ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣತ್ತಿಲ್‌ ಮುತ್ತಮಿತ್ತಲ್‌

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ಉದ್ಯಾನದಲ್ಲಿ ಸುತ್ತಾಡಲು ಬಂದ ಆ ಒಂಬತ್ತು ವರ್ಷದ ಮಗುವಿಗೆ ಗಾಲಿಕುರ್ಚಿಯಲ್ಲಿ ಕೂತಿದ್ದ ವ್ಯಕ್ತಿ ಕಾಣಿಸುತ್ತಾನೆ. ಅವನ ಜತೆ ಮಾತನಾಡಲು ತೊಡಗುತ್ತಾಳೆ. ತಾನು ತನ್ನ ಊರು ಬಿಟ್ಟು ಶ್ರೀಲಂಕಾಕ್ಕೆ ಬಂದಿದ್ದು, ತನ್ನ ನಿಜವಾದ ಅಮ್ಮನನ್ನು ನೋಡುವ ಆಸೆ, ಎಲ್ಲವನ್ನೂ ಹಂಚಿಕೊಳ್ಳುತ್ತಾಳೆ.

ಆ ಕ್ಷಣದಲ್ಲಿ ಆ ಮುಗ್ಧ ಮಗುವಿನೆದುರು ಅವನೂ ಮಗು. ಸ್ವಲ್ಪ ಹೊತ್ತಿನಲ್ಲಿ ಅವನಿಂದ ಬೀಳ್ಕೊಟ್ಟು ಈಚೆ ಬರುವಷ್ಟರಲ್ಲಿ ಗಾಲಿ ಕುರ್ಚಿಯಲ್ಲಿ ಕೂತಿದ್ದವ ಒಮ್ಮಿಂದೊಮ್ಮೆಲೇ ಎದ್ದು ರಸ್ತೆಯಲ್ಲಿ ಬರುತ್ತಿದ್ದ ಪೊಲೀಸ್‌ ಜೀಪಿನತ್ತ ಎಗರುತ್ತಾನೆ. ಕ್ಷಣಾರ್ಧದಲ್ಲಿ ದೊಡ್ಡ ಸ್ಫೋಟ. ಅವನ ದೇಹ, ಜೀಪು, ಪಕ್ಕದ ಕಟ್ಟಡ ಎಲ್ಲ ಛಿದ್ರ ಛಿದ್ರ. ಆ ಹುಡುಗಿ ಸಣ್ಣಪುಟ್ಟ ಸುಟ್ಟಗಾಯಗಳಾಗಿ ಬದುಕುಳಿಯುತ್ತಾಳೆ. ಆದರೆ ಆ ಮುಗ್ಧ ಮನಸ್ಸಿಗಾದ ಗಾಯ ಸಣ್ಣಪುಟ್ಟದ್ದೇ? ಈಗಷ್ಟೇ ಕೆನ್ನೆ ಸವರಿದ್ದ, ಅಕ್ಕರೆಯಿಂದ ಮಾತನಾಡಿದ್ದ ಮನುಷ್ಯ ಕ್ಷಣಾರ್ಧದಲ್ಲಿ ಬೂದಿಯಾಗಿಹೋದ, ತನ್ನಂಥದ್ದೇ ಎಷ್ಟೋ ಮನುಷ್ಯರನ್ನು ಬೂದಿಯಾಗಿಸಿದ ದೃಶ್ಯ ಆ ಎಳೆಯ ಮನಸ್ಸಿಗೆ ಎಂಥ  ಆಘಾತ ತಂದಿರಬಹುದು?

ಮನುಷ್ಯನ ಕ್ರೌರ್ಯದ ಅತಿರೇಕದ ಜ್ವಾಲೆಯಲ್ಲಿ ಮಗುತನ ನಲುಗುವ ಸನ್ನಿವೇಶವನ್ನು ಎದೆನಡುಗುವಂತೆ ತೋರಿಸುವ ಈ ದೃಶ್ಯ ಮಣಿರತ್ನಂ ನಿರ್ದೇಶನದ ‘ಕಣ್ಣತ್ತಿಲ್‌ ಮುತ್ತಮಿತ್ತಲ್‌’ ಸಿನಿಮಾದ್ದು. ಇದೊಂದು ದೃಶ್ಯವಷ್ಟೇ ಅಲ್ಲ, ಇಡೀ ಚಿತ್ರವೇ ಹಿಂಸೆ ಮತ್ತು ಪ್ರೀತಿಯ ಮುಖಾಮುಖಿಯನ್ನು ಬೇರೆ ಬೇರೆ ನೆಲೆಗಳಲ್ಲಿ ಮಾಡುತ್ತ ಹೋಗುತ್ತದೆ. ಈ ಎರಡನ್ನೂ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಆಗಿ ತೋರಿಸದೆ, ಹಿಂಸೆಯ ಹಿಂದಿನ ಶೋಷಿತರ ನೋವು ಮತ್ತು ಪ್ರೀತಿಯ ಹಿಂದಿನ ಕರುಳಬಳ್ಳಿ ಸಂಕಟ ಎರಡನ್ನೂ ಸಿನಿಮೀಯ ಚೌಕಟ್ಟಿನಲ್ಲಿಯೇ ತೆರೆದಿಡುವುದು ಈ ಚಿತ್ರದ ಹೆಚ್ಚುಗಾರಿಕೆ. ಇದು ನಿರ್ದೇಶಕ ಮಣಿರತ್ನಂ ಅವರ ಬಹುತೇಕ ಎಲ್ಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲದ್ರವ್ಯವೂ ಹೌದು. ಶ್ರೀಲಂಕಾದಲ್ಲಿ ನಡೆದ ‌ನಾಗರಿಕ ಯುದ್ಧದ ಪರಿಣಾಮವನ್ನು, ತಾಯಿಯನ್ನು ಹುಡುಕುತ್ತಾ ಹೋಗುವ ಮಗುವಿನ ಕಥೆಯ ಮೂಲಕ ನಿರ್ದೇಶಕರು ಸಿನಿಮಾ ಕಟ್ಟುತ್ತಾ ಹೋಗಿದ್ದಾರೆ. ಮಗು ಕಥನದ ಕೇಂದ್ರದಲ್ಲಿದ್ದ ಕಾರಣದಿಂದಲೇ ಸರಿ– ತಪ್ಪುಗಳ ಗೆರೆಗಳನ್ನು ಮೀರಿ ಬದುಕಿನ ದಾರುಣತೆಯನ್ನು ಕಾಣಿಸಲು ಸಾಧ್ಯವಾಗಿದೆ.  

2002ರಲ್ಲಿ ಬಿಡುಗಡೆಯಾದ ಈ ತಮಿಳು ಚಿತ್ರದ ಮುಖ್ಯಭೂಮಿಕೆಯಲ್ಲಿ ನಿಜವಾದ ತಾಯಿಯನ್ನು ಹುಡುಕುತ್ತ ಹೊರಡುವ ಮುಗ್ಧ ಹುಡುಗಿಯ ಪಾತ್ರದಲ್ಲಿ ಪಿ.ಎಸ್‌. ಕೀರ್ತನಾ ನಟಿಸಿದ್ದಾರೆ. ಆರ್‌. ಮಾಧವನ್‌, ಸಿಮ್ರನ್‌, ನಂದಿತಾ ದಾಸ್‌ ಜತೆಗೆ ಕನ್ನಡದ ಪ್ರಕಾಶ್‌ ರೈ ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಎ. ಆರ್‌. ರೆಹಮಾನ್‌ ಅವರ ಸಂಗೀತವೂ ಈ ಚಿತ್ರದ ಭಾವತೀವ್ರತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ರವಿ ಕೆ. ಚಂದ್ರನ್‌ ಅವರ ಛಾಯಾಗ್ರಹಣ ತೆರೆಯ ಮೇಲಿನ ಜನರ ಜತೆಗೆ ಅವರ ಜೀವನಕ್ಕೂ ಕಣ್ಣು ಕೊಟ್ಟಿದೆ. ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನೂ ಗೆದ್ದಿರುವ ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿ goo.gl/nsFA3W ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT