‘ಆಚಾರ್ಯರು ಗೆದ್ದೇ ಗೆಲ್ತಾರ‍್ರಿ’

7

‘ಆಚಾರ್ಯರು ಗೆದ್ದೇ ಗೆಲ್ತಾರ‍್ರಿ’

Published:
Updated:
‘ಆಚಾರ್ಯರು ಗೆದ್ದೇ ಗೆಲ್ತಾರ‍್ರಿ’

‘ಆಚಾರ್ಯರು ಫೈನಲ್‌ಗೆ ಬಂದೇ ಬರ್ತಾರ‍್ರೀ. ಅಷ್ಟೇ ಅಲ್ರೀ ಅವ್ರು ಸ್ಪರ್ಧೆ ಗೆಲ್ತಾರ‍್ರೀ, ನಮ್ಗ ಭಾಳ ವಿಶ್ವಾಸ ಐತ್ರಿ, ಒಳ್ಳೇವ್ರಿಗೆ ದೇವ್ರು ಒಳ್ಳೇದು ಮಾಡೇ ಮಾಡ್ತಾನ್ರೀ... ಅವರು ಗೆದ್ದು ಬರೋದನ್ನೇ ನಾವು ಎದುರು ನೋಡ್ತಾ ಅದೀವ್ರೀ’ ಎನ್ನುವ ವಿಶ್ವಾಸದ ನುಡಿಗಳನ್ನು ಆಡಿದವರು ‘ಬಿಗ್‌ ಬಾಸ್‌’ ಸೀಜನ್‌–5ರ ಸ್ಪರ್ಧಿ ಹುಬ್ಬಳ್ಳಿಯ ಪಂಡಿತ ಸಮೀರ ಆಚಾರ್ಯ ಮಣ್ಣೂರ ಅವರ ಪತ್ನಿ ಶ್ರಾವಣಿ.

ಮದುವೆಯಾಗಿ ಒಂದು ವರ್ಷ ಐದು ತಿಂಗಳು ಕಳೆದಿರುವ ಶ್ರಾವಣಿ ಅವರಿಗೆ, ಪತಿ ಸಮೀರ ಆಚಾರ್ಯ ಅವರು ಇಷ್ಟು ದಿನಗಳಿಂದ ಮನೆಯಲ್ಲಿ ಇಲ್ಲದೇ ಇರುವುದು ಸಹಜವಾಗಿ ಬೇಸರ ತಂದಿದೆ. ಕಳೆದ ಅ.15ರಿಂದ ಆಚಾರ್ಯರನ್ನು ಮುಖಾಮುಖಿಯಾಗದೇ, ಸಂವಹನವಿಲ್ಲದೇ ಕಾದಿದ್ದಾರೆ. ಅಷ್ಟಕ್ಕೂ ಇನ್ನು ಕೆಲವೇ ದಿನಗಳು ತಾನೇ? ಅವರು ಸ್ಪರ್ಧೆಯಲ್ಲಿ ಗೆದ್ದು ಖುಷಿಯಿಂದ ಮರಳಿ ಬರುತ್ತಾರೆ ಎನ್ನುವ ವಿಶ್ವಾಸವೇ ಅವರ ಮೊಗದಲ್ಲಿ ಮತ್ತೆ ನಗು ಮೂಡಿಸುತ್ತಿದೆ.

‘ಅವರನ್ನು ಇಷ್ಟು ದಿನ ನಾವ್ಯಾವತ್ತೂ ಬಿಟ್ಟು ಇದ್ದಿದ್ದಿಲ್ಲ. ಪ್ರತಿದಿನ ಆಚಾರ್ಯರು ಇಲ್ಲಿ ನಡೆಸುತ್ತಿದ್ದ ಭಾಗವತ ಪ್ರವಚನ, ಹವನ, ಜ್ಯೋತಿಷ... ಹೀಂಗ ಎಲ್ಲಾನೂ ಭಾಳ ಮಿಸ್‌ ಆಗೈತ್ರಿ, ಅವೆಲ್ಲ ಕೆಲ ದಿನಗಳ ಮಟ್ಟಿಗೆ ನಿಂತಾವ, ಆದ್ರ ಅವರನ್ನು ಪ್ರತಿದಿನ ಸಂಜೆ 8 ಗಂಟೆಗೆ ಟಿವಿಯಲ್ಲಿ ನೋಡ್ತೀವಲ್ರೀ, ಅದೇ ನಮ್ಗೆಲ್ಲ ಭಾಳ ಖುಷಿ ನೀಡ್ತದ್ರೀ. ಹೀಂಗಾಗಿ ಏನೇ ಕೆಲ್ಸಾ ಇದ್ರೂ ನಾವ್‌ ಸಂಜಿ 8 ಗಂಟೆಯೊಳಗ ಮುಗಿಸಿ, ಟಿ.ವಿ.ಮುಂದ ಕೂಡ್ತೀವ್ರೀ...’ ಎಂದು ಖುಷಿಯಾಗುತ್ತಾರೆ.

ಆಚಾರ್ಯರು ಎರಡು ಮುಖ್ಯವಾದ ಉದ್ದೇಶವನ್ನು ಇಟ್ಟುಕೊಂಡು ‘ಬಿಗ್‌ಬಾಸ್‌’ ಮನೆ ಪ್ರವೇಶಿಸಿದ್ದಾರೆ. ಮನ್ಯು ಸಂಸ್ಕೃತ ಪಾಠಶಾಲೆ ಸ್ಥಾಪಿಸುವುದು ಹಾಗೂ ಪರಿವಾರ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಮಾಡುವುದು. ಅವರು ಈ ಸ್ಪರ್ಧೆಯಲ್ಲಿ ವಿಜೇತರಾದರೆ ಅದರಿಂದ ಬರುವ ಹಣದಲ್ಲಿ ಈ ಎರಡು ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದುಕೊಂಡಿದ್ದಾರೆ. ಅದು ಸಾಕಾರ ಆಗೇ ಆಗುತ್ತದೆ ಎನ್ನುವ ವಿಶ್ವಾಸ ಮನೆಯವರದ್ದು. ‘ಅಷ್ಟಕ್ಕೂ ಅವ್ರು ಭಾಳ ಚೆನ್ನಾಗಿ ಆಟ ಆಡ್ತಿದ್ದಾರ‍್ರೀ... ಹೀಗಾಗಿ ಆಚಾರ್ಯರು ಗೆಲ್ಲೋದು ಶತಃಸಿದ್ಧ’ ಎನ್ನುತ್ತಾರೆ.

‘ಆಚಾರ್ಯರು ‘ಬಿಗ್‌ಬಾಸ್‌’ ಅಂತ ಹೇಳಿ ಭಾಳ ಏನೂ ಬದಲಾಗಿಲ್ರೀ, ಅವರು ಇಲ್ಲಿ ಇರೋ ಹಂಗ ಅದಾರ‍್ರೀ, ಅವರು ಸೈಲಂಟ್‌ ಇದ್ದಾಗ ಉಪಟಳ ಜಾಸ್ತಿ ಇತ್ತಲ್ರೀ, ಹಂಗಾಗಿ ಈಗೀಗ ಕೆಲ ವಾರದಿಂದ ಅವರು ಒಂದಿಷ್ಟು ರಫ್‌ ಆಗಿ ಕಾಣಿಸ್ತಿರಬಹುದ್ರೀ. ಆದ್ರೂ, ಸಹಸ್ಪರ್ಧಿಗಳಾಗಿದ್ದ ಜಗನ್‌ ಆಗಲಿ, ಚಂದ್ರು ಸರ್ ಅವರಾಗಲಿ, ತೀರಾ ಇತ್ತೀಚೆಗೆ ಸಂಯುಕ್ತಾ ಅವರಾಗಲಿ ಆಚಾರ್ಯರ ಮೇಲೆ ಅನಗತ್ಯವಾಗಿ ಆರೋಪ ಮಾಡಿದ ಮೇಲೂ ಆಚಾರ್ಯರು ಸಿಟ್ಟು ಮಾಡಿಕೊಂಡಿಲ್ರೀ. ಸಂಯುಕ್ತಾ ವಿಷಯದಲ್ಲಿ ಬೇರೆ ಯಾರೇ ಆಗಿದ್ರೂ ಕೈ ಮಾಡ್ತಿದ್ರು, ಆದರೆ ಆಚಾರ್ಯರು ತಾವು ನಂಬಿದ ಸಂಸ್ಕಾರದಿಂದಾಗಿ ಹಾಗೆ ಮಾಡಿಲ್ರಿ. ಆಕೆ ಮನೆಯಿಂದ ಹೊರ ಹೋಗುವಾಗಲೂ ‘ಇನ್ನೊಮ್ಮೆ ಯಾರಿಗೂ ಸೈತ ಹೀಂಗ್ ಕೈ ಮಾಡಬ್ಯಾಡ್ರಿ’ ಅಂತ ಬುದ್ಧಿಮಾತು ಹೇಳಿಯೇ ಕಳಿಸಿದ್ರು. ಅಂದ್ರ ಆಚಾರ್ಯರ ಒಳ್ಳೇತನಾನೇ ಅವರನ್ನು ಇಷ್ಟು ದಿನ ಈ ರಿಯಾಲಿಟಿ ಷೋ ದಲ್ಲಿ ಕೈ ಹಿಡಿದು ಕರೆತಂದದ್ರೀ’ ಎನ್ನುತ್ತಾರೆ ಶ್ರಾವಣಿ ಆಚಾರ್ಯರು.

‘ಮೊದಲ ಬಾರಿ ಮಗನ ಬಿಟ್ಟು ಅದೀವ್ರಿ’

‘ಮೊದಲ ಬಾರಿಗೆ ಮಗನನ್ನು ಇಷ್ಟು ದಿನಾ ಬಿಟ್ಟು ಅದೀವ್ರೀ. ಫೋನ್ ಕೂಡ ಮಾಡಾಂಗಿಲ್ಲ. ಕಷ್ಟ ಅನ್ನಿಸಿದ್ರೂ, ಆತ ಒಂದು ಒಳ್ಳೆಯ ಕೆಲಸಕ್ಕಾಗಿ ಹೋಗಿರ್ತಾನ ಅಂತ ಖುಷಿ. ಹೀಂಗಾಗಿ ನಾವೆಲ್ಲರೂ ಸಮಾಧಾನ ಮಾಡಿಕೊಂಡಿವ್ರೀ’ ಎನ್ನುತ್ತಾರೆ ಸಮೀರ್ ಆಚಾರ್ಯ ಅವರ ತಾಯಿ ವಿದ್ಯಾ ಆಚಾರ್ಯ ಮಣ್ಣೂರ ಅವರು.

‘ನಾನು, ನಮ್ಮೆಜಮಾನ್ರು ಈವರೆಗೂ ಹಿಂದಿನ ಯಾವುದೇ ‘ಬಿಗ್‌ಬಾಸ್‌’ ಕಾರ್ಯಕ್ರಮ ನೋಡೇ ಇಲ್ರೀ. ಈ ಬಾರಿ ನಮ್ಮ ಮಗ ಅಲ್ಲಿ ಸ್ಪರ್ಧಿ ಅಂತ ನೋಡಾಕ್ ಹತ್ತೀವ್ರೀ...’ ಎನ್ನುತ್ತಾರೆ.

‘ದೇವಸ್ಥಾನಕ್ಕೆ ಬರೋ ಭಕ್ತರೆಲ್ಲ ನಮ್ಮ ಮಗನ ಬಗ್ಗೆ ಭಾಳ ಖುಷಿ ಪಟ್ಟಾರ‍್ರೀ... ಚಲೋ ಆಡ್ತಿದಾರ‍್ರೀ ಆಚಾರ್ರು ಅಂತಾರ‍್ರೀ... ಸಮೀರರೇ ಗೆದ್ದು ಬರಲಿ ಅನ್ನೋದು ಅವರ ಆಸೆ’ ಎಂದು ಖುಷಿಯಾಗುತ್ತಾರೆ ಸಮೀರ ಅವರ ತಂದೆ ರಾಘವೇಂದ್ರ ಆಚಾರ್ಯ ಮಣ್ಣೂರ.       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry