ಜನಸಾಗರದಲ್ಲಿ ಇಬ್ಬರು ನಿರಾಶ್ರಿತರು

7

ಜನಸಾಗರದಲ್ಲಿ ಇಬ್ಬರು ನಿರಾಶ್ರಿತರು

Published:
Updated:
ಜನಸಾಗರದಲ್ಲಿ ಇಬ್ಬರು ನಿರಾಶ್ರಿತರು

ಜಧಾನಿ ಟೋಕಿಯೋದ ರಸ್ತೆಗಳಲ್ಲಿ ನಡೆದುಕೊಂಡು ಹೋಗುವಾಗ ‘ಇಲ್ಲಿ ಕಳೆದುಹೋದರೆ ಯಾರನ್ನೂ ಹುಡುಕಲು ಸಾಧ್ಯವಿಲ್ಲ’ ಎಂದು ಹಿರಿಜೀವ ಟೋಮಿ ಹರೆಯಮ, ಪತಿ ಶುಕಿಚಿ ಹತ್ತಿರ ಭಯ ತೋಡಿಕೊಳ್ಳುವುದು ಆಧುನೀಕರಣದ ಬಗೆಗಿನ ವೃದ್ಧರ ಭಯವನ್ನು ಬಿಂಬಿಸುತ್ತದೆ. ಇದೇ ಚಿತ್ರದ ವಸ್ತು ಸಹ.

1953ರಲ್ಲಿ ಬಿಡುಗಡೆಯಾದ ‘ಟೋಕಿಯೊ ಸ್ಟೋರಿ’ ಚಿತ್ರದಲ್ಲಿ ನಿರ್ದೇಶಕ ಯಸುಜಿರೊ ಒಸು ಅವರು ಎರಡನೇ ಮಹಾಯುದ್ಧದ ನಂತರ ಜಪಾನಿನಲ್ಲಿ ಆದ ಬದಲಾವಣೆ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಸಾಂಪ್ರದಾಯಿಕ ಕುಟುಂಬಗಳು ಒಡೆದು ಹೋದದ್ದನ್ನು ತೋರಿಸಿದ್ದಾರೆ. ಉನ್ನತ ವಿದ್ಯಾಭ್ಯಾಸ ಪಡೆದ ಬಳಿಕ ಹೆತ್ತವರಿಂದ ದೂರವಾಗಿ ನಗರದಲ್ಲಿ ಬದುಕುತ್ತಿರುವ ಮಕ್ಕಳ ಕಣ್ಣಲ್ಲಿ ಹೆತ್ತವರ ಕುರಿತಾಗಿ ಗೌರವ ಹಾಗೂ ಪ್ರೀತಿ ಕಡಿಮೆಯಾಗುತ್ತಿದೆ. ಮಾನವೀಯತೆ ಬದಲಾಗಿ ಸ್ವಾರ್ಥ ಬೆಳೆಯುತ್ತಿದೆ ಎಂಬುದನ್ನು ಈ ಸಿನಿಮಾ ಧ್ವನಿಸುತ್ತದೆ. ಒಂದು ಕಡೆ ರಾಷ್ಟ್ರ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದರೆ ಇನ್ನೊಂದೆಡೆ ಕುಟುಂಬಗಳ ಮೌಲ್ಯ, ಆದರ್ಶ ಕಡಿಮೆಯಾಗುತ್ತದೆ ಎಂಬುದನ್ನು ಇಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ವೃದ್ಧ ದಂಪತಿ ಶುಕಿಚಿ ಹಾಗೂ ಟೋಮಿ ಹರೆಯಮ ಅವರಿಗೆ ರಾಜಧಾನಿ ಟೋಕಿಯೊಗೆ ಹೋಗಿ ಮಕ್ಕಳು, ಮೊಮ್ಮಕ್ಕಳನ್ನು ನೋಡುವ ಸಂಭ್ರಮ. ದಂಪತಿ ಒನೊಮಿಚಿ ಎಂಬ ಪುಟ್ಟ ಗ್ರಾಮದಿಂದ ರಾಜಧಾನಿ ಟೋಕಿಯೊಗೆ ಪ್ರಯಾಣ ಬೆಳಸುತ್ತಾರೆ. ಈ ದಂಪತಿಗೆ ಐದು

ಜನ ಮಕ್ಕಳು. ಇದರಲ್ಲಿ ಒಬ್ಬ ಮಗ ಸಾವನ್ನಪ್ಪಿದ್ದಾನೆ. ಕಿರಿಯ ಮಗಳು ಶಿಕ್ಷಕಿ ಅಪ್ಪ–ಅಮ್ಮನ ಜೊತೆಗೇ ಇದ್ದಾಳೆ. ಟೋಕಿಯೋದಲ್ಲಿ ಇಬ್ಬರು, ಸಣ್ಣ ಮಗ ಒಲಸಾ ನಗರದಲ್ಲಿ ನೆಲೆಸಿದ್ದಾನೆ.

ಟೋಕಿಯೊದಲ್ಲಿ ಮಗನಿಗೆ ಕೈತುಂಬಾ ಕೆಲಸ. ಹೀಗಾಗಿ ದಂಪತಿ ಅಲ್ಲಿಂದ ಮಗಳ ಮನೆಗೆ ಬರುತ್ತಾರೆ. ಆಕೆಗೆ ಪಾರ್ಲರ್‌ನಲ್ಲಿ ಕೈತುಂಬಾ ಕೆಲಸ. ಹೀಗಾಗಿ ಆಕೆ ತಮ್ಮನ ಹೆಂಡತಿ ನೊರಿಕೊಳಿಗೆ ಅಪ್ಪ– ಅಮ್ಮನನ್ನು ನಗರದರ್ಶನಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸುತ್ತಾಳೆ. ನೊರಿಕೊಳಿಗೆ ಗಂಡ ತೀರಿಕೊಂಡಿದ್ದರೂ ಅತ್ತೆ– ಮಾವನ ಬಗ್ಗೆ ಪ್ರೀತಿ ಕಡಿಮೆಯಾಗಿರುವುದಿಲ್ಲ. ಮೂರೂ ಜನರೂ ನಗರ ದರ್ಶನ ಮಾಡುತ್ತಾರೆ. ಕೊನೆಗೆ ಮಗಳ ಮನೆಗೆ ದಂಪತಿ ಹಿಂತಿರುಗಿದಾಗ ಮಗಳು ಶೀಗೆ ತನ್ನ ಸ್ನೇಹಿತರಿಗೆ ‘ಹಳ್ಳಿಯಿಂದ ಸಂಬಂಧಿಕರು ಬಂದಿದ್ದಾರೆ’ ಎಂದು ಪರಿಚಯಿಸುತ್ತಾಳೆ. ಆದರೂ ಈ ದಂಪತಿ ಅದನ್ನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಮಗಳು  ಪದೇಪದೇ ‘ಇಷ್ಟು ಬೇಗ ಯಾಕೆ ಬಂದಿರಿ’ ಎಂದು ಪ್ರಶ್ನಿಸತೊಡಗುತ್ತಾಳೆ. ಆಗ ‘ಆಕೆ ಪಾರ್ಟಿ ಇಟ್ಟುಕೊಂಡಿದ್ದಾಳೆ, ನಾವಿದ್ದರೆ ಆಕೆಗೆ ಕಿರಿಕಿರಿಯಾಗುತ್ತದೆ’ ಎಂದು ದಂಪತಿಗೆ ಅರ್ಥವಾಗುತ್ತದೆ. ಆಗ ‘ನಾವಿಬ್ಬರೂ ನಿರಾಶ್ರಿತರು’ ಎಂದು

ಗಂಡ ಹೆಂಡತಿಗೆ ತಮಾಷೆಯಂತೆ  ಹೇಳುವುದು ಆಧುನೀಕರಣದಿಂದ ಸಂಬಂಧಗಳು ಕ್ಷೀಣವಾಗುವುದರ ಸಂಕೇತದಂತೆ ಕಾಣುತ್ತದೆ. ಮಾನವೀಯತೆಯ ಸ್ಪಂದನೆಗೆ ರಕ್ತಸಂಬಂಧವೇ ಆಗಬೇಕಿಲ್ಲ ಎನ್ನುವ ಸಂಗತಿಯನ್ನು ನಿರ್ದೇಶಕರು ಸೊಸೆಯ ಪಾತ್ರದ ಮೂಲಕ ನಿರೂಪಿಸುತ್ತಾರೆ.

ಎರಡನೇ ಮಹಾಯುದ್ಧದಿಂದ ಜರ್ಝರಿತವಾಗಿದ್ದ ಜಪಾನ್‌, ಅಭಿವೃದ್ಧಿಯತ್ತಲೇ ಕಣ್ಣು ನೆಟ್ಟಾಗ ಮಾನವೀಯ ಸಂಬಂಧಗಳು ಹೇಗೆ ನೇಪಥ್ಯಕ್ಕೆ ಸರಿದವು ಎನ್ನುವುದನ್ನು ಈ ಚಿತ್ರ ಗಾಢ ವಿಷಾದದೊಂದಿಗೆ ಬಿಂಬಿಸುತ್ತದೆ. ಟೋಕಿಯೊ ಹಾಗೂ ಒನೊಮಿಚಿಯ ದೃಶ್ಯಗಳು ಮನಸೆಳೆಯುತ್ತವೆ. ನಿಧಾನಗತಿಯ ಚಿತ್ರದಲ್ಲಿ ಮೌನವೇ ಪ್ರಧಾನ. ಚಿತ್ರ ನೋಡಿದವರ ಮನವನ್ನೂ ಆವರಿಸುವುದು ಗಾಢ ಮೌನವೇ. ಆ ಮೌನಕ್ಕಿಷ್ಟು ವಿಷಾದದ ಲೇಪವೂ ಇದ್ದರೆ ಅದು ನಿರ್ದೇಶಕರ ಹೆಚ್ಚುಗಾರಿಕೆ.

ಚಿತ್ರ ನೋಡುವ ಆಸೆ ಇರುವವರು ಯುಟ್ಯೂಬ್‌ನಲ್ಲಿ Tokyo Story ಎಂದು ಟೈಪಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry