ಸಿದ್ಧರಾಮೇಶ್ವರ ಅನುಭವ ಮಂಟಪ ಉದ್ಘಾಟನೆ ನಾಳೆ

7

ಸಿದ್ಧರಾಮೇಶ್ವರ ಅನುಭವ ಮಂಟಪ ಉದ್ಘಾಟನೆ ನಾಳೆ

Published:
Updated:
ಸಿದ್ಧರಾಮೇಶ್ವರ ಅನುಭವ ಮಂಟಪ ಉದ್ಘಾಟನೆ ನಾಳೆ

ಮುಗಳಖೋಡ (ಬೆಳಗಾವಿ ಜಿಲ್ಲೆ): ಇಲ್ಲಿನ ಸುಕ್ಷೇತ್ರ ಜಿಡಗಾಮಠದ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಶುಕ್ರವಾರದಿಂದ (ಜ.12) ಮೂರು ದಿನಗಳವರೆಗೆ ನಡೆಯಲಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ, 360 ಶಿಲಾಕಂಬಗಳನ್ನು ಒಳಗೊಂಡ ವಿಶಾಲವಾದ ಸಿದ್ಧರಾಮೇಶ್ವರ ಅನುಭವ ಮಂಟಪವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಲಿದ್ದಾರೆ.

ಜಾತ್ರೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್‌, ಯೋಗ ಗುರು ಬಾಬಾ ರಾಮದೇವ್‌, ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಆಗಮಿಸಲಿದ್ದಾರೆ.

ಮಠದ ಹಿಂದಿನ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಂಟಪದ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. 12ನೇ ಶತಮಾನವನ್ನು 21ನೇ ಶತಮಾನದಲ್ಲಿ ಪ್ರತ್ಯಕ್ಷೀಕರಿಸುವಂತೆ, ಮಠದ ಮುಕ್ತಿಮಂದಿರದಲ್ಲಿ ಶಿಲಾ ಮಂಟಪ ಮೈದಳೆದಿದೆ. ಮಠದ 360 ಶಾಖೆಗಳನ್ನು ಪ್ರತಿಬಿಂಬಿಸುವುದಕ್ಕಾಗಿ 360 ಕಂಬಗಳಿವೆ.

ರಾಷ್ಟ್ರೀಯ ಯುವ ದಿನ: ಸ್ವಾಮಿ ವಿವೇಕಾನಂದರ 156ನೇ ಜಯಂತಿ ಅಂಗವಾಗಿ ಜ.12ರಂದು ರಾಷ್ಟ್ರೀಯ ಯುವ ದಿನ ಆಚರಿಸಲಾಗುತ್ತಿದೆ. ಈ ನಿಮಿತ್ತ ಯುವ ಬ್ರಿಗೇಡ್‌ ನೇತೃತ್ವದಲ್ಲಿ ‘ಸಹಸ್ರ ಸಹಸ್ರ ವಿವೇಕ ಆವಾಹನಾ’ ಶೀರ್ಷಿಕೆಯ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದು, ವಿವೇಕಾನಂದರ ಸಂದೇಶ ತಿಳಿಸುವ ಯೋಜನೆ ಇದೆ. 780 ಚರ್ಮವಾದ್ಯಗಳ ಏಕಕಾಲದಲ್ಲಿ ಬಾರಿಸುವ ಈ ಕಾರ್ಯಕ್ರಮದಲ್ಲಿ 10 ಸಾವಿರ ವಿದ್ಯಾರ್ಥಿಗಳು ವಿವೇಕಾನಂದರ ವೇಷಧಾರಿಗಳಾಗಿ ಭಾಗವಹಿಸಲಿದ್ದಾರೆ. ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀಶ್ರೀ ರವಿಶಂಕರ ಗುರೂಜಿ, ದೇಶದ ಮೊದಲ ಅಂಗವಿಕಲ ಪರ್ವತಾರೋಹಿ ಅರುಣಿಮಾ ಭಾಗವಹಿಸಲಿದ್ದಾರೆ.

12 ಸಾವಿರ ಮಂದಿ ನೋಂದಣಿ: ಏಕಕಾಲದಲ್ಲಿ 10 ಸಾವಿರ ವಿವೇಕಾನಂದ ವೇಷಧಾರಿಗಳನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಲ್ಲಿದ್ದರೆ, ಈ ಕಾರ್ಯಕ್ರಮದ ಮೂಲಕ ಹೊಸ ದಾಖಲೆ ಬರೆಯುವ ಆಶಯ ಸಂಘಟಕರದ್ದು.

‘ವಿವೇಕ ಆವಾಹನಾ’ ಕ್ಕೆ 12 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 10 ಸಾವಿರ ಮಂದಿಗಷ್ಟೇ ಅವಕಾಶ ಕೊಡಲಾಗುವುದು. 18ರಿಂದ 39 ವರ್ಷ ವಯಸ್ಸಿನವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಸಜ್ಜುಗೊಂಡಿರುವ ಮುಖ್ಯ ವೇದಿಕೆಯಲ್ಲಿ ಅದ್ಧೂರಿ ಸಮಾರಂಭಕ್ಕೆ ಸಿದ್ಧತೆ ನಡೆದಿದೆ ಎಂದು ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ ಅವರ ಆಪ್ತಕಾರ್ಯದರ್ಶಿ ಬಸವರಾಜ ಟಿ. ಚೋಪಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುವಕರಿಗೆ ಪಂಚೆ, ಶಲ್ಯ ಹಾಗೂ ಪೇಟ ನೀಡಲಾಗುವುದು. ಇದಕ್ಕಾಗಿ ಒಂದು ಲಕ್ಷ ಮೀಟರ್‌ ಬಟ್ಟೆ ಖರೀದಿಸಲಾಗಿದೆ. ಜಾತ್ರೆಗೆ 10 ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರು ಮೂಟೆಗಟ್ಟಲೆ ದವಸ–ಧಾನ್ಯಗಳನ್ನು, ಹಲವು ಬಗೆಯ ರೊಟ್ಟಿಗಳನ್ನು ಪೂರೈಸುತ್ತಿದ್ದಾರೆ. ದಾಸೋಹದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದ್ದು, 42 ವಿವಿಧ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅನುಭವ ಮಂಟಪದ ಕಾಮಗಾರಿ 12 ವರ್ಷಗಳವರೆಗೆ ನಡೆದಿದೆ. ಧ್ಯಾನಮಂದಿರವನ್ನು ಒಳಗೊಂಡಿದೆ. ಸಿದ್ಧರಾಮೇಶ್ವರರ ಮೂರ್ತಿಯನ್ನು ಅಲ್ಲಿ ಅನಾವರಣಗೊಳಿಸಲಾಗುವುದು. ಶ್ರೀಮಠದ ಪರಂಪರೆಯನ್ನು ಅಲ್ಲಿ ಬಿಂಬಿಸಲಾಗುವುದು. ಅನುಭವ ಮಂಟಪದ ಮಾದರಿಯಲ್ಲಿ ಚಿಂತನಾಗೋಷ್ಠಿ ನಡೆಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

770 ಶರಣರ ಪಾದಪೂಜೆ: 11ರಂದು ಬೆಳಿಗ್ಗೆ 7ಕ್ಕೆ ಕೋಳಿಗುಡ್ಡದ ಮಠದಿಂದ ಮುಗಳಖೋಡದ ಮುಕ್ತಿಮಂದಿರದವರೆಗೆ ಬೆಳ್ಳಿ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ನಡೆಯಲಿದ್ದು, ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. 770 ಅಮರ ಶರಣ ಗಣಾಧೀಶರ ಪಾದಪೂಜೆ 13ರಂದು ನಡೆಯಲಿದೆ. ಜ.14ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದೆ.

ನಾಲ್ಕು ಹೆಲಿಪ್ಯಾಡ್, 30 ಎಲ್‌ಸಿಡಿ ಪರದೆ

ಮುಖ್ಯವೇದಿಕೆ ಸಮೀಪ ಹಾಗೂ ಬಿಎನ್‌ಕೆ ಶಾಲೆಯ ಬಳಿ ತಲಾ ಎರಡು ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮವನ್ನು, ವೇದಿಕೆಯ ಹೊರಗಿನವರು ವೀಕ್ಷಿಸಲು 30 ಎಲ್‌ಸಿಡಿ ಪರದೆಗಳನ್ನು ಅಳವಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry