ರಾಜಕಾರಣಿ ರಜನಿ ಮೌನ ಮುರಿಯಲೇಬೇಕು

7

ರಾಜಕಾರಣಿ ರಜನಿ ಮೌನ ಮುರಿಯಲೇಬೇಕು

Published:
Updated:

ತಮಿಳುನಾಡು ರಸ್ತೆ ಸಾರಿಗೆ ನಿಗಮದ 1.4 ಲಕ್ಷ ಉದ್ಯೋಗಿಗಳಲ್ಲಿ ಹೆಚ್ಚಿನವರು ಸಂಬಳ ಏರಿಕೆಯ ಬೇಡಿಕೆ ಮುಂದಿಟ್ಟುಕೊಂಡು ಜನವರಿ ಮೊದಲ ವಾರದಲ್ಲಿ ಮುಷ್ಕರ ನಡೆಸಿದಾಗ ಅದೇ ಸಮುದಾಯಕ್ಕೆ ಸೇರಿದವರು ಮುಷ್ಕರಕ್ಕೆ ಬೆಂಬಲ ಸೂಚಿಸಬಹುದು ಎಂಬ ನಿರೀಕ್ಷೆ ಇರುತ್ತದೆ. ಅಥವಾ ಕನಿಷ್ಠ ಪಕ್ಷ, ಅವರ ಬೇಡಿಕೆಗಳು ಈಡೇರುವಂತೆ ಮಧ್ಯಪ್ರವೇಶ ನಡೆಸಬಹುದು ಎಂಬ ಆಸೆಯಾದರೂ ಇರುತ್ತದೆ.

ಆದರೆ, ರಜನಿಕಾಂತ್‌ ಈ ಬಗ್ಗೆ ಈವರೆಗೆ ಮಾತನಾಡಿಲ್ಲ; ರಾಜಕೀಯ ಸೇರುವುದಾಗಿ ಕಳೆದ ಡಿಸೆಂಬರ್‌ 31ರಂದು ಅವರು ಘೋಷಣೆ ಮಾಡಿದ ಬಳಿಕ ತಮಿಳುನಾಡು ಕಂಡ ಮೊದಲ, ಅತ್ಯಂತ ದೊಡ್ಡ ಬಿಕ್ಕಟ್ಟು ಇದಾಗಿದ್ದರೂ ಅವರು ಮೌನ ಮುರಿದಿಲ್ಲ. 1970ರ ದಶಕದಲ್ಲಿ ಚೆನ್ನೈನಲ್ಲಿ (ಆಗಿನ ಮದ್ರಾಸ್‌) ಸಿನಿಮಾ ತಾರೆಯಾಗಿ ಉದಯವಾಗುವ ಮೊದಲು ಬೆಂಗಳೂರು ಸಾರಿಗೆ ನಿಗಮದಲ್ಲಿ ರಜನಿಕಾಂತ್‌ ನಿರ್ವಾಹಕನಾಗಿದ್ದರು. ಹಾಗಿದ್ದೂ ಅವರು ಈಗ ಮುಷ್ಕರದ ಬಗ್ಗೆ ಏನನ್ನೂ ಹೇಳದಿರುವುದು ಇನ್ನಷ್ಟು ಆಶ್ಚರ್ಯದ ವಿಚಾರ. ತಮಿಳುನಾಡಿನಲ್ಲಿ ಸುಮಾರು 14 ಸಾವಿರ ಬಸ್‌ಗಳು ರಸ್ತೆಗಿಳಿಯದೆ ಜನರು ತೊಂದರೆ ಅನುಭವಿಸಬೇಕಾಯಿತು.

ರಾಜಕಾರಣದ ಕಲೆ ಕಲಿಯುವುದಕ್ಕೆ ಮೊದಲು ಸಾಕಷ್ಟು ದೂರ ಸಾಗಬೇಕಿದೆ ಎಂಬುದಕ್ಕೆ ರಜನಿಕಾಂತ್‌ ಅವರ ಮೌನ ಪುರಾವೆಯಾಗಿದೆ. ತಾವೊಬ್ಬ ಮುತ್ಸದ್ದಿ ಎಂಬ ಛಾಪು ಮೂಡಿಸುವುದಕ್ಕೆ ಇದು ರಜನಿಕಾಂತ್‌ಗೆ ಪರಿಪೂರ್ಣ ಅವಕಾಶವಾಗಿತ್ತು. ಸಾರಿಗೆ ನಿಗಮದ ಉದ್ಯೋಗಿಗಳ ಜತೆ ಮಾತನಾಡಿ, ತಮ್ಮ ವರ್ಚಸ್ಸು ಬಳಸಿಕೊಂಡು ಅವರು ಸಕಾರಾತ್ಮಕ ಬದಲಾವಣೆಗೆ ಕಾರಣ ಆಗಬಹುದಿತ್ತು. ಆದರೆ, ಅದರ ಬದಲಿಗೆ, ಎಲ್ಲವೂ ಚೆನ್ನಾಗಿದೆ ಎಂಬ ರೀತಿಯಲ್ಲಿ ಅವರು ವರ್ತಿಸಿದರು. ಸಾಮಾನ್ಯ ಜನರ ಸಮಸ್ಯೆಗಳ ಜತೆ ಗುರುತಿಸಿಕೊಳ್ಳುವ ಸಾಮರ್ಥ್ಯ ಅವರಿಗಿಲ್ಲ ಎಂಬುದಕ್ಕೆ ಇದು ಪುರಾವೆ ಒದಗಿಸಿತು ಅಥವಾ ರಾಜಕಾರಣದಲ್ಲಿ ಮೊದಲ ಹೆಜ್ಜೆಗಳನ್ನು ಇರಿಸುತ್ತಿರುವ ತಮ್ಮಂತಹ ನಾಯಕರಿಗೆ ಇಂತಹ ವಿಚಾರಗಳು ಬಹಳ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರು ಸೋತರು ಎಂಬುದಕ್ಕೂ ಇದು ಸಾಕ್ಷ್ಯವಾಯಿತು.

ನಮ್ಮ ಮುಂದೆ ಈಗ ಇರುವುದು ರಜನಿಕಾಂತ್‌ ಅಭಿಮಾನಿಗಳು ಮಾಡಿರುವ ಒಂದು ಟ್ವೀಟ್‌ ಮಾತ್ರ. ಈ ಟ್ವೀಟ್‌ ಜತೆಗೆ, ರಾಜಕೀಯ ಪ್ರವೇಶದ ಘೋಷಣೆಗೆ ಒಂದು ವಾರದ ಮೊದಲು ಬಸ್‌ ನಿರ್ವಾಹಕನೊಬ್ಬನ ಜತೆಗೆ ರಜನಿಕಾಂತ್‌ ತೆಗೆಸಿಕೊಂಡ ಫೋಟೊ ಇದೆ. ಇದು ಒಂದು ಸಂಕೀರ್ಣ ಸಮಸ್ಯೆಗೆ ನೀಡಿದ ಮೇಲ್ಪದರದ ಪ್ರತಿಕ್ರಿಯೆ ಅಷ್ಟೇ.

ರಾಜಕೀಯದಲ್ಲಿ ರಜನಿಕಾಂತ್‌ ಯಶಸ್ವಿಯಾಗುವುದರ ಬಗ್ಗೆ ಜನರು ಯಾಕೆ ಅನುಮಾನಗಳನ್ನು ಹೊಂದಿದ್ದಾರೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈ ಸೂಪರ್‌ಸ್ಟಾರ್‌ ಬಗ್ಗೆ ಜನರಿಗೆ ಅಪಾರವಾದ ಪ್ರೀತಿ ಮತ್ತು ಗೌರವ ಇದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಆದರೆ, ಈ ಪ್ರೀತಿ ಮತ್ತು ಗೌರವ ಇರುವುದು ರಜನಿಕಾಂತ್‌ ಎಂಬ ವಿಶಿಷ್ಟ ಶೈಲಿಯ ನಟನ ಮೇಲೆ ಎಂಬುದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ತಮ್ಮ ದೈನಂದಿನ ಬದುಕಿನಲ್ಲಿ ಬದಲಾವಣೆ ತರುವ ತಾಕತ್ತು ರಜನಿಕಾಂತ್‌ ಅವರಲ್ಲಿ ಇದೆ ಎಂದು ತಮಿಳುನಾಡಿನ ಜನರು ಭಾವಿಸಿದರೆ ಮಾತ್ರ ಅವರು ಬೆಂಬಲ ನೀಡುತ್ತಾರೆ.

ರಾಜಕೀಯ ಪ್ರವೇಶಿಸಲು ರಜನಿಕಾಂತ್‌ ಅವರಿಗೆ ಇದಕ್ಕಿಂತ ಉತ್ತಮ ಸಂದರ್ಭ ದೊರೆಯುವುದು ಸಾಧ್ಯವಿರಲಿಲ್ಲ. ಆಡಳಿತದ ವಿಚಾರದಲ್ಲಿ ಎಐಎಡಿಎಂಕೆಯ ನಿರ್ಲಕ್ಷ್ಯದ ಬಗ್ಗೆ ಜನರಲ್ಲಿ ತೀವ್ರವಾದ ಅಸಹನೆ ಇದೆ. ವಿರೋಧ ಪಕ್ಷವಾಗಿ ಜನರ ವಿಶ್ವಾಸ ಗಳಿಸುವಲ್ಲಿ, ಸ್ಫೂರ್ತಿಯಿಂದ ಕೆಲಸ ಮಾಡುವಲ್ಲಿ ಡಿಎಂಕೆ ವಿಫಲವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಆರ್‌.ಕೆ. ನಗರ ಉಪಚುನಾವಣೆಯ ಫಲಿತಾಂಶ ಇದಕ್ಕೆ ಪುರಾವೆ ಒದಗಿಸಿದೆ. ಎರಡೂ ಪಕ್ಷಗಳು ಪಕ್ಷೇತರ ಅಭ್ಯರ್ಥಿಯ ಎದುರು ಸೋತಿವೆ. ಜಯಲಲಿತಾ ಅವರ ನಿಧನ ಮತ್ತು ಕರುಣಾನಿಧಿಯ ಅನುಪಸ್ಥಿತಿಯಿಂದಾಗಿ ತಮಿಳುನಾಡು ರಾಜಕೀಯ ಕ್ಷೇತ್ರದಲ್ಲಿ ರಾಜಕೀಯ ವ್ಯಕ್ತಿತ್ವದ ಕೊರತೆ ಎದ್ದು ಕಾಣುತ್ತಿದೆ.

ತಮ್ಮ ಸೂಪರ್‌ಸ್ಟಾರ್‌ ಇಮೇಜನ್ನು ಬಿಂಬಿಸುವ ಕೆಲಸವನ್ನಷ್ಟೇ ರಜನಿಕಾಂತ್‌ ಈತನಕ ಮಾಡಿದ್ದಾರೆ. ಭಾವೋದ್ರಿಕ್ತ ಜನ ಸಮೂಹದತ್ತ ಕೈಬೀಸುವುದು ಅಥವಾ ಗೋಗರೆಯುವ ಮಾಧ್ಯಮದ ಜತೆಗೆ ಫೋಟೊಶೂಟ್‌ ನಡೆಸುವುದು ಅಥವಾ ತಾವು ತಮಿಳುನಾಡಿನ ಅತ್ಯಂತ ದೊಡ್ಡ ತಾರೆ ಎಂಬುದನ್ನು ಒತ್ತಿ ಹೇಳುವುದಕ್ಕಾಗಿ ಕ್ವಾಲಾಲಂಪುರದ ‘ಸ್ಟಾರ್‌ ನೈಟ್‌’ನಲ್ಲಿ ಭಾಗವಹಿಸುವುದು ಇವುಗಳಲ್ಲಿ ಸೇರಿವೆ.

ಆದರೆ, ರಾಜಕೀಯದಲ್ಲಿ ಯಶಸ್ಸು ಪಡೆಯಲು ‘ಮೊದಲ ದಿನದ ಮೊದಲ ಷೋ’ಗಿಂತ ಹೆಚ್ಚಿನದನ್ನು ರಜನಿಕಾಂತ್‌ ಮಾಡಬೇಕಾಗುತ್ತದೆ. ಅವರ ಸಿದ್ಧಾಂತ ಏನು, ಅವರ ನೀತಿಗಳೇನು ಎಂಬುದನ್ನು ತಮಿಳುನಾಡಿನ ಜನರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ರಜನಿಕಾಂತ್‌ ಅವರನ್ನು ಒಂದು ಬಾರಿ ನೋಡಲು, ಒಮ್ಮೆ ಮುಟ್ಟಲು ಕಾತರಿಸುವ ಜನರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅನುಸರಿಸುತ್ತಿರುವ ಎಲ್ಲರೂ ಅವರಿಗೇ ಮತ ಹಾಕುತ್ತಾರೆ ಎಂದು ಅಂದಾಜಿಸುವುದು ಸರಳೀಕೃತ ಯೋಚನೆಯಾಗಬಹುದು. ಅದು ನಿಜವೇ ಆಗಿದ್ದರೆ, ದಕ್ಷಿಣ ಭಾರತದ ಹೆಚ್ಚಿನ ರಾಜ್ಯಗಳನ್ನು ರಾಜಕಾರಣಿಗಳಾಗಿ ಬದಲಾದ ಸಿನಿಮಾ ತಾರೆಯರೇ ಸದಾ ಆಳಬೇಕಿತ್ತು.

ರಜನಿಕಾಂತ್‌ ಈತನಕ ತಮ್ಮ ರಾಜಕೀಯ ನಡೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಇರಿಸುತ್ತಿದ್ದಾರೆ. ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಹೇಳುವ ಮೂಲಕ ತಮ್ಮ ಅಭಿಮಾನಿಗಳನ್ನು ತಲುಪುವ ಯತ್ನವನ್ನು ಅವರು ಮಾಡಿದ್ದಾರೆ. ಜತೆಗೆ, ತಮ್ಮ ಅಭಿಮಾನಿಗಳನ್ನಷ್ಟೇ ತಲುಪಿದರೆ ಸಾಲದು ಎಂಬ ಎಚ್ಚರಿಕೆಯೂ ಅವರಲ್ಲಿ ಕಂಡಿದೆ. ಹಾಗಾಗಿ, ‘ಅಖಿಲ ಭಾರತ ರಜನಿಕಾಂತ್‌ ಅಭಿಮಾನಿಗಳ ಸಂಘ’ದ ಹೆಸರನ್ನು ಅವರು ‘ರಜನಿ ಜನ ವೇದಿಕೆ’ ಎಂದು ಬದಲಾಯಿಸಿದ್ದಾರೆ.

ಹೊಸ ರಾಜಕೀಯ ಚಿಂತನೆ ಚೈತನ್ಯದಿಂದ ಚಿಮ್ಮುತ್ತಿರಬೇಕು ಎಂಬುದು ಸಹಜ ನಿರೀಕ್ಷೆ. ಆದರೆ ರಜನಿ ಅತಿ ಜಾಗರೂಕರಾಗಿರುವಂತೆ ಕಾಣಿಸುತ್ತಿದೆ. ತಮ್ಮ ಪರವಾಗಿ ಮಾಧ್ಯಮದ ಜತೆ ಮಾತನಾಡುತ್ತಿರುವ ಎಲ್ಲರ ಜತೆಯೂ ಅವರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ತಮ್ಮಲ್ಲಿ ಅಪನಂಬಿಕೆಯ ಭಾವ ಇದೆ ಎಂಬ ಸಂದೇಶ ರವಾನೆಯಾಗುವುದನ್ನು ಅವರು ಬಯಸುತ್ತಿರುವಂತೆ ಭಾಸವಾಗುತ್ತಿದೆ. ಅವರೊಂದಿಗೆ ಗುರುತಿಸಿಕೊಳ್ಳಲು ಬಯಸುವ ಕೆಲವು ಅಭಿಮಾನಿಗಳಲ್ಲಿ ಇದು ಅಸಮಾಧಾನಕ್ಕೆ ಕಾರಣವಾಗಬಹುದು.

ವಿವಾದಾಸ್ಪದವಾದ ವಿಚಾರಗಳ ಬಗ್ಗೆಯೂ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾದ ಸಂದರ್ಭ ಬಂದಾಗ ರಜನಿಕಾಂತ್‌ಗೆ ನಿಜವಾದ ಪರೀಕ್ಷೆ ಎದುರಾಗಲಿದೆ. ಈತನಕ ಮಾಡಿದಂತೆ ಏನನ್ನೂ ಮಾತನಾಡದೆ ಸುರಕ್ಷಿತವಾಗಿರುವುದು ರಾಜಕಾರಣಿಯ ಮುಂದೆ ಇರುವ ಆಯ್ಕೆಯೇ ಅಲ್ಲ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಜತೆಗೆ ಅವರು ಹೇಗೆವ್ಯವಹರಿಸುತ್ತಾರೆ ಎಂಬುದನ್ನೂ ನಿಕಟವಾಗಿ ಗಮನಿಸಲಾಗುತ್ತಿದೆ. ‘ಆಧ್ಯಾತ್ಮಿಕ ರಾಜಕಾರಣ’ ಎಂದು ತಾವು ಹೇಳಿದ್ದು ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕಾರಣವನ್ನೇ ಹೊರತು ಅದು ಜಾತ್ಯತೀತವಲ್ಲದ ರಾಜಕಾರಣದ ಉಲ್ಲೇಖ ಅಲ್ಲ ಎಂದು ರಜನಿಕಾಂತ್‌ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೂ, ತಮಿಳುನಾಡಿನಲ್ಲಿ ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಯ ಮುಖವಾಗಿಯಷ್ಟೇ ರಜನಿಕಾಂತ್‌ ಕಾಣಿಸಿಕೊಳ್ಳಲಿದ್ದಾರೆ ಎಂಬ ಅನುಮಾನ ಈಗಲೂ ಇದೆ. ತಮಿಳುನಾಡು ರಾಜಕಾರಣದ ಅಂಚಿನಲ್ಲಷ್ಟೇ ಬಿಜೆಪಿ ಇದೆ. 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ತನ್ನ ಸದಸ್ಯಬಲವನ್ನು ಹೆಚ್ಚಿಸಲು ಬಿಜೆಪಿ ಹತಾಶ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ತಮಿಳುನಾಡಿನಾದ್ಯಂತ ಜನಪ್ರಿಯತೆ ಹೊಂದಿರುವ ರಜನಿಯನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಆರ್‌.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳು ‘ನೋಟಾ’ಕ್ಕಿಂತ ಕಡಿಮೆ. ಹಾಗಾಗಿ ತಮಿಳುನಾಡಿನ ಮತದಾರರ ಮನಗೆಲ್ಲಲು ಬಿಜೆಪಿ ಇದಕ್ಕಿಂತ ಬಹಳ ಹೆಚ್ಚಿನದನ್ನು ಮಾಡಬೇಕಾಗುತ್ತದೆ.

ತಮಿಳು ಸಿನಿಮಾ ರಂಗದಲ್ಲಿ ಮಹತ್ತರವಾದುದನ್ನು ಸಾಧಿಸಿದ 43 ವರ್ಷಗಳ ಬಳಿಕ 2018ರಲ್ಲಿ ರಜನಿಕಾಂತ್‌ ಮತ್ತೊಂದು ಪರೀಕ್ಷೆಗೆ ಅಣಿಯಾಗಬೇಕಿದೆ. ತಮಿಳುನಾಡಿನ ಶಕ್ತಿ ಕೇಂದ್ರ ಫೋರ್ಟ್‌ ಸೇಂಟ್‌ ಜಾರ್ಜ್‌ಗೆ ತಾವೇ ಚಾಲಕರಾಗಿ ಮುನ್ನುಗ್ಗಲಿದ್ದಾರೆಯೇ ಅಥವಾ ಹಿಂದಿನಂತೆ, ನಿರ್ವಾಹಕರಾಗಿ ಬೇರೊಬ್ಬರು ವೇದಿಕೆ ಏರಲು ಮಾರ್ಗ ತೋರಲಿದ್ದಾರೆಯೇ ಎಂಬುದು ಈಗ ಇರುವ ಪ್ರಶ್ನೆ.

ಲೇಖಕ: ಹಿರಿಯ ಪತ್ರಕರ್ತ, ‘ಸೈನಾ ನೆಹ್ವಾಲ್‌: ಆ್ಯನ್‌ ಇನ್‌ಸ್ಪಿರೇಷನಲ್‌ ಬಯಾಗ್ರಫಿ’ ಕೃತಿಯ ಕರ್ತೃ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry