ಆಧಾರ್‌ಗೆ ಪರ್ಯಾಯ ಸಂಖ್ಯೆ

7
ಬಳಕೆದಾರರ ವೈಯಕ್ತಿಕ ವಿವರಗಳ ರಕ್ಷಣೆಗೆ ಯುಐಎಡಿಐ ವಿನೂತನ ಕಲ್ಪನೆ

ಆಧಾರ್‌ಗೆ ಪರ್ಯಾಯ ಸಂಖ್ಯೆ

Published:
Updated:
ಆಧಾರ್‌ಗೆ ಪರ್ಯಾಯ ಸಂಖ್ಯೆ

ನವದೆಹಲಿ (ಪಿಟಿಐ): ಆಧಾರ್‌ ನೋಂದಣಿ ಸಂದರ್ಭದಲ್ಲಿ ಸಂಗ್ರಹಿಸಲಾಗಿರುವ ನೋಂದಣಿದಾರರ ವೈಯಕ್ತಿಕ ವಿವರಗಳ ಸುರ

ಕ್ಷತೆಗಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ‘ಪರ್ಯಾಯ ಗುರುತು ಸಂಖ್ಯೆ’ಯ (ವರ್ಚ್ಯುವಲ್‌ ಐಡಿ) ವಿನೂತನ

ಪರಿಕಲ್ಪನೆಯನ್ನು ರೂಪಿಸಿದೆ.

ಆಧಾರ್‌ ಸಂಖ್ಯೆ ಹೊಂದಿರುವವರು ಯುಐಡಿಎಐ ವೆಬ್‌ಸೈಟ್‌ 'https://uidai.gov.in/' ನಿಂದ 16 ಸಂಖ್ಯೆಗಳ ಪರ್ಯಾಯ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬಹುದು.

ಬಯೊಮೆಟ್ರಿಕ್‌ ವಿವರಗಳನ್ನು ಒಳಗೊಂಡಿರುವ ಈ ಗುರುತಿನ ಸಂಖ್ಯೆಯನ್ನು ಮೊಬೈಲ್‌ಗೆ ಆಧಾರ್‌ ಜೋಡಣೆಗೆ ಬಳಸಬಹುದು. ಹಾಗೆಯೇ, ಆಧಾರ್‌ ಜೋಡಣೆ ಮಾಡಬೇಕಿರುವ ವಿವಿಧ ಸೇವೆಗಳಿಗೂ ಇದನ್ನು ನೀಡಬಹುದು. ಅಲ್ಲದೆ, ಗುರುತು, ಭಾವಚಿತ್ರ, ವಿಳಾಸ ದೃಢೀಕರಣಕ್ಕೂ ಇದನ್ನು ಬಳಸಬಹುದು.

ಈ ಹೊಸ ವ್ಯವಸ್ಥೆಯಿಂದಾಗಿ ವಿವಿಧ ಸೇವೆಗಳಿಗೆ ಜನರು ತಮ್ಮ ಆಧಾರ್‌ ಸಂಖ್ಯೆಯನ್ನು ನೀಡಬೇಕಾಗಿಲ್ಲ.

‘ಆಧಾರ್‌ ನೋಂದಣಿ ಮಾಡಿಕೊಂಡಿರುವವರು ಎಷ್ಟು ಬೇಕಾದರೂ ಪರ್ಯಾಯ ಗುರುತಿನ ಸಂಖ್ಯೆಯನ್ನು ಸೃಷ್ಟಿಸಬಹುದು. ಹೊಸ ಸಂಖ್ಯೆಯನ್ನು ಸೃಷ್ಟಿಸಿದ ಕೂಡಲೇ ಹಳೆಯ ಸಂಖ್ಯೆ ತನ್ನಿಂತಾನೇ ರದ್ದಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೀಮಿತ ವೈಯಕ್ತಿಕ ವಿವರ: ಪರ್ಯಾಯ ಗುರುತಿನ ಸಂಖ್ಯೆಯ ಜೊತೆಗೆ ‘ಸೀಮಿತ– ವೈಯಕ್ತಿಕ ವಿವರ’ (ಲಿಮಿಟೆಡ್‌ ಕೆವೈಸಿ) ಎಂಬ ಮತ್ತೊಂದು ಪರಿಕಲ್ಪನೆಯನ್ನೂ ಯುಐಡಿಎಐ ರೂಪಿಸಿದೆ. ಈ ವ್ಯವಸ್ಥೆಯಲ್ಲಿ ನಿರ್ದಿಷ್ಟ ಸೇವೆ ಒದಗಿಸುವ ಸಂಸ್ಥೆಗಳಿಗೆ ಅಗತ್ಯಕ್ಕೆ ಬೇಕಾದಷ್ಟೇ ವಿವರಗಳನ್ನು ಪ್ರಾಧಿಕಾರ ನೀಡಲಿದೆ.

ಜಾರಿ ಯಾವಾಗ?

ಪರ್ಯಾಯ ಗುರುತಿನ ಸಂಖ್ಯೆ ವ್ಯವಸ್ಥೆ  2018ರ ಮಾರ್ಚ್‌ 1ರಿಂದ ಜಾರಿಗೆ ಬರಲಿದೆ. ವಿವಿಧ ಸೇವೆಗಳನ್ನು ನೀಡುವ ಎಲ್ಲ ಸಂಸ್ಥೆಗಳು ಜೂನ್‌ 1ರಿಂದ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯ.

ಬಳಕೆದಾರರ ಗುರುತು ದೃಢೀಕರಣ ಮಾಡುವ ಸಂಸ್ಥೆಗಳಿಗೆ ಪರ್ಯಾಯ ಗುರುತಿನ ಸಂಖ್ಯೆಯನ್ನು ಸೃಷ್ಟಿಸುವ ಅವಕಾಶ ಇಲ್ಲ ಎಂದು ಯುಐಎಡಿಐ ಹೇಳಿದೆ.

ವೈಯಕ್ತಿಕ ವಿವರ ರಕ್ಷಿಸುವ ಉದ್ದೇಶ

ಯುಐಎಡಿಐ ಸಂಗ್ರಹಿಸಿರುವ ಮಾಹಿತಿಗಳ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ಎರಡು ಹೊಸ ವ್ಯವಸ್ಥೆಗಳನ್ನು ರೂಪಿಸಲಾಗಿದೆ.

ಪ್ರಾಧಿಕಾರದ ಬಳಿ ಇರುವ ಜನರ ವೈಯಕ್ತಿಕ ವಿವರಗಳು ಸುರಕ್ಷಿತವಲ್ಲ; ಅವುಗಳಿಗೆ ಸುಲಭವಾಗಿ ಕನ್ನ ಹಾಕಬಹುದು ಎಂಬ ಆತಂಕ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಯುಐಎಡಿಐ ಈ ಕ್ರಮಕ್ಕೆ ಮುಂದಾಗಿದೆ.

ಪರ್ಯಾಯ ಗುರುತಿನ ಚೀಟಿ: ಏನು, ಎತ್ತ?

* ಬಳಕೆದಾರರು ಯುಐಡಿಎಐ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಿ ಪರ್ಯಾಯ ಗುರುತಿನ ಸಂಖ್ಯೆ ಸೃಷ್ಟಿಸಿಕೊಳ್ಳಬೇಕು

* ಸಂಖ್ಯೆಯು ಬಳಕೆದಾರರ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಆಗಿರುತ್ತದೆ

* 16 ಅಂಕಿಯ ಈ ಸಂಖ್ಯೆಯು ತಾತ್ಕಾಲಿಕವಾದುದು

* ಅದರ ಕಾರ್ಯನಿರ್ವಹಣೆಯ ಅವಧಿಯನ್ನು ಬಳಕೆದಾರರು ನಿಗದಿ ಪಡಿಸಬಹುದು (ನಿರ್ದಿಷ್ಟ ಅವಧಿಗೆ ಅಥವಾ ಅವರು ಬಯಸಿದಷ್ಟು ಸಮಯದವರೆಗೆ‌)

* ವೈಯಕ್ತಿಕ ವಿವರಗಳ ದೃಢೀಕರಣದ ಸಂದರ್ಭಗಳಲ್ಲಿ ಆಧಾರ್‌ಗೆ ಪರ್ಯಾಯವಾಗಿ ಇದನ್ನು ಬಳಸಬಹುದು

* ಗುರುತಿನ ವಿವರ ನೀಡುವಾಗ ಬೆರಳಚ್ಚಿನೊಂದಿಗೆ ಪರ್ಯಾಯ ಗುರುತಿನ ಸಂಖ್ಯೆಯನ್ನು ನೀಡಿದರೆ ಸಾಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry