ಮಹದಾಯಿ: 27ರಂದು ಕರ್ನಾಟಕ ಬಂದ್

7
ಕನ್ನಡ ಒಕ್ಕೂಟದ ಸಭೆಯಲ್ಲಿ ನಿರ್ಧಾರ

ಮಹದಾಯಿ: 27ರಂದು ಕರ್ನಾಟಕ ಬಂದ್

Published:
Updated:

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ಇದೇ 27ರಂದು ಕರ್ನಾಟಕ ಬಂದ್‌ ನಡೆಸಲು ಕನ್ನಡ ಒಕ್ಕೂಟ ನಿರ್ಧರಿಸಿದೆ.

ವಾಟಾಳ್ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅಧ್ಯಕ್ಷತೆಯಲ್ಲಿ ಕನ್ನಡ ಪರ ಮತ್ತು ರೈತ ಸಂಘಟನೆಗಳ ಮುಖಂಡರು ಸಭೆ ನಡೆಸಿ ಈ ತೀರ್ಮಾನ ಕೈಗೊಂಡರು.

ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಅಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಬಸ್‌, ಲಾರಿ, ಆಟೋರಿಕ್ಷಾ, ಟ್ಯಾಕ್ಸಿ ಸಂಚಾರ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಶಾಲಾ–ಕಾಲೇಜುಗಳು ಬಂದ್ ಆಗಲಿವೆ. ಆಸ್ಪತ್ರೆ, ಔಷಧಿ ಅಂಗಡಿ, ಹಾಲು, ಮಾಧ್ಯಮ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ವಿನಾಯಿತಿ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಪುರಭವನದ ಬಳಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಒಂದು ಲಕ್ಷ ಜನರೊಂದಿಗೆ ಮೆರವಣಿಗೆ ನಡೆಸಲಾಗುವುದು. ಕನ್ನಡ ಸೇನೆ, ಜಯ ಕರ್ನಾಟಕ, ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲಾ ಬಣಗಳ ಬೆಂಬಲ ಕೋರಲಾಗಿದೆ ಎಂದರು.

ಮಹದಾಯಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರ ಒಗ್ಗಟ್ಟು ಒಡೆಯುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ನೀಡದೆ ಪ್ರತಿಷ್ಠೆ ಬಿಟ್ಟು ನೀರಿಗಾಗಿ ರೈತರು ಒಟ್ಟಾಗಬೇಕು ಎಂದೂ ಮನವಿ ಮಾಡಿದರು.

ಇದೇ 28ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಗಮನ ಸೆಳೆಯುವ ಸಲುವಾಗಿ ಬಂದ್ ನಡೆಸಲಾಗುತ್ತಿದೆ. ಮಧ್ಯಸ್ಥಿಕೆ ವಹಿಸುವ ನಿರ್ಧಾರ ಕೈಗೊಂಡರೆ ಬಂದ್ ವಾಪಸ್ ಪಡೆಯಲಾಗುವುದು ಎಂದು ಹೇಳಿದರು.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಾಲ್ಕು ವಾರದೊಳಗೆ ಸುಪ್ರಿಂ ಕೋರ್ಟ್‌ ತೀರ್ಪು ಪ್ರಕಟಿಸಲಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾಗುವ ಸಾಧ್ಯತೆ ಇದ್ದು, ಇದರ ವಿರುದ್ಧ ಹೋರಾಟಕ್ಕೂ ರೈತರು ಸಜ್ಜಾಗಬೇಕು ಎಂದು ತಿಳಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ಬಂದ್ ದಿನದಂದು ಚಿತ್ರೋದ್ಯಮ ಸಂಪೂರ್ಣವಾಗಿ ಬಂದ್ ಆಗಲಿದ್ದು, ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದರೆ ಎಂದು ತಿಳಿಸಿದರು.

21ರಂದು ಹುಬ್ಬಳ್ಳಿಯಲ್ಲಿ ಸಭೆ

ಬಂದ್ ದಿನದ ಹೋರಾಟಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಇದೇ 21ರಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಲಾಗುವುದು ಎಂದು ಮಹದಾಯಿ ಕಳಸಾ–ಬಂಡೂರಿ ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರು ತಿಳಿಸಿದರು.

ಮಹದಾಯಿ ನೀರಿಗಾಗಿ ಹೋರಾಟ ನಡೆಸುತ್ತಿರುವ ಎಲ್ಲಾ ರೈತ ಮುಖಂಡರನ್ನೂ ಸಭೆಗೆ ಕರೆಯಲಾಗುವುದು.ಪ್ರಧಾನಿ ಮಧ್ಯಸ್ಥಿಕೆ ವಹಿಸುವ ನಿರ್ಧಾರ ಕೈಗೊಳ್ಳದಿದ್ದರೆ, ಅವರು ಕರ್ನಾಟಕ್ಕೆ ಭೇಟಿ ನೀಡುವ ದಿನ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದೂ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry