ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ನೋಡಿ ಚಿಪ್ಪಿನ ರಸಂ

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

‘ಕಸದಿಂದ ರಸ’ ಎನ್ನುವ ಲೋಕರೂಢಿಯ ಮಾತನ್ನು ಅಕ್ಷರಶಃ ಅನ್ವಯಿಸಿ ಕಸದಿಂದ ‘ರಸಂ’ ತಯಾರಿಸಿದವರ ಕತೆಯಿದು. ಘನತ್ಯಾಜ್ಯವೊಂದು ಅತಿಹೆಚ್ಚು ಬಾರಿ ಮರುಬಳಕೆಯಾಗಬೇಕು ಎಂಬ ಉದ್ದೇಶದಿಂದ ಹೊಸಬಗೆಯ ಆಹಾರ ಖಾದ್ಯಗಳ ತಯಾರಿಕೆಯಲ್ಲಿ ತೊಡಗಿಕೊಂಡು ಯಶಸ್ಸು ಸಾಧಿಸಿರುವವರು ನಗರದ ಮರಿಯಪ್ಪನಪಾಳ್ಯದ ನಿವಾಸಿ ಆನಂದ್.

ಬಳಸಿ ಎಸೆಯುವ ತೆಂಗಿನಕಾಯಿಯ ಚಿಪ್ಪು ಹಾಗೂ ಈರುಳ್ಳಿ ಸಿಪ್ಪೆಗಳಿಂದಲೂ ರುಚಿಕರ ಆಹಾರ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಟೆಕ್ಸ್‌ಟೈಲ್‌ ಎಂಜಿನಿಯರಿಂಗ್ ಪದವಿ ಪೂರೈಸಿರುವ ಆನಂದ್‌, ಅದೇ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಘನತ್ಯಾಜ್ಯಗಳನ್ನು ಬಳಸಿ ವಸ್ತ್ರಗಳಿಗೆ ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಸಂಶೋಧನೆಯಲ್ಲಿ ನಿರತರಾಗಿದ್ದಾಗ ಕಲೆಹಾಕಿದ ಮಾಹಿತಿಯ ಆಧಾರದಲ್ಲಿ ಆಹಾರ ಖಾದ್ಯಗಳ ತಯಾರಿಕೆಯಲ್ಲಿಯೂ ಈ ಬಗೆಯ ತ್ಯಾಜ್ಯಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಅವರು ಕರಗತಮಾಡಿಕೊಂಡಿದ್ದಾರೆ.

‘ತೆಂಗಿನಚಿಪ್ಪು ಹಾಗೂ ಈರುಳ್ಳಿ ಸಿಪ್ಪೆಯಲ್ಲಿರುವ ಬಣ್ಣಕಾರಕ ರಾಸಾಯನಿಕಗಳ ಕುರಿತು ಹೆಚ್ಚಿನ ಅಧ್ಯಯನದಲ್ಲಿ ನಿರತನಾದೆ. ಇವುಗಳಲ್ಲಿರುವ ಆ್ಯಂಥೋನಿನ್‌ ಹಾಗೂ ಟ್ಯಾನಿನ್ಸ್‌ ಎಂಬ ರಾಸಾಯನಿಕಗಳು ಬಣ್ಣಕ್ಕೆ ಕಾರಣವಾಗುತ್ತದೆ. ಜೊತೆಗೆ ಇದರಲ್ಲಿ ರೋಗನಿರೋಧಕ ಶಕ್ತಿಯೂ ಯಥೇಚ್ಚವಾಗಿರುವುದರಿಂದ ದೇಹವನ್ನು ರೋಗಕಾರಕಗಳಿಂದ ರಕ್ಷಿಸುತ್ತದೆ ಎಂಬ ಅಂಶ ಗಮನಕ್ಕೆ ಬಂತು. ಹಾಗಾಗಿಯೇ ತೆಂಗಿನ ಚಿಪ್ಪು ಬಳಸಿ ರುಚಿಕರ ಖಾದ್ಯ ತಯಾರಿಸುವ ವಿಧಾನವನ್ನು ಕಂಡುಕೊಂಡೆ’ ಎನ್ನುತ್ತಾರೆ ಅವರು.

‘ಆಯುರ್ವೇದವು ಅಳಲೆಕಾಯಿ, ತಾರೆಕಾಯಿ ಸೇರಿದಂತೆ ಕೆಲವು ಕಾಯಿಗಳು, ಬೇರುಗಳು ಹಾಗೂ ಸಸ್ಯಗಳ ಬಳಕೆಯನ್ನು ತಿಳಿಸುತ್ತೆ. ಆ ಕಾಯಿಗಳಲ್ಲಿರುವ ಎಲ್ಲ ಪೌಷ್ಠಿಕಾಂಶಗಳು ತೆಂಗಿನ ಚಿಪ್ಪು ಹಾಗೂ ಈರುಳ್ಳಿ ಸಿಪ್ಪೆಯಲ್ಲಿಯೂ ಇವೆ. ಆಹಾರವಾಗಿ ಈ ಸಿಪ್ಪೆಗಳನ್ನು ಬಳಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು’ ಎನ್ನುವುದು ಅವರ ಅಭಿಪ್ರಾಯ.

ತೆಂಗಿನ ಚಿಪ್ಪಿನಿಂದ ರಸಂ: ತೆಂಗಿನಚಿಪ್ಪನ್ನು ಸ್ವಚ್ಛಮಾಡಿ, ಚಿಕ್ಕ, ಚಿಕ್ಕ ತುಣುಕುಗಳಾಗಿ ಕತ್ತರಿಸಿಕೊಳ್ಳಿ. ನೀರಿನಲ್ಲಿ ಚಿಪ್ಪು ಕಂದು ಬಣ್ಣಕ್ಕೆ ತಿರುಗುವವರೆಗೆ ಅಂದರೆ 1 ಗಂಟೆ ಕುದಿಸಿ. ನಂತರ ಬೇಯಿಸಿ ಅರೆದ ತೊಗರಿಬೇಳೆ, ತೆಂಗಿನ ತುರಿ, ಹುಣಸೆ ಮತ್ತು ಲಿಂಬೆ ರಸ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಹಸಿಶುಂಠಿ, ಅರಿಶಿನಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ 10 ನಿಮಿಷ ಕುದಿಸಿದರೆ ರುಚಿಕರ ಹಾಗೂ ಆರೋಗ್ಯಕರ ತೆಂಗಿನ ಚಿಪ್ಪಿನ ರಸಂ ಸಿದ್ಧವಾಗುತ್ತದೆ. ಅನ್ನದೊಂದಿಗೆ ಸೇವಿಸಬಹುದು ಅಥವಾ ಹಾಗೆಯೇ ಸೂಪ್ ರೀತಿಯಲ್ಲಿಯೂ ಕುಡಿಯಬಹುದು.

‘ಕುದಿಸಿದ ತೆಂಗಿನಚಿಪ್ಪಿನ ರಸಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ, ಉಪ್ಪು, ಹಸಿಶುಂಠಿ ಹಾಕಿ ಬಿಸಿಮಾಡಿ ಕುಡಿದರೆ ಗಂಟಲುನೋವು ಸಹ ಕಡಿಮೆಯಾಗುತ್ತದೆ’ ಎನ್ನುವುದು ಆನಂದ್‌ ಅವರ ಅನುಭವದ ನುಡಿ. ಈರುಳ್ಳಿ ಸಿಪ್ಪೆಯಿಂದಲೂ ಇದೇ ರೀತಿ ರಸಂ ತಯಾರಿ ಸಾಧ್ಯವಿದೆ. ರಸಂ ತಯಾರಾದ ನಂತರ ಉಳಿಯುವ ತೆಂಗಿನಚಿಪ್ಪಿನಿಂದ ಸಾವಯವ ಗೊಬ್ಬರ ತಯಾರಿ ಸಾಧ್ಯ. ಸದ್ಯ ಆನಂದ್‌ ಅವರು ಸಾರಿನಿಂದ ತೆಗೆದ ಈ ಚಿಪ್ಪುಗಳನ್ನು ಸುಟ್ಟು ಆ ಬೂದಿಯನ್ನು ತೋಟಕ್ಕೆ ಬಳಸುತ್ತಿದ್ದಾರೆ.

‘ದಾಳಿಂಬೆ ಸಿಪ್ಪೆಯಿಂದಲೂ ಇದೇ ರೀತಿಯ ರಸಂ ತಯಾರಿಸಲು ಅವಕಾಶಗಳಿವೆ. ಆ ನಿಟ್ಟಿನಲ್ಲಿ ಸದ್ಯ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದೇನೆ. ಈ ರೀತಿಯ ಖಾದ್ಯಗಳಲ್ಲಿ ಕೊಂಚ ಒಗರು ಇರುತ್ತದೆ. ಆದರೂ ನಾಲಿಗೆಗೆ ಹಿತಕರ ಅನುಭವ ನೀಡುತ್ತದೆ. ಅದಕ್ಕಿಂತ ಮುಖ್ಯವಾಗಿ ದೇಹಕ್ಕೆ ಅಗತ್ಯ ಪೋಷಕಾಂಶಗಳು ಪೂರೈಕೆಯಾಗುತ್ತವೆ’ ಎನ್ನುತ್ತಾರೆ ಆನಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT