ಈ ವರ್ಷ ಇದೇ ನನ್ನ ನಿರ್ಧಾರ

7

ಈ ವರ್ಷ ಇದೇ ನನ್ನ ನಿರ್ಧಾರ

Published:
Updated:
ಈ ವರ್ಷ ಇದೇ ನನ್ನ ನಿರ್ಧಾರ

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ದೂರವಿಡಬೇಕು ‘ಅಯ್ಯೋ, ಅಂದ್ಕೊಂಡಿದ್ನೆಲ್ಲಾ ಅನುಷ್ಠಾನಗೊಳಿಸಲು ಈ ವರ್ಷವೂ ಆಗ್ಲೇ ಇಲ್ಲ, ಎಷ್ಟೋ ಕನಸುಗಳು ಈಡೇರದೆ ಹಾಗೇ ಕುಂತಿವೆ’ ಅನ್ನೋದು ನನ್ನ ಪ್ರತೀ ವರ್ಷಾಂತ್ಯದ ಕಟ್ಟಕಡೆಯಲ್ಲಿ ಕಟ್ಟಿಟ್ಟ ಡೈಲಾಗು. ಅಬ್ಬಾ! ಈ ಬಾರಿ ವಾಡಿಕೆಯಂತೆ ತಾಜಾ ನಿರ್ಣಯಗಳನ್ನು ನನ್ನ ಸೋಮಾರಿತನ ದಿಂದ ಮಣ್ಣು ಪಾಲಾಗಲು ಬಿಡುವುದಿಲ್ಲವೆಂದು ಪಣ ತೊಟ್ಟಿದ್ದೇನೆ.

ಅಂದಹಾಗೆ ಈ ವರ್ಷ ನನ್ನ ಬದುಕಿನ ಪುಟಗಳಲ್ಲಿ ಸುಂದರ ಬದಲಾವಣೆ ತಂದುಕೊಳ್ಳಬೇಕೆಂದು ದೃಢಸಂಕಲ್ಪ ಕೈಗೊಂಡಿದ್ದೇನೆ. ನನಗೆ ಪರಮಾಪ್ತವಾಗಿದ್ದ ಸೋಮಾರಿತನವನ್ನು ಜಾಡಿಸಿ ಒದ್ದು ದೂರವಿಟ್ಟು ಇನ್ಯಾವತ್ತೂ ಹತ್ತಿರವೂ ಸುಳಿಯದಂತೆ ಜಾಗ್ರತೆ ವಹಿಸುತ್ತೇನೆ. ಐದು ಗಂಟೆಗೇ ತಟಕ್ಕನೆ ನಿದ್ರೆಯಿಂದ ಎದ್ದುಬಿಡುವ ಭಾರೀ ಸಾಧನೆಯನ್ನು ಡಿಸೆಂಬರ್‌ನಿಂದಲೇ ಅಭ್ಯಾಸ ಮಾಡಿಕೊಂಡು ಪಳಗಿದ್ದೇನೆ. ನೆಮ್ಮದಿಯ ಬದುಕಿಗೆ ದೂಡುವ ಒಳ್ಳೆಯ ಹವ್ಯಾಸಗಳನ್ನು ಅಳವಡಿಸಿಕೊಂಡು ಸದಾ ಏನಾದರೂ ಚಟುವಟಿಕೆಯಲ್ಲಿ ತೊಡಗಿಕೊಂಡು ಖುಷಿಯಿಂದಲೇ ದಿನಚರಿಯನ್ನು ತುಂಬಬೇಕೆಂದಿರುವೆ.

ಎಷ್ಟೇ ಎಡರು ತೊಡರು ಎದುರಾದರೂ ಸದಾ ಹಸನ್ಮುಖಿಯಾಗಿರುವ ದುಸ್ಸಾಹಸವೇ ಈ ವರ್ಷದ ನನ್ನ ಮೊದಲ ಆದ್ಯತೆ. ಸತತ ಪ್ರಯತ್ನಗಳಿದ್ದರೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲವೆಂದು ಕೊರಗುತ್ತಾ ಕೂರುವ ಬದಲು, ಭರವಸೆಯನ್ನು ಬೆನ್ನಿಗಿಟ್ಟುಕೊಂಡು ಸಿಕ್ಕಿದ ಕೆಲಸವನ್ನೇ ಇಷ್ಟಪಟ್ಟು ಆಸ್ಥೆಯಿಂದ ಮಾಡಲು ಕಲಿಯುತ್ತೇನೆ.

ಬಹುಮುಖ್ಯವಾಗಿ ಮೊಬೈಲ್ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನ ಅನವಶ್ಯಕ ಬಳಕೆ ಮಾಡಿ ಕಾಲಹರಣದ ಜೊತೆಗೆ ಮನಸ್ಸನ್ನು ವಿನಾಕಾರಣ ಘಾಸಿ ಮಾಡಿಕೊಳ್ಳುವುದಕ್ಕೆ ಈ ವರ್ಷ ಆಸ್ಪದವಿರುವುದಿಲ್ಲ. ಅದರ ಬದಲಾಗಿ ಪುಸ್ತಕಗಳನ್ನು ಯೆಥೇಚ್ಛವಾಗಿ ಓದಿಕೊಳ್ಳಬೇಕು ಎಂಬುದು ಈ ವರ್ಷದ ಉತ್ಕಟ ಆಸೆ.

ಹೃದಯ ರವಿ ಬಿಡದಿ

* * 

ಖುಷಿಯಿಂದ ಸೇವೆ ಮಾಡುವೆ

ಹೀಗೇ ಇರಬೇಕು. ಇದನ್ನೇ ಮಾಡಬೇಕು, ಹೀಗೇ ದಿನಚರಿ ಬದಲಾಯಿಸಿಕೊಳ್ಳಬೇಕು ಎಂದು ಯಾವ ವರ್ಷವೂ ನಾನು ಯೋಜನೆ ಹಾಕಿಕೊಂಡಿಲ್ಲ. ಆದರೆ, ಈ ವರ್ಷ ಒಂದು ಕೆಲಸವನ್ನು ಮಾಡಲೇಬೇಕೆಂದು ನಿರ್ಧರಿಸಿದ್ದೇನೆ.

ಅದೇನೆಂದರೆ, ಈ ವರ್ಷ ನಾನು ಸಾಮಾಜಿಕವಾಗಿ ಬದಲಾಗಬೇಕು. ಅಂದರೆ ಜನರ ಮಧ್ಯ ಆತ್ಮೀಯವಾಗಿ ಬೆರೆಯಬೇಕೆಂದು ನಿರ್ಧರಿಸಿದ್ದೇನೆ. ನಾನು ಸಾರ್ವಜನಿಕ ಸೇವಕಿ (ಕಂದಾಯ ಇಲಾಖೆ). ಅದಕ್ಕಾಗಿ ಜನರು ಯಾವುದೇ ಕೆಲಸ ಅಂತ ನನ್ನ ಬಳಿ ಬಂದರೆ ನನ್ನಿಂದ ಸಾಧ್ಯವಾದಷ್ಟೂ ಸೇವೆ ಕೊಡಬೇಕು ಅಂತ ನಿರ್ಧರಿಸಿದ್ದೇನೆ.

ಈ ಹಿಂದೆ, ಜನ ಏನೋ ಕೆಲಸ ಅಂತ ಬಂದರೆ, ಒಂದೆರಡು ಸಲ ಸಮಾಧಾನದಿಂದ ಉತ್ತರಿಸುತ್ತಿದ್ದೆ. ಆದರೆ, ಅವರು ಪದೇ ಪದೇ ಕೇಳಿದರೆ ಸಿಟ್ಟಾಗಿ ರೇಗುತ್ತಿದ್ದೆ. ಈ ಮೇಡಂ ಬರೀ ಸಿಟ್ಟಿಗೆ ಬರ‍್ತಾರೆ. ಏನಾದರೂ ಕೇಳಿದ್ರೆ ಸರಿಯಾಗಿ ಹೇಳುವುದೇ ಇಲ್ಲ ಎಂದು ಬೈಯುತ್ತಾ ಹೋಗುತ್ತಾರೆ. ಆದ್ದರಿಂದ ಸಂಯಮ ಕಳೆದುಕೊಳ್ಳದೇ ಸಮಾಧಾನಚಿತ್ತದಿಂದಲೇ ಅವರಿಗೆ ತಿಳಿಯುವ ರೀತಿ ಸಂವಹನ ನಡೆಸಬೇಕು ಅಂತ ನಿರ್ಧರಿಸಿದ್ದೇನೆ.

ಸರಕಾರದ ಕೆಲಸ ದೇವರ ಕೆಲಸ ಎನ್ನುತ್ತಾರೆ. ಆದ್ದರಿಂದ ನಮ್ಮಿಂದ ಸಕಾಲದಲ್ಲಿ ಸೇವೆ ಸಿಕ್ಕಿದ್ದೇ ಆದಲ್ಲಿ ಅವರಿಗೆ ಆಗುವ ಖುಷಿಯ ಜೊತೆಗೆ ಆತ್ಮೀಯ ಭಾವ ಕೂಡ ಬೆಳೆಯುತ್ತದೆ. ಇದರಿಂದ ನನಗೂ ಖುಷಿ. ಸಾರ್ವಜನಿಕ ಸೇವೆ ಸಲ್ಲಿಸಲು ಒಂದು ಉತ್ತಮ ಅವಕಾಶ ನಮಗೆ ಸಿಕ್ಕಿದೆ ಅಂದಮೇಲೆ ಅದನ್ನು ಅಷ್ಟೇ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇನೆ.

ಸುಮನ ಜಿ.ಕೆ., ಆಳಂದ ಜಿ. ಕಲಬುರ್ಗಿ

* * 

ಮನೆ ಪಾಠ ಹೇಳಿಕೊಡುವ ಮನಸಿದೆ

ನಿನ್ನೆಗಿಂತ ನಾಳೆಗಳನ್ನು ವಿಭಿನ್ನವಾಗಿ ಕಳೆದು ಹೊಸ ಪ್ರಯತ್ನ, ಹೊಸ ದೃಷ್ಟಿಕೋನ ತಳೆಯುವ ಉತ್ಸುಕತೆಯಿಂದ ಬದುಕಿನ ಓಟದಲಿ ಈ ವರ್ಷ ಗುರಿಯ ಬೆನ್ಹತ್ತಬೇಕೆಂಬ ಉದ್ದೇಶ ನನ್ನದು. ಇನ್ನೇನು ಸ್ವಲ್ಪ ದಿನದಲ್ಲಿ ಓದು ಮುಗಿಯುತ್ತಾ ಬಂತು. ಉದ್ಯೋಗ ಹುಡುಕಿ ನೆಲೆ ಕಂಡುಕೊಳ್ಳುವ ಯೋಚನೆ ಒಂದೆಡೆಯಾದರೆ, ಇಷ್ಟಪಟ್ಟ ಹುಡುಗಿಯ ಮನೆಯವರನ್ನ ಭೇಟಿ ಮಾಡುವ ಗಟ್ಟಿ ನಿಲುವು ಈ ಬಾರಿಯದ್ದು.

ಓದಿಗೆ ಹೆಚ್ಚು ಸಮಯ ಮೀಸಲಿಟ್ಟು ನನ್ನಿಷ್ಟದ ಹಲವಾರು ಪುಸ್ತಕಗಳನ್ನು ಓದುವ ಅಚಲ ನಿರ್ಧಾರವೂ ಇದೆ. ಹಾಗೇ, ವಾರದಲ್ಲಿ ಒಂದು ದಿನವಾದರೂ ಕುಟುಂಬಸ್ಥರ ಜೊತೆ ಕಳೆಯಬೇಕೆನಿಸಿದೆ. ಪರಿಸರಸ್ನೇಹಿಯಾಗಿ ಮನೆಯ ಹಿತ್ತಲಿನಲ್ಲಿ ಇನ್ನಷ್ಟು ಸಸಿಗಳನ್ನ ತಂದು ನೆಡುವ ಯೋಜನೆ ಇದೆ.

ಹಳ್ಳಿಯ ಬಡ ಮಕ್ಕಳಿಗೆ ಉಚಿತವಾದ ಮನೆಪಾಠ ಹೇಳಿಕೊಡುವ ಆಲೋಚನೆ ಈ ವರ್ಷಕ್ಕೆ ಜೊತೆಯಾಗಿದೆ. ನೆಂಟರಿಷ್ಟರ ಊರಿಗೆ ನಾನು ಹೋಗುವುದೇ ಇಲ್ಲ. ಹೀಗಾಗಿ ನಾನೊಬ್ಬನಿದ್ದೇನೆ ಎಂಬುದನ್ನ ಅವರು ಮರೆತಂತಿದೆ. ಆದ್ದರಿಂದ ಸಮಯ ಸಿಕ್ಕರೆ ನೆಂಟರಿಷ್ಟರನ್ನು ಭೇಟಿ ಮಾಡಿ ಮಾತು ಬೆಳೆಸಬೇಕು. ಇವೆಲ್ಲ ಹೊಸ ವರ್ಷದ ಯೋಜನೆಯ ಪಟ್ಟಿಯಲ್ಲಿದೆ.

ಶ್ರೀಧರ ಬ ಪೂಜಾರ

* * 

ರೈತರನ್ನು ಬೆಂಬಲಿಸುವ ಉದ್ದೇಶ ಈ ಬಾರಿ

ಸಂಕಷ್ಟದಲ್ಲಿರುವ ರೈತರಿಗೆ ಕಿಂಚಿತ್ತಾದರೂ ನನ್ನಿಂದಾಗುವ ಸಹಾಯ ಮಾಡುವ ನಿರ್ಧಾರವನ್ನು ಈ ವರ್ಷ ಹಮ್ಮಿಕೊಂಡಿದ್ದೇನೆ. ಹಣ್ಣು ತರಕಾರಿಗಳನ್ನು ಮಾಲ್‌ಗಳಲ್ಲಿ, ತರಕಾರಿ ಅಂಗಡಿಗಳಲ್ಲಿ ತೆಗೆದುಕೊಳ್ಳದೆ ಬೇಕಾದ ಹಣ್ಣು ತರಕಾರಿ ಸೊಪ್ಪುಗಳನ್ನು ರೈತರಿಂದಲೇ ಖರೀದಿಸುತ್ತೇನೆ. ಅವರು ಕೇಳಿದಷ್ಟು ಹಣ ಕೊಟ್ಟು ಚೌಕಾಸಿ ಮಾಡದೆ ಕೊಳ್ಳುತ್ತೇನೆ. ರೈತರನ್ನು ಬೆಂಬಲಿಸುತ್ತೇನೆ. ಮಾಡಿದ ಅಡುಗೆಯನ್ನು ಪೋಲು ಮಾಡದಂತೆ ನನ್ನ ಹೆಂಡತಿಗೂ ಹೇಳುತ್ತೇನೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ರೈತನಿಗೆ ಸಹಾಯವಾಗಬಹುದು ಎಂಬ ಆಸೆ ನನ್ನದು. ಇದನ್ನು ನಾನು ಖಂಡಿತ ಮಾಡೇ ಮಾಡುತ್ತೇನೆ.

–ಚಂದ್ರಶೇಖರ ಎಚ್‌. ಬಿ ಬೆಂಗಳೂರು

* * 

ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುವೆ

2018– ಹೊಸ ಖಾಲಿ ಪುಸ್ತಕದಂತೆ ಮುಂದೆ ನಿಂತಿದೆ. ಈ ಬಾರಿ, ಮಾಡಿದ ನಿರ್ಧಾರದಂತೆ ನಡೆದುಕೊಳ್ಳಲೇಬೇಕು ಎಂದು ತೀರ್ಮಾನಿಸಿದ್ದೇನೆ. ಸೂರ್ಯೋದಯ ನೋಡದೆ ವರುಷಗಳೇ ಕಳೆದು ಹೋಗಿವೆ, ಯಾವಾಗಲೂ ಸೂರ್ಯ ತನ್ನ ಬೆಳಗಿನ ಕರ್ತವ್ಯ ಶುರು ಮಾಡಿ, ಅಮ್ಮ ತಿಂಡಿ ತಯಾರಿ ಮಾಡಿದ ನಂತರವೇ ಏಳುತಿದ್ದ ನಾನು ಖಂಡಿತವಾಗಿಯೂ ಬೇಗ ಏಳುತ್ತೀನಿ ಎಂದು ನಿರ್ಧರಿಸಿದ್ದೇನೆ.

ಸೋಮಾರಿಯಂತೆ ಸದಾ ಟಿ.ವಿ ಮುಂದೆ ಕುಳಿತು ಕಾಲಹರಣ ಮಾಡುವ ಅಭ್ಯಾಸ ಕಡಿಮೆ ಮಾಡಬೇಕು ಎಂದು ನಿರ್ಧರಿಸಿಯಾಗಿದೆ. ಟಿ.ವಿಯಲ್ಲಿ ಧಾರಾವಾಹಿ ನೋಡಿ ನೋಡಿ ಈಗೀಗ ಅಳುವುದು ನಗುವುದು ಕೂಡ ಮೆಗಾ ಧಾರಾವಾಹಿಯಂತೆ ಜಾಸ್ತಿ ಆಗಿಬಿಟ್ಟಿದೆ. ಅದಕ್ಕಾಗಿ ಟಿ.ವಿ ನೋಡುವುದು ಕಡಿಮೆ ಮಾಡುವೆ.

ಸಿಗುವ ಸಮಯದಲ್ಲಿ ಕ್ರಿಯಾಶೀಲತೆಯಿಂದ ಆಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವ ಹಲವು ವರ್ಷಗಳ ಯೋಜನೆಯನ್ನು ಮತ್ತೆ ಹೆಕ್ಕಿಕೊಳ್ಳಬೇಕು. ರುಚಿ ರುಚಿ ತಿನಿಸು ಎಂದರೆ ಯಾರಿಗಿಷ್ಟವಿಲ್ಲ? ಆದ್ದರಿಂದ ಹೊಸ ರುಚಿಯ ಅಡುಗೆಗಳನ್ನು ಮಾಡುವುದನ್ನು ಕಲಿಯಬೇಕೆಂಬ ಬಯಕೆಗೆ ಈ ವರ್ಷ ಚಾಲ್ತಿ ಸಿಗಬಹುದು...

ರಂಜಿತಾ ಬಿ.ಕೆ. ಮಡಿಕೇರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry