ಸ್ವಾರ್ಥವ ಮೀರಿ, ಮನವ ಮಂಥಿಸಿ...

7

ಸ್ವಾರ್ಥವ ಮೀರಿ, ಮನವ ಮಂಥಿಸಿ...

Published:
Updated:
ಸ್ವಾರ್ಥವ ಮೀರಿ, ಮನವ ಮಂಥಿಸಿ...

ಜಗತ್ತು ವಿಶಾಲವಾದಂತೆಲ್ಲಾ ಮನುಷ್ಯನ ಮನ ಕಿರಿದಾಗುತ್ತಿದೆ. ತಾನು, ತನ್ನವರು ಎಂಬ ಸ್ವಾರ್ಥಕ್ಕೆ ಸಿಲುಕಿದ ಮನ ಸಮುದಾಯ ಪ್ರಜ್ಞೆಯನ್ನೇ ಮರೆಯುತ್ತಿದೆ...

ಇಂಥ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ. ಕಂಡವರ ವಿಚಾರ ನಮಗ್ಯಾಕೆ? ನಾವು ಚೆನ್ನಾಗಿದ್ದರೆ ಸಾಕಪ್ಪ. ಉಳಿದವರು ಹಾಳಾಗಿ ಹೋಗಲಿ, ನಾವೇನು ಮಾಡೋಕಾಗುತ್ತೆ. ಅವರವರ ಕರ್ಮ ಅವರು ಅನುಭವಿಸುತ್ತಾರೆ ಅನ್ನುವ ಭಾವಗಳು ಸಾಮಾನ್ಯ ಎಂಬಂತಾಗಿವೆ. ಅಂಥ ಭಾವದ ಒಂದೆಳೆಯನ್ನಿಟ್ಟುಕೊಂಡೇ ನಿರ್ದೇಶಕ ಮಯೂರ್ ಪಾಟೀಲ್ ‘ಮಂಥನ’ ಕಿರುಚಿತ್ರದ ಕತೆ ಹೆಣೆದಿದ್ದಾರೆ.

ಪುಟ್ಟ ಬಾಲಕಿಯೊಬ್ಬಳಿಗೆ ರಕ್ತ ಬೇಕು ಎಂದು ಬೆಳ್ಳಂಬೆಳಿಗ್ಗೆಯೇ ಬರುವ ಫೋನ್ ಕರೆಗೆ ನಾಯಕ ಅಭಿ, ನಿರುತ್ಸಾಹದಿಂದ ಬೇರೆ ಕೆಲಸ ಇದೆ ಎಂದು ಮಲಗುತ್ತಾನೆ. ಎಚ್ಚರವಾದ ಮೇಲೆ ಮೊಬೈಲ್ ಕರೆಗಳ ಪರಿಶೀಲಿಸುತ್ತಿರುವಾಗ ಅಕ್ಕನ ಮಿಸ್ಡ್ ಕಾಲ್ ಇದ್ದದ್ದು ಗೊತ್ತಾಗುತ್ತದೆ. ಗಾಬರಿಯಾಗಿ ಅಕ್ಕನಿಗೆ ಫೋನಾಯಿಸಿದರೆ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ದೊರೆಯುವುದಿಲ್ಲ. ಅಕ್ಕನ ಮನೆಗೆ ಹೋದಾಗ ಅಲ್ಲಿ ಬೀಗ ಹಾಕಿದ ಬಾಗಿಲು ಅವನನ್ನು ಸ್ವಾಗತಿಸುತ್ತದೆ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಅಕ್ಕ, ಮಗಳನ್ನು ಕರೆದುಕೊಂಡು ಸ್ಕೂಟಿ ಮೇಲೆ ಬೆಳಿಗ್ಗೆಯೇ ಹೊರಗೆ ಹೋಗಿದ್ದಾಳೆ ಎಂದು ತಿಳಿಯುತ್ತದೆ. ಬೆಳಿಗ್ಗೆ ರಕ್ತ ಬೇಕೆಂದು ಗೆಳೆಯ ಮಾಡಿದ್ದ ಕರೆಗೂ, ಈಗ ಅಕ್ಕ ತನ್ನ ಮಗಳ ಜೊತೆಗೆ ಸ್ಕೂಟಿಯಲ್ಲಿ ಹೊರಗೆ ಹೋಗಿದ್ದಕ್ಕೂ ಒಂದಕ್ಕೊಂದು ತಾಳೆಯಾಗುವಂಥ ಸಂಗತಿಗಳಿವೆಯೆಲ್ಲ ಎಂದು ನಾಯಕ ಒತ್ತಡಕ್ಕೀಡಾಗುತ್ತಾನೆ. ಮುಂದೆ ಏನಾಗುತ್ತದೆ ಎಂಬುದನ್ನು ಕಿರುಚಿತ್ರ ನೋಡಿಯೇ ತಿಳಿಯಬೇಕು.

ಸಮಷ್ಟಿ ಪ್ರಜ್ಞೆಯನ್ನು ಸರಳವಾಗಿ ದಾಟಿಸುವ ನಿರ್ದೇಶಕ, ಸ್ವಾರ್ಥ ಬಿಟ್ಟು ನಿಸ್ವಾರ್ಥ ಗುಣವನ್ನು ಬೆಳೆಸಿಕೊಳ್ಳುವ ಬಗ್ಗೆ ಕಿರುಚಿತ್ರದ ಕೊನೆಯಲ್ಲಿ ಸಂದೇಶ ನೀಡುತ್ತಾರೆ. ಕೈತುಂಬಾ ಭಾರದ ಚೀಲಗಳನ್ನು ಹೊತ್ತ ವೃದ್ಧನೊಬ್ಬನ ಜೇಬಿನಿಂದ ಆಕಸ್ಮಿಕವಾಗಿ ಕೆಳಗೆ ಬೀಳುವ ಕೀಲಿಕೈ ಗೊಂಚಲನ್ನು ಪುಟ್ಟ ಬಾಲಕನೊಬ್ಬ ಓಡೋಡಿ ಬಂದು ಎತ್ತಿ ತೆಗೆದುಕೊಡುತ್ತಾನೆ. ಆಗ ವೃದ್ಧ ಮತ್ತು ಬಾಲಕನ ಮುಖದಲ್ಲಿ ಅರಳುವ ಮುಗ್ಧ ನಗೆಯಲ್ಲಿ ನಿಸ್ವಾರ್ಥ ಕಾಳಜಿ ಕಾಣುತ್ತದೆ. ಅಂಥದ್ದೊಂದು ನಿಸ್ವಾರ್ಥ ಕಾಳಜಿ ಇದ್ದಲ್ಲಿ ನಾಗರಿಕರು ಸಹಬಾಳ್ವೆಯ ಸಮಾಜ ನಿರ್ಮಿಸಲು ಸಾಧ್ಯ ಎಂಬುದನ್ನು ಕಿರುಚಿತ್ರ ಸೂಕ್ಷ್ಮವಾಗಿ ಹೇಳುತ್ತದೆ. ಕಿರುಚಿತ್ರಗಳ ಬಗ್ಗೆ ಒಲವಿರುವ ನಿರ್ದೇಶಕ ಮಯೂರ್ ಅವರಿಗೆ ‘ಮಂಥನ’ ಮೊದಲ ಚಿತ್ರವಾದರೂ, ನಿರ್ದೇಶನದಲ್ಲಿ ಬಿಗಿ ಹೆಣಿಗೆಯನ್ನೇ ಅವರು ತೋರಿದ್ದಾರೆ. ಸಣ್ಣಪುಟ್ಟ ನ್ಯೂನತೆಗಳನ್ನು ಹೊರತುಪಡಿಸಿದರೆ, ‘ಮಂಥನ’ ಚಿಂತನೆಗೆ ಒರೆ ಹಚ್ಚುವ ಸದಭಿರುಚಿಯ ಕಿರುಚಿತ್ರ ಎನ್ನುವುದರಲ್ಲಿ ಸಂಶಯವಿಲ್ಲ. ತುಸು ಸಸ್ಪೆನ್ಸ್‌, ರೋಮಂಚಕಾರಿ ಸಂಗತಿಗಳನ್ನು ಅಳವಡಿಸಿದರೆ, ಕಿರುಚಿತ್ರ ಮತ್ತಷ್ಟು ಆಕರ್ಷಕವಾಗಿ ಪ್ರೇಕ್ಷಕರನ್ನು ತಲುಪುವ ಸಾಧ್ಯತೆ ಇತ್ತು.

ಯೂಟ್ಯೂಬ್‌ಗೆ ಡಿ. 29ರಂದು ಅಪ್‌ಲೋಡ್ ಆಗಿರುವ ‘ಮಂಥನ’ 3,736 ಬಾರಿ ವೀಕ್ಷಣೆ ಕಂಡಿದೆ. 30ಕ್ಕೂ  ಹೆಚ್ಚು ವೀಕ್ಷಕರು ತಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ.

ಮಯೂರ್ ಬಗ್ಗೆ ಒಂದಿಷ್ಟು

ಮೂರು ವರ್ಷಗಳಿಂದ ಕಿರುಚಿತ್ರದ ಹುಚ್ಚು ಹಚ್ಚಿಸಿಕೊಂಡಿರುವ ನಿರ್ದೇಶಕ ಮಯೂರ್ ಪಾಟೀಲ್‌ಗೆ ಬಾಲ್ಯದಿಂದಲೂ ಸಿನಿಮಾದ ಬಗ್ಗೆ ಒಲವು. ಗೆಳೆಯ ಅಭಿಷೇಕ್ ಜತೆಗೂಡಿ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದ ಮಯೂರ್, ‘ಮಂಥನ’ಕ್ಕೂ ಮುನ್ನ ಹತ್ತು ಕತೆಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದರಂತೆ.

ನಾನು, ನಮ್ಮದು ಎಂದಷ್ಟೇ ಯೋಚಿಸುವ ಈ ಜಗತ್ತಿನಲ್ಲಿ ಮತ್ತೊಬ್ಬರ ಬಗ್ಗೆಯೂ ನಾವು ಯೋಚಿಸಬೇಕು ಅಲ್ವಾ ಎಂಬ ಪ್ರಶ್ನೆ ಮೂಡಿದಾಗ ಹೊಳೆದಿದ್ದೇ ‘ಮಂಥನ’ ಕತೆ ಎನ್ನುತ್ತಾರೆ ಅವರು. ಈ ಕಿರುಚಿತ್ರ ನಿರ್ಮಾಣಕ್ಕೂ ಮುನ್ನ ‘ಪಸರಿಸಲಿ ಕನ್ನಡ’ ಎನ್ನುವ ಹಾಡನ್ನು ಕನ್ನಡ ರಾಜ್ಯೋತ್ಸವಕ್ಕೆ ಸ್ನೇಹಿತರ ಜತೆಗೂಡಿ ಮಯೂರ್ ರೂಪಿಸಿದ್ದಾರೆ. ಇಂಗ್ಲೆಂಡ್ ಕಿರುಚಿತ್ರೋತ್ಸವಕ್ಕೂ ಮಯೂರ್ ಒಂದು ಕಿರುಚಿತ್ರವನ್ನು ತಯಾರಿಸಿದ್ದಾರಂತೆ. ಆನ್‌ಲೈನ್‌ನಲ್ಲಿ ಗುಣಮಟ್ಟದ ಕಿರುಚಿತ್ರಗಳು ಅಷ್ಟಾಗಿ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಅವರು, ಅದಕ್ಕಾಗಿ ಸ್ನೇಹಿತರ ಜತೆಗೂ ‘ಅಭಿನಯ ಫಿಲಂಸ್’ ಎನ್ನುವ ತಂಡವನ್ನೂ ಕಟ್ಟಿಕೊಂಡಿದ್ದಾರೆ. ತಂಡದ ಜತೆಗೂಡಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಕಿರುಚಿತ್ರಗಳನ್ನು ತಯಾರಿಸುವ ಕನಸು ಮಯೂರ್ ಅವರಿಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry