ಮಾರಕಾಸ್ತ್ರಗಳ ಪತ್ತೆಗೆ ನದಿಯಲ್ಲಿ ಶೋಧ

7
ಆಕಾಶಭವನ ಅಬ್ದುಲ್ ಬಶೀರ್‌ ಕೊಲೆ ಪ್ರಕರಣ

ಮಾರಕಾಸ್ತ್ರಗಳ ಪತ್ತೆಗೆ ನದಿಯಲ್ಲಿ ಶೋಧ

Published:
Updated:
ಮಾರಕಾಸ್ತ್ರಗಳ ಪತ್ತೆಗೆ ನದಿಯಲ್ಲಿ ಶೋಧ

ಮಂಗಳೂರು: ಆಕಾಶಭವನ ನಿವಾಸಿ ಅಬ್ದುಲ್‌ ಬಶೀರ್‌ ಕೊಲೆ ಆರೋಪದಡಿ ಬಂಧಿತರಾಗಿರುವ ನಾಲ್ವರು, ಕೃತ್ಯ ಎಸಗಿದ ಬಳಿಕ ಮಾರಕಾಸ್ತ್ರ ಮತ್ತು ಮೊಬೈಲ್‌ಗಳನ್ನು ನೇತ್ರಾವತಿ ನದಿಗೆ ಎಸೆದಿರುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಬುಧವಾರ ತನಿಖಾ ತಂಡ ಶೋಧ ನಡೆಸಿತು.

ಈ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯ ಪಿ.ಕೆ.ಶ್ರೀಜಿತ್‌, ಸಂದೇಶ್ ಕೋಟ್ಯಾನ್‌, ಪಡೀಲ್‌ ನಿವಾಸಿಗಳಾದ ಧನುಷ್‌ ಪೂಜಾರಿ ಮತ್ತು ಕಿಶನ್‌ ಪೂಜಾರಿ ಎಂಬವರನ್ನು ಬಂಧಿಸಲಾಗಿದೆ. ಇದೇ 3ರಂದು ರಾತ್ರಿ ಬಶೀರ್‌ ಕೊಲೆಗೆ ಯತ್ನಿಸಿದ ಬಳಿಕ ನೇತ್ರಾವತಿ ಸೇತುವೆ ಮೇಲಿನಿಂದ ಮಾರಕಾಸ್ತ್ರ ಮತ್ತು ಮೊಬೈಲ್‌ಗಳನ್ನು ಎಸೆದು ಮಂಜೇಶ್ವರಕ್ಕೆ ತೆರಳಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ನಾಲ್ವರು ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದ ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ವೆಲೆಂಟೈನ್‌ ಡಿಸೋಜ ನೇತೃತ್ವದ ತಂಡ, ಮುಳುಗು ತಜ್ಞರ ನೆರವಿನಲ್ಲಿ ಶೋಧ ನಡೆಸಿತು. ತಣ್ಣೀರು ಬಾವಿ ಮುಳುಗುತಜ್ಞರ ತಂಡದ ಸದಸ್ಯರು ನೇತ್ರಾವತಿ ನದಿಯಲ್ಲಿ ಮುಳುಗಿ ಮಾರಕಾಸ್ತ್ರ ಮತ್ತು ಮೊಬೈಲ್‌ಗಳನ್ನು ಹುಡುಕಿದರು.

‘ಕೆಲವು ಮಾರಕಾಸ್ತ್ರಗಳನ್ನು ಕಾರ್ಯಾಚರಣೆ ವೇಳೆ ಪತ್ತೆ ಮಾಡಲಾಗಿದೆ. ಇನ್ನೂ ಕೆಲವು ಮಾರಕಾಸ್ತ್ರಗಳನ್ನು ಬೇರೆ ಬಚ್ಚಿಟ್ಟಿರುವ ಮಾಹಿತಿ ಲಭ್ಯವಾಗಿದೆ. ಮೊಬೈಲ್‌ಗಳನ್ನೂ ಪತ್ತೆ ಮಾಡಲು ಶೋಧ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಂದುವರಿದ ಚಿಕಿತ್ಸೆ: ದೀಪಕ್‌ ರಾವ್‌ ಕೊಲೆ ಪ್ರಕರಣದಲ್ಲಿ ಬಂಧನದ ಸಮಯದಲ್ಲಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಪ್ರಮುಖ ಆರೋಪಿಗಳಾದ ಪಿಂಕಿ ನವಾಝ್‌ ಮತ್ತು ರಿಜ್ವಾನ್‌ರನ್ನು ಇನ್ನೂ ವಶಕ್ಕೆ ಪಡೆಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇಬ್ಬರಿಗೂ ಕಂಕನಾಡಿಯ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಎರಡು ದಿನಗಳ ಬಳಿಕ ಇಬ್ಬರನ್ನೂ ಪೊಲೀಸ್‌ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಎರಡೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಐವರ ಪತ್ತೆಗಾಗಿ ಪೊಲೀಸ್‌ ಕಾರ್ಯಾಚರಣೆ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry