ಸೆಕ್ಷನ್ 377 ಮರುಪರಿಶೀಲನೆ ಸುಪ್ರೀಂಕೋರ್ಟ್ ನಡೆ ಸ್ವಾಗತಾರ್ಹ

7

ಸೆಕ್ಷನ್ 377 ಮರುಪರಿಶೀಲನೆ ಸುಪ್ರೀಂಕೋರ್ಟ್ ನಡೆ ಸ್ವಾಗತಾರ್ಹ

Published:
Updated:
ಸೆಕ್ಷನ್ 377 ಮರುಪರಿಶೀಲನೆ ಸುಪ್ರೀಂಕೋರ್ಟ್ ನಡೆ ಸ್ವಾಗತಾರ್ಹ

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಮರು ಪರಿಶೀಲನೆಗೆ ಸುಪ್ರೀಂ ಕೋರ್ಟ್ ಮುಂದಾಗಿದೆ. 1860ರಷ್ಟು ಹಿಂದೆ ಬ್ರಿಟಿಷರು ಜಾರಿಗೊಳಿಸಿದ ಕಾನೂನು ಇದು. ಓಬೀರಾಯನ ಕಾಲದ ಈ ಸವಕಲು ಕಾನೂನು 21ನೇ ಶತಮಾನದ ಈ ಆಧುನಿಕೋತ್ತರ ಕಾಲದಲ್ಲೂ ಹೇಗೆ ಪ್ರಸ್ತುತ ಎಂಬುದು ಇಲ್ಲಿ ಪರಿಗಣಿತವಾಗಬೇಕಿರುವ ಪ್ರಶ್ನೆ. ಇಂದಿನ ಆಧುನಿಕೋತ್ತರ ಕಾಲದಲ್ಲಿ ಈ ಕಾನೂನು ಅಪ್ರಸ್ತುತ ಎಂಬುದರಲ್ಲಿ ಎರಡು ಮಾತಿಲ್ಲ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಲಿಂಗಿ ಮದುವೆಗಳು ಕಾನೂನುಬದ್ಧವಾಗುತ್ತಿರುವಂತಹ ಕಾಲದಲ್ಲಿದ್ದೇವೆ ನಾವು. ಹೀಗಿದ್ದೂ ಸಲಿಂಗ ಕಾಮವನ್ನು ಅಪರಾಧ ಎಂದು ಭಾವಿಸಲಾಗುವ ಸೆಕ್ಷನ್ 377 ಅನ್ನು ಭಾರತದ ರಾಜಕೀಯ ಆಡಳಿತ ವ್ಯವಸ್ಥೆ ಸಹಿಸಿಕೊಂಡು ಬರುತ್ತಲೇ ಇದೆ ಎಂಬುದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ಮಾತುಗಳು ಮಹತ್ವದ್ದು.

2009ರಲ್ಲಿ ಸೆಕ್ಷನ್ 377 ಅನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿ ಹೊಸ ಇತಿಹಾಸ ನಿರ್ಮಿಸಿತ್ತು.  ಈ ತೀರ್ಪನ್ನು ರಾಷ್ಟ್ರದಾದ್ಯಂತ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಸಂಭ್ರಮಿಸಿತ್ತು. ಆದರೇನು? 2013ರಲ್ಲಿ ಸೆಕ್ಷನ್ 377 ಅನ್ನು ಮರುಜಾರಿಗೊಳಿಸಿದ ಸುಪ್ರೀಂ ಕೋರ್ಟ್, ಪ್ರಗತಿ ವಿರೋಧಿ ನಿಲುವು ಪ್ರದರ್ಶಿಸಿತ್ತು. ಈಗ ಈ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಮುಂದಾಗಿದೆ ಎಂಬುದು ಸ್ವಾಗತಾರ್ಹ ನಡೆ. ಅದೂ ‘ಸಮಾಜದ ನೈತಿಕತೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತವೆ. ಬದುಕಿನ ಜೊತೆಗೆ ಕಾನೂನೂ ಹೆಜ್ಜೆ ಹಾಕುತ್ತಿರುತ್ತದೆ. ಬದಲಾವಣೆಗಳಾಗಬೇಕಾದುದು ಸಹಜ’ ಎಂದು ಕೋರ್ಟ್ ಈ ಸಂದರ್ಭದಲ್ಲಿ ಹೇಳಿರುವುದು ಸರಿಯಾದದ್ದು. ಸೆಕ್ಷನ್ 377 ಕುರಿತಾದ ಈ ಹಿಂದಿನ ತೀರ್ಪು ಅನೇಕ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದನ್ನು ‘ಮರು ಪರಿಶೀಲಿಸಬೇಕಾದುದು ಅಗತ್ಯ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿರುವುದು ಮಹತ್ವದ್ದು. ‘ಸಲಿಂಗಕಾಮ ಎನ್ನುವುದು ದೋಷಪೂರ್ಣವಾದದ್ದು. ಇಂತಹ ಅಸಹಜ ವರ್ತನೆ ತೋರುವವರನ್ನು ಶಿಕ್ಷಿಸಬೇಕು’ ಎಂಬ ಭಾವನೆ ಈಗಲೂ ಅನೇಕ ಸುಶಿಕ್ಷಿತರಲ್ಲೇ ಇದೆ. ಅನೇಕ ಕಾನೂನು ತಜ್ಞರೂ ಇಂತಹ ದೃಷ್ಟಿಕೋನಗಳನ್ನು ಹೊಂದಿದ್ದಾರೆ. ಆದರೆ ಮಧ್ಯಯುಗದ ಮನಸ್ಥಿತಿಯ ಪ್ರತೀಕ ಇದು. ಜೊತೆಗೆ ಬ್ರಿಟಿಷ್ ವಸಾಹತುಶಾಹಿ ಪ್ರತಿಪಾದಿಸಿದ ನೈತಿಕತೆಯಾಗಿತ್ತು ಇದು. ಭಾರತೀಯ ಪರಂಪರೆಯಲ್ಲಿ ಸಲಿಂಗಕಾಮವನ್ನು ಅಪರಾಧವಾಗಿ ಕಾಣುವಂತಹ ದೃಷ್ಟಿಕೋನ  ಇಲ್ಲ ಎಂಬುದನ್ನೂ ನಾವು ಅರ್ಥಮಾಡಿಕೊಳ್ಳಬೇಕು.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ, ಲೈಂಗಿಕತೆಯ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿತ್ತು. ಆಗಲೇ ಸೆಕ್ಷನ್ 377ಕ್ಕೆ ಸಂಬಂಧಿಸಿದಂತೆ ಹೊಸ ಭರವಸೆ ಮೂಡಿತ್ತು. ಲೈಂಗಿಕತೆಯ ಆಯ್ಕೆಯ ಆಧಾರದಲ್ಲಿ ತಾರತಮ್ಯ ಮಾಡುವುದು ವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನ ಹಾಗೂ ಘನತೆಗೆ ಚ್ಯುತಿ ತರುವಂತಹದ್ದು. ಸಂವಿಧಾನದ 14, 15 ಹಾಗೂ 21ನೇ ವಿಧಿಗಳಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳಿಗೆ ಇದು ಸಂಬಂಧಿಸಿದೆ. ಹೀಗಾಗಿ, ಈ ಸಂಬಂಧದಲ್ಲಿ ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪಿನಿಂದ ಆಗಿರುವ ತಪ್ಪು ಸರಿಯಾಗುವಂತಾಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry