಚನಾಶಕ್ತಿಗೂ ಸಮಗ್ರತೆ ಒದಗಿತ್ತು. ಕಾವ್ಯಶಕ್ತಿಯ ಪ್ರತಿಭೆಯೂ ಉತ್ತುಂಗದಲ್ಲಿತ್ತು. ಹೀಗೆ ಎಲ್ಲ ದೃಷ್ಟಿಯಿಂದಲೂ ಎತ್ತರದ ಸ್ಥಾನದಲ್ಲಿದ್ದವನು ಅವನು. ಅಂಥ ಸಂದರ್ಭದಲ್ಲಿ ಯಾರಾದರೂ ಸುಲಭವಾಗಿ ಎಚ್ಚರ ತಪ್ಪಬಹುದು; ಅಹಂಕಾರದಿಂದ ಬೀಗಬಹುದು; ಅಧಿಕಾರವಾಣಿಯಿಂದ ಮಾತನಾಡಬಹುದು. ಆದರೆ ಕಾಲಿದಾಸ ಇದಕ್ಕೆ ಭಿನ್ನವಾಗಿಯೇ ನಡೆದುಕೊಂಡವನು; ಅವನ ವ್ಯಕ್ತಿತ್ವದ ಪರಿಪೂರ್ಣತೆಯನ್ನೂ ಪರಿಪಕ್ವತೆಯನ್ನೂ ರಘುವಂಶದ ಮೊದಲ ಸರ್ಗದಲ್ಲಿಯೇ ಕಾಣಬಹುದು. ಅಲ್ಲಿಯ ಎರಡನೇ ಶ್ಲೋಕವನ್ನೇ ಇಲ್ಲಿ ಉದಾಹರಿಸಬಹುದು:

ಕ್ವ ಸೂರ್ಯಪ್ರಭವೋ ವಂಶಃ ಕ್ವ ಚಾಲ್ಪವಿಷಯಾ ಮತಿಃ |

ತಿತೀರ್ಷದುಸ್ತರಂ ಮೋಹಾದುಡುಪೇನಾಸ್ಮಿ ಸಾಗರಮ್‌ ||

‘ಎಲ್ಲಿಯ ಸೂರ್ಯವಂಶ? ಎಲ್ಲಿಯ ಸ್ವಲ್ಪವೇ ತಿಳಿದಿರುವ ನನ್ನ ಅಲ್ಪಮತಿ? ನನ್ನ ಈ ಕಾವ್ಯರಚನೆಯ ಕೆಲಸ ಹೇಗಿದೆಯೆಂದರೆ, ದಾಟಲು ಅಸಾಧ್ಯವಾದ ಸಮುದ್ರವನ್ನು ತೆಪ್ಪದಿಂದ ದಾಟಲು ಪ್ರಯತ್ನಿಸುತ್ತಿರುವಂತಿದೆ!’ ಇದು ಈ ಶ್ಲೋಕದ ಭಾವ.

ಮುಂದಿನ ಶ್ಲೋಕ ಕೂಡ ಇದೇ ಭಾವವನ್ನು ಪ್ರಕಟಿಸುತ್ತಿದೆ – ಕುಳ್ಳಗಿರುವ ವ್ಯಕ್ತಿಯು ಎತ್ತರದಲ್ಲಿರುವ ವಸ್ತುವನ್ನು ಬಯಸಿ ಅಪಹಾಸ್ಯಕ್ಕೆ ತುತ್ತಾಗುತ್ತಾರಷ್ಟೆ; ಅಂತೆಯೇ ನನ್ನ ಈಗಿನ ಕಾವ್ಯರಚನೆಯ ಪ್ರಯತ್ನ ಕೂಡ ಹಾಸ್ಯಾಸ್ಪದವಾಗಿದೆ – ಎಂದಿದ್ದಾನೆ, ಕಾಲಿದಾಸ.

ಕಾಲಿದಾಸನಂಥ ಕಾಲಿದಾಸನೇ ಈ ಮಾತುಗಳನ್ನು ಹೇಳಿರುವುದನ್ನು ನಾವು ಗಮನಿಸಬೇಕು. ಇಡಿಯ ಸಂಸ್ಕೃತವಾಙ್ಮಯದಲ್ಲಿ ವಾಲ್ಮೀಕಿ–ವ್ಯಾಸರ ತರುವಾಯದ ಸ್ಥಾನವನ್ನು ಅಲಂಕರಿಸಿರುವವನು ಅವನು. ಅಂಥ ಪ್ರತಿಭಾಶಾಲಿಯೂ ವ್ಯುತ್ಪತ್ತಿಶಾಲಿಯೂ ಎಷ್ಟು ವಿನಯಶಾಲಿಯೂ ಆಗಿದ್ದಾನೆ ಎನ್ನುವುದು ನಮ್ಮ ಆತ್ಮಾವಲೋಕನಕ್ಕೆ ಕಾರಣವಾಗಬೇಕು. ‘ಕವಿಕುಲಗುರು’ ಎಂದು ಕೀರ್ತಿನನಾದವನು ಅವನು. ಆದರೆ ನನಗೆ ತಿಳಿದಿರುವುದು ಸ್ವಲ್ಪ ಎನ್ನುತ್ತಿದ್ದಾನೆ.

ಆದರೆ ಸ್ವಲ್ಪವೇ ತಿಳಿದಿದ್ದರೂ ಸರ್ವಜ್ಞರಂತೆ ವರ್ತಿಸುವುದು ನಮ್ಮ ಯುಗಧರ್ಮವಾಗಿದೆ. ವಿನಯ ಎನ್ನುವುದು ನಮ್ಮ ಕಾಲದಿಂದಲೇ ಮರೆಯಾಗಿರುವ ವಿವರವಾಗಿಬಿಟ್ಟಿದೆ. ಸ್ವಲ್ಪ ತಿಳಿದಿದ್ದರೂ ಸರಿ, ಅದನ್ನೇ ಬೆಟ್ಟದಂತೆ ಪ್ರದರ್ಶಿಸುವುದೇ ನಮ್ಮ ಕಾಲದ ಜಾಣ್ಮೆ ಎನಿಸಿದೆ. ನನ್ನ ಶಕ್ತಿ ಎಷ್ಟು, ನನ್ನ ತಿಳಿವಳಿಕೆ ಎಂಥದು, ನನ್ನ ಪ್ರತಿಭೆಯ ವ್ಯಾಪ್ತಿ ಎಲ್ಲಿಯವರೆಗೆ, ನನ್ನ ಸಾಧನೆಯ ಎಲ್ಲೆಯ ಕೊನೆ ಎಲ್ಲಿದೆ, ನನ್ನ ಕೊರತೆಗಳು ಎಷ್ಟೊಂದು, ನನ್ನ ಮಿತಿಗಳ ಪಟ್ಟಿಯ ಉದ್ದ ಎಷ್ಟು – ಇಂಥ ಆತ್ಮನಿರೀಕ್ಷಣೆಯ ಮಾನದಂಡಗಳನ್ನೇ ನಾವು ಕಳೆದುಕೊಂಡಿದ್ದೇವೆ. ಅಹಂಕಾರವನ್ನೇ ಪ್ರತಿಭೆಯ ಅಲಂಕಾರ ಎಂದು ಬೀಗುತ್ತಿರುವ ನಮಗೆ ಕಾಳಿದಾಸನ ಮಾತು ಕೇಳಿಸುತ್ತದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT