ಎನ್‌ಜಿಟಿ ಆದೇಶಕ್ಕೆ ‘ಸುಪ್ರೀಂ’ ತಡೆ

7
ಒಂದು ಮರಕ್ಕೆ ಬದಲು 10 ಮರ...

ಎನ್‌ಜಿಟಿ ಆದೇಶಕ್ಕೆ ‘ಸುಪ್ರೀಂ’ ತಡೆ

Published:
Updated:

ನವದೆಹಲಿ: ‘ಅರಣ್ಯ ಭೂಮಿ ಹಾಗೂ ಖಾಸಗಿ ಒಡೆತನದ ಜಮೀನಿನಲ್ಲಿನ ಒಂದು ಮರವನ್ನು ಕಡಿದಲ್ಲಿ ಅದಕ್ಕೆ ಬದಲಾಗಿ 10 ಮರ ಬೆಳೆಸಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿದೆ.

ಕಳೆದ ಮಾರ್ಚ್ 14ರಂದು ಎನ್‌ಜಿಟಿ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್‌ ಭೂಷಣ್‌ ಅವರ ಪೀಠ, ಈ ಸಂಬಂಧ ಮಡಿಕೇರಿಯ ಕಾವೇರಿ ಸೇನೆಗೆ ನೋಟಿಸ್‌ ಜಾರಿ ಮಾಡಿತು.

‘ಎನ್‌ಜಿಟಿ ಆದೇಶ ಹೊರಬಿದ್ದ 178 ದಿನಗಳ ನಂತರ ಮೇಲ್ಮನವಿ ಸಲ್ಲಿಸಲಾಗಿದೆಯಲ್ಲ’ ಎಂದು ಪ್ರಶ್ನಿಸಿದ ಪೀಠವು, ನಂತರ ವಿಚಾರಣೆಗೆ ಒಪ್ಪಿಗೆ ಸೂಚಿಸಿತು.

ಈ ಆದೇಶದ ಪರಿಶೀಲನೆಗೆ ಕೋರಿ ಎನ್‌ಜಿಟಿಗೆ ಮನವಿ ಸಲ್ಲಿಸಲಾಗಿತ್ತು. ಆ ಮನವಿಯನ್ನು ವಜಾಗೊಳಿಸಿದ ನಂತರ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದ ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ, ಎನ್‌ಜಿಟಿಯ ಆದೇಶವು ಕಾನೂನಿಗೆ ವಿರುದ್ಧವಾದುದಾಗಿದೆ. ಅಲ್ಲದೆ, ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈ ಆದೇಶವನ್ನು ಪಾಲಿಸುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯ ಎಂದು ಹೇಳಿದರು.

ಅರಣ್ಯ ಭೂಮಿ ಅಥವಾ ಖಾಸಗಿ ಜಮೀನಿನಲ್ಲಿನ ಮರಗಳನ್ನು ಕತ್ತರಿಸುವುದು ನಿಷಿದ್ಧ. ಒಂದೊಮ್ಮೆ ಮರಗಳನ್ನು ಕತ್ತರಿಸಿದಲ್ಲಿ ಒಂದು ಮರಕ್ಕೆ ಬದಲಾಗಿ 10 ಮರಗಳನ್ನು ಬೆಳೆಸುವುದು ಕಡ್ಡಾಯ. ಸಸಿ ನೆಡುವುದಕ್ಕೆ ಅರಣ್ಯ ಇಲಾಖೆಗೆ ಸಮರ್ಪಕ ಶುಲ್ಕವನ್ನೂ ಭರಿಸಬೇಕಾಗುತ್ತದೆ. ಅಲ್ಲದೆ, ಕನಿಷ್ಠ 5 ವರ್ಷಗಳ ಕಾಲ ಆ ಸಸಿಗಳ ಪಾಲನೆ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ಹಸಿರುಪೀಠ ಆದೇಶ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry