ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆಗರು ಎತ್ತಾದ ಬಗೆ...

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ನನ್ನ ಮಗನದು ಮಗುವಿನ ಮನಸು. ಮಾತು ಬಹುಕಡಿಮೆ. ಸೌಮ್ಯಗುಣ, ನಾಚಿಕೆ ಸ್ವಭಾವ. ಆದರೆ, ದೇವರ ಕೃಪೆ ಇವನ ಮೇಲೆ ಇದೆ. ಇವನ ಸಂಗೀತ ಜ್ಞಾನ ನನ್ನನ್ನು ನಿಬ್ಬೆರಗಾಗಿಸಿದೆ’ ಎಂದ ಪ್ರಣವ್‌ನ ತಾಯಿ ವಿಶಾಲಾ ಅವರ ಕಣ್ಣುಗಳಲ್ಲಿ ಮಗನ ಸಾಧನೆ ಬಗ್ಗೆ ಹೆಮ್ಮೆ ಇತ್ತು.

ಹೌದು, ಪ್ರಣವ್ ಶಕ್ತಿಯೇ ಅಂಥದ್ದು. ಈಗಿನ್ನೂ 20ರ ಹರೆಯಲ್ಲಿರುವ ಪ್ರಣವ್ ಕೀಬೋರ್ಡ್‍ನಲ್ಲಿ ಸಿದ್ಧಹಸ್ತ. ಸತತ ಸಾಧನೆ ಹಾಗೂ ಪರಿಶ್ರಮದಿಂದಾಗಿ ಪ್ರಣವ್ ಈಗ ‘ವಾದ್ಯ ಸಂಯೋಜನೆ’ಯನ್ನು ಕರಗತ ಮಾಡಿಕೊಂಡಿದ್ದಾನೆ.

ಬಾಲ್ಯದಲ್ಲಿ ಈತ ಎಲ್ಲರಂತೆ ಇರಲಿಲ್ಲ. ಅಸಾಧ್ಯ ಚುರುಕುತನದ ತುಂಟ ಹುಡುಗನಾಗಿದ್ದ. ಕಲಿಕೆಯಲ್ಲಿ ಮಾತ್ರ ನಿಧಾನ. ವಿಶೇಷ ಮಗು ಎನಿಸಿದ್ದ ಕಾರಣ ಅಸಾಂಪ್ರದಾಯಿಕ ಶಿಕ್ಷಣ ನೀಡುವ ಬೆಂಗಳೂರಿನ ‘ಪೂರ್ಣ ಲರ್ನಿಂಗ್ ಸೆಂಟರ್‍’ಗೆ ಸೇರಿಸಲಾಯಿತು.

ತೀವ್ರ ಚಟುವಟಿಕೆಯ ಮಕ್ಕಳಲ್ಲಿ ವಿಶೇಷವಾದ ಯಾವುದಾದರೂ ಒಂದು ಗುಣವೊಂದು ಅಂತರ್ಗತವಾಗಿರುತ್ತದೆ. ಹೀಗಾಗಿ ಪ್ರಣವ್‍ನಲ್ಲಿ ಇರಬಹುದಾದ ವಿಶೇಷ ಗುಣ ಪತ್ತೆ ಹಚ್ಚುವ ಕೆಲಸ ಶುರುವಾಯಿತು. ಪೇಂಟಿಂಗ್, ಸೈಕ್ಲಿಂಗ್, ಸ್ಕೇಟಿಂಗ್ ಎಲ್ಲವೂ ಆಯಿತು.

ಪ್ರಣವ್‌ನ ಅಜ್ಜಿ ಸುಮಿತ್ರಾ ಹಿಂದೂಸ್ತಾನಿ ಸಂಗೀತ ಶಿಕ್ಷಕಿ. ಅವರು ಕೀಬೋರ್ಡ್ ಕಲಿಯಲು ಆರಂಭಿಸಿದರು. ಅಜ್ಜಿ ಜೊತೆ ತರಗತಿಗೆ ಹೋಗುತ್ತಿದ್ದ ಪ್ರಣವ್, ಅಜ್ಜಿಗೇ ಕೀಬೋರ್ಡ್ ಪಾಠ ಶುರು ಮಾಡಿದ. ಪ್ರಣವ್‍ನಲ್ಲಿ ಕೀಬೋರ್ಡ್ ಬಗ್ಗೆ ಇರುವ ಆಸಕ್ತಿಯನ್ನು ಗಮನಿಸಿದ ಪೋಷಕರು ಕೀಬೋರ್ಡ್ ತರಿಸಿಕೊಟ್ಟರು. ಒಂದು ಬಾರಿ ಸ್ವರ ಕೇಳಿದರೆ ಸಾಕು ಪ್ರಣವ್ ಅದನ್ನು ಟ್ಯೂನ್ ಮಾಡಿ ಕೀಬೋರ್ಡ್ ನುಡಿಸುತ್ತಿದ್ದ. ಆರಂಭದಲ್ಲಿ ಎಸ್.ಜೆ. ಪ್ರಸನ್ನ ಹಾಗೂ ನಂತರ ರಾಜೇಶ್ ಎಂಬ ಶಿಕ್ಷಕರ ಬಳಿ ಪ್ರಣವ್ ಅಭ್ಯಾಸ ಸಾಗಿತು.

ಪಟ್ಟು ಬಿಡದೆ ಕಲಿಸಿದ ಗುರು ಕರ್ನಲ್ ಚಕ್ರವರ್ತಿ ಅವರನ್ನು ಪ್ರಣವ್ ಮನಸಾರೆ ನೆನೆಯುತ್ತಾನೆ. ಬಳಿಕ ವಿದ್ವಾನ್ ವಿಜಯ್ ರಂಗ ಅವರ ಬಳಿ ಹಿಂದೂಸ್ತಾನಿ ಸ್ವರಗಳಿಗೆ ಕೀಬೋರ್ಡ್ ನುಡಿಸುವ ಪಟ್ಟು ಅಂತರ್ಗತ ಮಾಡಿಕೊಂಡ.

ಪ್ರಣವ್ ಸಾಮರ್ಥ್ಯ ಅರಿತ ಖ್ಯಾತ ಸಂಗೀತ ಸಂಯೋಜಕ ಪ್ರವೀಣ್ ಡಿ.ರಾವ್ ಅವರು ತಮ್ಮ ‘ಅಂತರ್‌ಧ್ವನಿ’ ಮ್ಯೂಸಿಕ್ ಬ್ಯಾಂಡ್‍ನಲ್ಲಿ ಅವಕಾಶ ನೀಡಿದರು. ಅವರ ಸಂಗೀತ ಕಚೇರಿಗಳಲ್ಲಿ ಪ್ರಣವ್ ಇರಲೇಬೇಕಿತ್ತು. ಈ ಮಧ್ಯೆ ಪ್ರಣವ್ ‘ಎಲೆಕ್ಟ್ರಾನಿಕ್ ಮ್ಯೂಸಿಕ್ ಪ್ರೊಡಕ್ಷನ್’ನಲ್ಲಿ ಡಿಪ್ಲೊಮ ಕೂಡಾ ಮುಗಿಸಿದ.

ಆರ್.ಎಸ್. ಗಣೇಶ್ ನಾರಾಯಣ್ ಎಂಬ ಸಂಗೀತ ಸಂಯೋಜಕರ ಬಳಿ ಪ್ರಣವ್ ಈಗ ಕೀಬೋರ್ಡ್ ಸಾಥಿ. ಇವರು ಮಾಡುತ್ತಿರುವ ಕಂಸಾಪುರ, ಧವನಿ, ಭಲೇ ಹುಚ್ಚ ಸಿನಿಮಾಗಳಿಗೆ ಪ್ರಣವ್ ಮೂಸಿಕ್ ಪ್ರೋಗ್ರಾಮರ್. ಜೊತೆಗೆ ಪಂಡಿತ್ ಶರಣ್ ಚೌಧರಿ ಅವರ ನಾಲ್ಕೈದು ಪ್ರಾಜೆಕ್ಟ್‌ಗಳಲ್ಲಿಯೂ ಪ್ರಣವ್ ಕೆಲಸ ಮಾಡಿದ್ದಾನೆ. ಮಕ್ಕಳ ಆಲ್ಬಮ್ ಹಾಗೂ ಅನುರಾಧ ಭಟ್ ಅವರ ದನಿಯಲ್ಲಿ ಮೂಡಿಬರುತ್ತಿರುವ ಹೊಸ ಆಲ್ಬಮ್‍ಗಳಿಗೆ ಪ್ರಣವ್ ಮಾಡಿರುವ ಪ್ರೊಗ್ರಾಮಿಂಗ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

‘ನುರಿತ ಸಂಗೀತಗಾರರ ರೀತಿ ಪ್ರೊಗ್ರಾಂ ಮಾಡುವ ಪ್ರಣವ್ ಅತಿ ಬುದ್ಧಿವಂತ’ ಎಂದು ಬೆನ್ನುತಟ್ಟುತ್ತಾರೆ ಪಂ. ಶರಣ್ ಚೌಧರಿ.

ಹತ್ತಾರು ಮ್ಯೂಸಿಕ್ ಆಲ್ಬಮ್‍ಗಳು, ಆಡ್ ಫಿಲ್ಮ್ ಹಾಗೂ ಕಿರುಚಿತ್ರಗಳಿಗೆ ಪ್ರಣವ್ ಹಿನ್ನೆಲೆ ಸಂಗೀತ ನೀಡಿದ್ದಾನೆ. ‘ಕಾಸ್ಮಾಸ್ ಆತ್ಮ’ ಮ್ಯೂಸಿಕ್ ಬ್ಯಾಂಡ್‍ನಲ್ಲೂ ತೊಡಗಿಸಿಕೊಡಿದ್ದಾರೆ. ರಾಜ್ಯದ ವಿವಿಧೆಡೆ ಈತ ನೀಡಿರುವ ಸೋಲೊ ಕಾರ್ಯಕ್ರಮಗಳ ಸಂಖ್ಯೆ ಸುಮಾರು 350.

ಇನ್‍ಸ್ಟ್ರುಮೆಂಟಲ್ ಮ್ಯಾಷಪ್, ಫ್ಯೂಷನ್, ಹಿಂದೂಸ್ತಾನಿ, ಕರ್ನಾಟಕ, ಪಾಶ್ಚಾತ್ಯ... ಹೀಗೆ ಸಂಗೀತ ವಿವಿಧ ಶೈಲಿಗಳನ್ನು ಒಲಿಸಿಕೊಳ್ಳಲು ಅವಿರತ ಪ್ರಯತ್ನಿಸುತ್ತಿದ್ದಾರೆ. ಅಮೆರಿಕದ ಕನ್ನಡ ಕೂಟದವರು ಕಳುಹಿಸಿದ್ದ ಗೀತೆಗೆ ಸಂಗೀತ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

‘ಮುಂದೆ ದೊಡ್ಡ ಸಂಗೀತ ನಿರ್ದೇಶಕನಾಗಬೇಕು, ಗ್ರ್ಯಾಮಿ ಪ್ರಶಸ್ತಿ ಪಡೆಯಬೇಕು’ ಎಂದು ತನ್ನ ಆಸೆ ಹೊರಗಿಡುವ ಪ್ರಣವ್ ಕಂಗಳಲ್ಲಿ ಸಾಧನೆಯ ಅದಮ್ಯ ಬಯಕೆ ಹೊಳೆಯುತ್ತದೆ.

ಪ್ರಣವ್ ಫೇಸ್‌ಬುಕ್ ಪುಟ– facebook.com/pranav.satish.1

‘ಟ್ರನಿಟಿ ಕಾಲೇಜ್ ಲಂಡನ್’ ಮಾನ್ಯತೆ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಹಾಗೂ ವಾದ್ಯ ಕಲಿಕೆಯಲ್ಲಿ ಪ್ರಮಾಣಪತ್ರ ನೀಡುವ ‘ಟ್ರಿನಿಟಿ ಕಾಲೇಜ್ ಲಂಡನ್’ನಿಂದ ಇವರು ‘8ನೇ ಗ್ರೇಡ್’ ಪಡೆದು ಎನಿಸಿಕೊಂಡಿದ್ದಾರೆ. ಖ್ಯಾತನಾಮರು ಕೂಡಾ ಈ ಪ್ರಮಾಣ ಪತ್ರ ಪಡೆಯುವಲ್ಲಿ ಏದುಸಿರು ಬಿಡುತ್ತಿರುವಾಗ ಪ್ರಣವ್ ಇದನ್ನು ಸರಾಗವಾಗಿ ದಾಟಿದ್ದು ಸ್ವತಃ ಸಂಗೀತ ಕಲಿಸಿದ ಗುರುಗಳಿಗೂ ಅಚ್ಚರಿ. ‘ಪ್ರಣವ್ ನನ್ನ ವಿದ್ಯಾರ್ಥಿ ಆಗಿದ್ದು ನನ್ನ ಭಾಗ್ಯ’ ಎನ್ನುತ್ತಾರೆ ಗುರು ಮ್ಯಾಕ್ಸ್‍ವೆಲ್.
ಆರ್.ಟಿ. ನಗರದಲ್ಲಿರುವ ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆ ಈ ಪರೀಕ್ಷೆಗಳನ್ನು ಆಯೋಜಿಸುತ್ತದೆ. ಅತ್ಯಂತ ಕಠಿಣವಾದ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಸಂಯೋಜಕ, ಸಂಗೀತ ನಿರ್ದೇಶಕ ಅಥವಾ ವಾದ್ಯ ಸಂಯೋಜಕರಾಗಲು ಅರ್ಹತೆ ಗಿಟ್ಟಿಸಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT