ಡಕಾರ್‌ ರ‍್ಯಾಲಿ: 56ನೇ ಸ್ಥಾನದಲ್ಲಿ ಸಂತೋಷ್‌

7

ಡಕಾರ್‌ ರ‍್ಯಾಲಿ: 56ನೇ ಸ್ಥಾನದಲ್ಲಿ ಸಂತೋಷ್‌

Published:
Updated:
ಡಕಾರ್‌ ರ‍್ಯಾಲಿ: 56ನೇ ಸ್ಥಾನದಲ್ಲಿ ಸಂತೋಷ್‌

ಸ್ಯಾನ್‌ ವುವಾನ್‌ ಡಿ ಮರಕಾನ, ಪೆರು (ಪಿಟಿಐ): ದುರ್ಗಮ ಹಾದಿ ಮತ್ತು ಮರಳುಗಾಡಿನ ಅತ್ಯಂತ ಅಪಾಯಕಾರಿ ಇಳಿಜಾರುಗಳಲ್ಲಿ ಕೆಚ್ಚೆದೆಯಿಂದ ಮೋಟರ್‌ ಬೈಕ್‌ ಚಲಾಯಿಸಿದ ಕರ್ನಾಟಕದ ಸಿ.ಎಸ್.ಸಂತೋಷ್‌, ಡಕಾರ್‌ ರ‍್ಯಾಲಿಯ ನಾಲ್ಕನೇ ಹಂತದ ಕೊನೆಗೆ  56ನೇ ಸ್ಥಾನದಲ್ಲಿದ್ದಾರೆ.

ಹೀರೊ ಮೋಟರ್‌ ಸ್ಪೋರ್ಟ್ಸ್‌ ರ‍್ಯಾಲಿ ತಂಡದ ಸಂತೋಷ್‌ ಮಂಗಳವಾರ ನಡೆದ 444 ಕಿಲೊ ಮೀಟರ್ಸ್‌ ದೂರದ ನಾಲ್ಕನೇ ಹಂತದ ಸ್ಪರ್ಧೆಯನ್ನು ಪೂರ್ಣಗೊಳಿಸಿ ರ‍್ಯಾಂಕಿಂಗ್‌ನಲ್ಲಿ 40 ಸ್ಥಾನ ಮೇಲೇರಿದರು.

ಹೀರೊ ತಂಡದ ಮತ್ತೊಬ್ಬ ಸ್ಪರ್ಧಿ ಒರಿಯಲ್‌ ಮೆನಾ, 33ನೇಯವರಾಗಿ ನಾಲ್ಕನೇ ಹಂತವನ್ನು ಮುಗಿಸಿದರು. ಅವರು ಒಟ್ಟಾರೆ 24ನೇ ಸ್ಥಾನ ಹೊಂದಿದ್ದಾರೆ.

44ನೇ ಸ್ಥಾನದಲ್ಲಿ ಅರವಿಂದ್‌: ಕರ್ನಾಟಕದ ಮತ್ತೊಬ್ಬ ಸ್ಪರ್ಧಿ, ಟಿವಿಎಸ್‌ ರೇಸಿಂಗ್‌ ತಂಡದ ಕೆ.ಪಿ.ಅರವಿಂದ್‌ ನಾಲ್ಕನೇ ಸುತ್ತಿನ ಅಂತ್ಯಕ್ಕೆ 44ನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಹಂತಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದ ಉಡುಪಿಯ ಅರವಿಂದ್‌, ನಾಲ್ಕನೇ ಹಂತದಲ್ಲೂ ಛಲದಿಂದ ಬೈಕ್‌ ಓಡಿಸಿದರು. ಟಿವಿಎಸ್‌ ರೇಸಿಂಗ್‌ ತಂಡದ ಮತ್ತೊಬ್ಬ ಸ್ಪರ್ಧಿ ಜೊವಾನ್‌ ಪೆಡೆರೆರೊ 17ನೇ ಸ್ಥಾನದಲ್ಲಿದ್ದಾರೆ. ಐದನೇ ಹಂತದಲ್ಲಿ ಸ್ಪರ್ಧಿಗಳು ಒಟ್ಟಾರೆ 774 ಕಿ.ಮೀ ದೂರ ಕ್ರಮಿಸಬೇಕಿದೆ.

‘ನಾಲ್ಕನೇ ಹಂತದ ಸ್ಪರ್ಧೆಯ ಆರಂಭದಲ್ಲಿ  ಒಟ್ಟು 15 ಮಂದಿ ಒಟ್ಟಿಗೆ ಸ್ಪರ್ಧೆ ಆರಂಭಿಸಿದೆವು. ಕಡಲ ತೀರದ ಮೂಲಕ ಸಾಗಬೇಕಿದ್ದುದರಿಂದ ಆರಂಭದಲ್ಲಿ ಹಿನ್ನಡೆಯಾಯಿತು. ಮರಳುಗಾಡಿನ ಇಳಿಜಾರುಗಳಲ್ಲಿ ಬೈಕ್‌ ಚಾಲನೆ ಮಾಡುವುದು ಬಹುದೊಡ್ಡ ಸವಾಲೆನಿಸಿತ್ತು. 200 ಕಿ.ಮೀ ಕ್ರಮಿಸಿದ ಬಳಿಕ ಮರಳು ರಾಶಿಯ ಕೆಳಗಿದ್ದ ಬಂಡೆಗೆ ಡಿಕ್ಕಿ ಹೊಡೆದು ಬಿದ್ದೆ. ಮತ್ತೆ ಸುಧಾರಿಸಿಕೊಂಡು ಸ್ಪರ್ಧೆ ಮುಗಿಸಿದ್ದು ಖುಷಿ ನೀಡಿದೆ’ ಎಂದು ಸಂತೋಷ್‌ ಹೇಳಿದ್ದಾರೆ.

‘ಯೋಜನೆಗೆ ಅನುಗುಣವಾಗಿ ಬೈಕ್‌ ಚಾಲನೆ ಮಾಡುತ್ತಿದ್ದೇನೆ. ಹೀಗಾಗಿ ಹಂತದಿಂದ ಹಂತಕ್ಕೆ ಸಾಮರ್ಥ್ಯ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಮುಂದಿನ ಹಂತಗಳಲ್ಲೂ ಛಲದಿಂದ ಬೈಕ್‌ ಓಡಿಸುತ್ತೇನೆ’ ಎಂದು ಅರವಿಂದ್ ತಿಳಿಸಿದ್ದಾರೆ.

ಗಾಯಗೊಂಡ ಸಂದರ್‌ಲೆಂಡ್‌: ಬ್ರಿಟನ್‌ನ ಬೈಕ್‌ ಸಾಹಸಿ ಸ್ಯಾಮ್‌ ಸಂದರ್‌ಲೆಂಡ್‌ ನಾಲ್ಕನೇ ಹಂತದ ರೇಸ್‌ನ ವೇಳೆ ಗಾಯಗೊಂಡರು.

ಅವರ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಲಿಮಾಗೆ ಕೊಂಡೊಯ್ಯಲಾಯಿತು. ಅವರು ರ‍್ಯಾಲಿಯ ಉಳಿದ ಹಂತಗಳಲ್ಲಿ ಭಾಗವಹಿಸುವುದಿಲ್ಲ. ಮೂರನೇ ಹಂತದ ಮುಕ್ತಾಯಕ್ಕೆ ಅಗ್ರಸ್ಥಾನ ಕಾಯ್ದುಕೊಂಡಿದ್ದ ಕೆಟಿಎಂ ತಂಡದ ಸಂದರ್‌ಲೆಂಡ್‌, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ರೈಡರ್‌ ಎನಿಸಿದ್ದರು.

ಫ್ರಾನ್ಸ್‌ನ ಆಡ್ರಿಯನ್‌ ವಾನ್‌ ಬೆವರೆನ್‌ ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರು. ಯಮಹಾ ತಂಡವನ್ನು ಪ್ರತಿನಿಧಿಸುತ್ತಿರುವ ಆಡ್ರಿಯನ್‌ 11 ಗಂಟೆ 3 ನಿಮಿಷ 23 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry