ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

7

ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

Published:
Updated:
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಮಲೆನಾಡಿನ ಮಿಡಿ ಉಪ್ಪಿನಕಾಯಿ, ಕೇರಳದ ನೇಂದ್ರಬಾಳೆಯ ಚಿಪ್ಸ್, ಕೊಬ್ಬರಿ ಎಣ್ಣೆಯಲ್ಲಿ ಕರಿದ ಕರಾವಳಿ ತಿನಿಸುಗಳು, ಬೆಳಗಾವಿಯ ಸಿಹಿ ಕುಂದಾ... ಹೀಗೆ ರಾಜ್ಯದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ತಿನಿಸುಗಳು ಒಂದೇ ಸೂರಿನಡಿ ಸಿಕ್ಕರೆ... ಅದು ಆಹಾರ ಪ್ರಿಯರಿಗೆ ಸ್ವರ್ಗವೇ ಸರಿ.

ಚಿತ್ತಾಕರ್ಷಕ ಖಾದಿ ಉಡುಪುಗಳ ನಡುವೆ ದೇಸಿ ತಿನಿಸುಗಳ ಘಮವನ್ನೂ ಆಘ್ರಾಣಿಸುವ ಅಪೂರ್ವ ಅವಕಾಶವನ್ನು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಲ್ಪಿಸಿದೆ. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಖಾದಿ ಉತ್ಸವದಲ್ಲಿ ದೇಸಿ ತಿನಿಸುಗಳ ವೈಭವವೂ ಅನಾವರಣಗೊಂಡಿದೆ.

ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿಗಳು...

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕಣ್ಮನ ಸೆಳೆಯುವ ಖಾದಿ ವಸ್ತ್ರಗಳ ವಿನ್ಯಾಸವನ್ನು ಕಣ್ತುಂಬಿಕೊಳ್ಳುತ್ತಾ ಸಾಗುತ್ತಿದ್ದಂತೆ ವಿಧವಿಧ ಉಪ್ಪಿನಕಾಯಿಗಳ ಸ್ವಾದ ಬಾಯಿಯಲ್ಲಿ ಅನಾಯಾಸವಾಗಿ ನೀರೂರಿಸುತ್ತದೆ. ‘ದೇವಿ ಫುಡ್ಸ್‌’ ಮಳಿಗೆಯಲ್ಲಿ ಸಾಲಾಗಿ ಜೋಡಿಸಿಟ್ಟ ಉಪ್ಪಿನಕಾಯಿಗಳು ಹಾಗೂ ಚಟ್ನಿ ಪುಡಿಗಳ ಡಬ್ಬಿಗಳು ಮಳಿಗೆಗೆ ಸ್ವಾಗತಿಸುತ್ತವೆ. ಸಾಂಪ್ರಾದಾಯಿಕ ರುಚಿಯ ಅಪ್ಪೆ ಹಾಗೂ ಜೀರಿಗೆ ಮಾವಿನ ಮಿಡಿಯಿಂದ ಹಿಡಿದು, ಆರೋಗ್ಯವರ್ಧಕ ಮಾಕಳಿ ಬೇರಿನವೆಗೆ ಬರೊಬ್ಬರಿ 23 ವಿದಧ ಉಪ್ಪಿನಕಾಯಿಗಳು ಈ ಮಳಿಗೆಯಲ್ಲಿ ಲಭ್ಯ.

‘ಕಳಲೆ, ಚಳ್ಳೆಕಾಯಿ, ಅಮಟೆಮಿಡಿ ಉಪ್ಪಿನಕಾಯಿಗಳು ನಮ್ಮ ವೈಶಿಷ್ಟ್ಯ’ ಎನ್ನುತ್ತಾರೆ ಮಳಿಗೆಯ ಮಾಲಿಕರಾದ ಸುಮಾ.

‘ಮುಂಗಾರು ಮಳೆಗೆ ಬಿದಿರು ಚಿಗುರುತ್ತದೆ. ಅದನ್ನು ಕಳಲೆ ಎನ್ನುತ್ತೇವೆ. ಅದನ್ನು ಚಿಕ್ಕ ತುಣುಕುಗಳಾಗಿ ಕತ್ತರಿಸಿ ಉಪ್ಪಿನಲ್ಲಿ ನೆನೆಸಿಡುತ್ತೇವೆ. ಬೇಕಾದಾಗ ಖಾರದ ಪುಡಿ ಹಾಗೂ ಒಗ್ಗರಣೆಯನ್ನು ಹಾಕಿದರೆ, ಉಪ್ಪಿನಕಾಯಿ ಸಿದ್ಧವಾಗುತ್ತದೆ. ಕಳಲೆಯ ವಿಶೇಷವೆಂದರೆ, ಎಷ್ಟೇ ಸಮಯ ನೆನೆಸಿಟ್ಟರೂ ಮೆತ್ತಗಾಗುವುದಿಲ್ಲ. ತಿನ್ನುವಾಗ ಗರಿಗರಿಯಾಗಿಯೇ ಇರುತ್ತದೆ. ಸದ್ಯ ‌ಮಲೆನಾಡಿನಲ್ಲಿ ದೊರೆಯುವ ಹೆರಳೆಕಾಯಿ ಹಾಗೂ ಕಳಲೆಯಿಂದ ತಯಾರಿಸಿದ ಉಪ್ಪಿನಕಾಯಿಗಳಿಗೆ ಹೆಚ್ಚು ಬೇಡಿಕೆಯಿದೆ’ ಎನ್ನುತ್ತಾರೆ ಅವರು.

ನೋಡಲು ಜಾಮ್‌ನಂತೆ ಕಾಣಿಸುವ ರುಚಿಕರ ಉಪ್ಪಿನ ಕಾಯಿಗಳೂ ಉತ್ಸವದಲ್ಲಿ ಲಭ್ಯ. ಬಲಿತ ಮಾವಿನಕಾಯಿಯನ್ನು ತುರಿದು 2 ಗಂಟೆ ಬೆಲ್ಲದಲ್ಲಿ ಬೇಯಿಸಿದರೆ ಈ ಉಪ್ಪಿನಕಾಯಿ ಸಿದ್ಧವಾಗುತ್ತದೆ. ಅತ್ತ ಹುಳಿಯೂ ಅಲ್ಲದ, ಇತ್ತ ಸಿಹಿಯೂ ಅಲ್ಲದ ಈ ಉಪ್ಪಿನಕಾಯಿಯ ಘಮವೇ ನಾಲಿಗೆಯ ರುಚಿಮೊಗ್ಗು ಗಳನ್ನು ಅರಳಿಸುತ್ತದೆ. ಉಪ್ಪು, ಖಾರ, ಸಿಹಿ, ಹುಳಿಗಳ ಹದಪಾಕದಂತಿರುವ ಇದು ಜೋನಿ ಬೆಲ್ಲದ ಘಮದೊಂದಿಗೆ ಮಾವಿನಕಾಯಿಯ ಸ್ವಾದವೂ ಭರಿತು ಆಹ್ಲಾದಕರ ಅನುಭವ ನೀಡುತ್ತದೆ. ಇದನ್ನು ಉಪ್ಪಿನಕಾಯಿಯಾಗಿ ಮಾತ್ರವಲ್ಲದೆ, ದೋಸೆ, ಚಪಾತಿ, ಬ್ರೆಡ್‌, ಇಡ್ಲಿಗಳೊಂದಿಗೆ ಜಾಮ್‌ ರೂಪದಲ್ಲಿಯೂ ಸವಿಯಬಹುದು.

ದೇವಿ ಫುಡ್ಸ್‌ನಲ್ಲಿ ಅಪ್ಪೆಮಿಡಿ ಹಾಗೂ ಅಮ್ಟೆಮಿಡಿ ಕೆ.ಜಿ.ಗೆ ₹400. ಬೆಳ್ಳುಳ್ಳಿ, ಹೆರಳೆಕಾಯಿಗಳು ಕೆ.ಜಿ.ಗೆ ₹300 ದರದಲ್ಲಿ ಲಭ್ಯ.

ತರಹೇವಾರಿ ಚಟ್ನಿಪುಡಿಗಳು

ಖಾದಿ ಉತ್ಸವದಲ್ಲಿ ತರಹೇವಾರಿ ಚಟ್ನಿಪುಡಿಗಳಿಗೂ ಕೊರತೆಇಲ್ಲ. ಉದ್ದು, ತೊಗರಿ, ಹೆಸರು ಹಾಗೂ ಕಡಲೆ ಬೇಳೆ ಬಳಸಿ ಸಿದ್ಧಪಡಿಸಿರುವ ಚಟ್ನಿಪುಡಿ, ಹುರಿದಿರುವ ಹುಚ್ಚೆಳ್ಳಿನ ಘಮದೊಂದಿಗೆ, ಒಣಮೆಣಸಿನ ಘಾಟು, ಹುಣಸೆ, ಬೆಲ್ಲ, ಉಪ್ಪು, ಕರಿಬೇವುಗಳ ಹದಪಾಕದಂತಿರುವ ಹುಚ್ಚಳ್ಳು ಚಟ್ನಿಪುಡಿ, ಆಂದ್ರದ ವಿಶೇಷ ಚಟ್ನಿಪುಡಿಯಲ್ಲಂತೂ ಹೆಸರಿಗೆ ತಕ್ಕಂತೆ ಗುಂಟೂರು ಮೆಣಸಿನ ಖಾರ, ಶೇಂಗಾದ ಸ್ವಾದವಿದೆ. ಇನ್ನೂ ಬೆಳ್ಳುಳ್ಳಿ ಖಾರಕ್ಕಂತೂ ವಿಶೇಷ ಬೇಡಿಕೆ. ಬೆಳ್ಳುಳ್ಳಿ, ಬ್ಯಾಡಗಿ ಮೆಣಸು, ಗುಂಟೂರು ಮೆಣಸನ್ನು ಕುಟ್ಟಿ ಸಾಂಪ್ರದಾಯಿಕ ಶೈಲಿಯಲ್ಲಿ ಸಿದ್ಧಪಡಿಸಿರುವ ಈ ಖಾರವನ್ನು ತುಪ್ಪ ಅಥವಾ ಎಣ್ಣೆಯೊಂದಿಗೆ ಬೆರೆಸಿದರೆ ಎಂಥ ನಾಲಿಗೆಗೂ ಆಹಾರ ರುಚಿಸುವುದರಲ್ಲಿ ಸಂದೇಹವಿಲ್ಲ.

ಚಾಕಲೇಟ್‌ಗೆ ಪರ್ಯಾಯ ನೆಲ್ಲಿಕಾಯಿ ಮುರಬ್ಬಾ

ತಿಳಿಹಸಿರು ಬಣ್ಣದ, ಗೋಡಂಬಿ ಗಾತ್ರದ ಈ ತಿನಿಸನ್ನು ನೋಡಿದವರೆಲ್ಲರೂ ಏನೆಂದು ಪ್ರಶ್ನಿಸುತ್ತಿದ್ದರು. ‘ನೆಲ್ಲಿಕಾಯಿ ಮುರಬ್ಬಾ’ ಎಂದು ‘ಹೊರನಾಡು ಫುಡ್ಸ್‌’ ಮಳಿಗೆಯ ಮಾಲೀಕ ರಾಜೇಶ್‌ ಉತ್ತರಿಸುತ್ತಿದ್ದರೆ, ನೆಲ್ಲಿಕಾಯಾ? ಎಂದು ಆಶ್ಚರ್ಯ ವ್ಯಕ್ತಪಡಿಸುವ ಸರದಿ ಗ್ರಾಹಕರದ್ದಾಗಿತ್ತು.

ಒಗರು ಹಾಗೂ ಕಹಿಯ ರುಚಿಯೊಂದಿಗೆ ಕೂಡಿರುವ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸುವುದು ತುಸು ತ್ರಾಸದಾಯಕ. ಆದರೆ ನೆಲ್ಲಿಕಾಯಿಯಲ್ಲಿನ ಆರೋಗ್ಯವರ್ಧಕ ಗುಣಗಳು ಅದರ ಸೇವನೆಯನ್ನು ಅನಿವಾರ್ಯವಾಗಿಸುತ್ತದೆ. ಒಗರುಭರಿತ ಬೆಟ್ಟದ ನೆಲ್ಲಿಕಾಯಿಯಲ್ಲಿ ತಯಾರಿಸಿದ ರಚಿಕರ ಚಾಕೊಲೇಟ್‌ಗಳು ಮಾತ್ರ ನೆಲ್ಲಿಕಾಯಿಯ ಮೂಲರುಚಿಯನ್ನು ಮೆರೆಸುವಂತಿತ್ತು.

ಬಲಿತ ಬೆಟ್ಟದನೆಲ್ಲಿಕಾಯಿಯನ್ನು ಬೀಜದಿಂದ ಬೇರ್ಪಡಿಸಿ ಗೋಡಂಬಿ ಆಕಾರದಲ್ಲಿ ಕತ್ತರಿಸಬೇಕು. ಅದನ್ನು ಸಕ್ಕರೆ ಪಾಕದಲ್ಲಿ ಕಡಿಮೆ ಉರಿಯಲ್ಲಿ 1 ಗಂಟೆ ಬೇಯಿಸಬೇಕು. ತಣ್ಣಗಾದ ನಂತರ ಎರಡರಿಂದ ಮೂರು ದಿನಗಳು ಬಿಸಿಲಿನಲ್ಲಿ ಒಣಗಿಸಿದರೆ ಮುರಬ್ಬಾ ಸಿದ್ಧವಾಗುತ್ತದೆ. ವರ್ಷಗಟ್ಟಲೇ ಇದನ್ನು ಸಂರಕ್ಷಿಸಿಡಬಹುದು. ಚಾಕೊಲೇಟ್ ರೀತಿಯಲ್ಲಿ ಬಳಸಬಹುದು ಒಂದು ಕೆ.ಜಿ. ಮುರಬ್ಬಾದ ಬೆಲೆ ₹200.

ಖಾದಿ ಉತ್ಸವ ಜನವರಿ 31ರವರೆಗೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8. ಸ್ಥಳ: ಸ್ವಾತಂತ್ರ್ಯ ಉದ್ಯಾನ, ಪೀಪಲ್‌ ಪ್ಲಾಜಾ, ಗಾಂಧಿನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry