ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವಿನ ಕನಸು

7

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವಿನ ಕನಸು

Published:
Updated:
ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವಿನ ಕನಸು

ವಿಶಾಖಪಟ್ಟಣ: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದು ನಂತರ ಮುಗ್ಗರಿಸಿರುವ ಕರ್ನಾಟಕ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ.

ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ಆರ್‌.ವಿನಯ್‌ ಕುಮಾರ್‌ ಬಳಗ ಹೈದರಾಬಾದ್‌ ವಿರುದ್ಧ ಸೆಣಸಲಿದೆ.

ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ ಸುಲಭವಾಗಿ ಗೆದ್ದು ವಿಶ್ವಾಸದಿಂದ ಪುಟಿಯುತ್ತಿದ್ದ ರಾಜ್ಯ ತಂಡಕ್ಕೆ ಎರಡನೇ ಹಣಾಹಣಿಯಲ್ಲಿ ಹನುಮವಿಹಾರಿ ಸಾರಥ್ಯದ ಆಂಧ್ರ ತಂಡ ಆಘಾತ ನೀಡಿತ್ತು.

ಆಂಧ್ರ ಎದುರಿನ ಹೋರಾಟದಲ್ಲಿ ವಿನಯ್‌ ಬಳಗ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ವೈಫಲ್ಯ ಆನುಭವಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಂಕ್‌ ಅಗರವಾಲ್‌ ಮತ್ತು ಕರುಣ್‌ ನಾಯರ್‌ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿರಲಿಲ್ಲ. ಗೋವಾ ಎದುರು ಅರ್ಧಶತಕ ಬಾರಿಸಿದ್ದ ಮಯಂಕ್‌ 2 ರನ್‌ ಗಳಿಸಿ ಔಟಾಗಿದ್ದರು. ಕರುಣ್‌ 19ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದ್ದರು.

ಇವರು ಹೈದರಾಬಾದ್‌ ಎದುರು ಲಯ ಕಂಡುಕೊಳ್ಳುವುದು ಅಗತ್ಯ. ಆರ್‌.ಸಮರ್ಥ್‌ ಉತ್ತಮ ಲಯದಲ್ಲಿ ಆಡುತ್ತಿದ್ದಾರೆ. ಆದರೆ ದೊಡ್ಡ ಮೊತ್ತ ಪೇರಿಸಲು ಅವರಿಗೆ ಆಗುತ್ತಿಲ್ಲ. ಮನೀಷ್‌ ಪಾಂಡೆ ಮತ್ತು ಸಿ.ಎಂ. ಗೌತಮ್‌ ಅವರ ವೈಫಲ್ಯ ನಾಯಕ ವಿನಯ್‌ ಚಿಂತೆಗೆ ಕಾರಣವಾಗಿದೆ.

ಭಾರತ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಮನೀಷ್‌ ಎರಡು ಪಂದ್ಯಗಳಿಂದ ಕ್ರಮವಾಗಿ 24 ಮತ್ತು 14 ರನ್‌ ಗಳಿಸಲಷ್ಟೇ ಶಕ್ತವಾಗಿದ್ದಾರೆ. ಅವರು ಹೈದರಾಬಾದ್‌ ವಿರುದ್ಧ ಅಬ್ಬರಿಸಬೇಕಿದೆ. ಸ್ಟುವರ್ಟ್‌ ಬಿನ್ನಿ ಮತ್ತು ನಾಯಕ ವಿನಯ್‌ ಹಿಂದಿನ ಪಂದ್ಯಗಳಲ್ಲಿ ರನ್‌ ಕಾಣಿಕೆ ನೀಡಿದ್ದರು. ಹೀಗಾಗಿ ಅವರ ಮೇಲೆ ಭರವಸೆ ಇಡಬಹುದು.

ಬೌಲಿಂಗ್‌ನಲ್ಲೂ ತಂಡ ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಅಭಿಮನ್ಯು ಮಿಥುನ್‌ ಮತ್ತು ವಿನಯ್‌ ಆರಂಭದಲ್ಲೇ ವಿಕೆಟ್‌ ಉರುಳಿಸಿ ಎದುರಾಳಿಗಳ ಮೇಲೆ ಒತ್ತಡ ಹೇರಬೇಕಿದೆ.

ಹಿಂದಿನ ಪಂದ್ಯದಲ್ಲಿ ಮಿಥುನ್‌ 3 ಓವರ್‌ ಬೌಲ್‌ ಮಾಡಿ 37ರನ್‌ ಕೊಟ್ಟಿದ್ದರು. 4 ಓವರ್‌ ಹಾಕಿದ್ದ ವಿನಯ್‌ 29ರನ್‌ ನೀಡಿದ್ದರು. ಆದರೆ ವಿಕೆಟ್‌ ಪಡೆಯಲು ಇಬ್ಬರೂ ವಿಫಲರಾಗಿದ್ದರು.

ಎಸ್‌.ಅರವಿಂದ್‌ ಮತ್ತು ಕೆ.ಗೌತಮ್‌ ತಂಡದ ಭರವಸೆ ಹೆಚ್ಚಿಸಿದ್ದಾರೆ. ಬಿನ್ನಿ ಮತ್ತು ಪ್ರವೀಣ್‌ ದುಬೆ ಕೂಡ ತಮ್ಮ ಮೇಲಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ.

ವಿಶ್ವಾಸದಲ್ಲಿ ಹೈದರಾಬಾದ್‌: ಅಂಬಟಿ ರಾಯುಡು ಸಾರಥ್ಯದ ಹೈದರಾಬಾದ್‌ ಕೂಡ ಗೆಲುವಿನ ವಿಶ್ವಾಸ ಹೊಂದಿದೆ. ಅಕ್ಷತ್‌ ರೆಡ್ಡಿ, ತನ್ಮಯ್‌ ಅಗರವಾಲ್‌ ಮತ್ತು ಆಶಿಶ್‌ ರೆಡ್ಡಿ ಬ್ಯಾಟಿಂಗ್‌ನಲ್ಲಿ ಹೈದರಾಬಾದ್‌ ತಂಡದ ಆಧಾರಸ್ತಂಭಗಳಾಗಿದ್ದಾರೆ. ಆಕಾಶ್‌ ಭಂಡಾರಿ, ಮಹಮ್ಮದ್‌ ಸಿರಾಜ್‌ ಮತ್ತು ಪ್ರಗ್ಯಾನ್‌ ಓಜಾ ಅವರು ಕರ್ನಾಟಕದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವ ಸಾಮರ್ಥ್ಯ ಹೊಂದಿದ್ದಾರೆ.

ಪಂದ್ಯದ ಆರಂಭ: ಬೆಳಿಗ್ಗೆ 9ಕ್ಕೆ.

ಸ್ಥಳ: ವಿಶಾಖಪಟ್ಟಣ.

****

ಕರ್ನಾಟಕದ ಮೇಲುಗೈ

2011ರಿಂದ 2017ರ ಅವಧಿಯಲ್ಲಿ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಉಭಯ ತಂಡಗಳು ಐದು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಕರ್ನಾಟಕ ತಂಡ ಮೂರು ಪಂದ್ಯಗಳಲ್ಲಿ ಗೆದ್ದಿದ್ದರೆ, ಹೈದರಾಬಾದ್‌ ಎರಡು ಬಾರಿ ಜಯದ ಸಿಹಿ ಸವಿದಿದೆ.

2011ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ಮೊದಲು ಬ್ಯಾಟ್‌ ಮಾಡಿ 8 ವಿಕೆಟ್‌ಗೆ 202 ರನ್‌ ಗಳಿಸಿತ್ತು. ಇದು ಹೈದರಾಬಾದ್‌ ಎದುರು ವಿನಯ್‌ ಪಡೆಯ ಗರಿಷ್ಠ ರನ್‌ ಎನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry