ಎ.ಐ ಒಡೆತನ ವಿದೇಶಿಯರಿಗೆ ಸಿಗದು

7

ಎ.ಐ ಒಡೆತನ ವಿದೇಶಿಯರಿಗೆ ಸಿಗದು

Published:
Updated:

ನವದೆಹಲಿ: ಭಾರಿ ಸಾಲದಿಂದ ನಲುಗಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾದಲ್ಲಿ ಶೇ 49ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವುದರೊಂದಿಗೆ ಸಂಸ್ಥೆಯ ಷೇರು ಮಾರಾಟ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ವಿದೇಶಿ ವಿಮಾನಯಾನ ಸಂಸ್ಥೆಗಳು ಏರ್‌ ಇಂಡಿಯಾದ ಪಾಲುದಾರಿಕೆ ಹೊಂದಲು ಸರ್ಕಾರದ ನಿರ್ಧಾರ ಅವಕಾಶ ಕೊಟ್ಟಿದೆ. ಆದರೆ, ಇಂತಹ ವಿಮಾನಯಾನ ಸಂಸ್ಥೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಹೊಂದಿರುವ ಭಾರತೀಯ ಪಾಲುದಾರರು ಇರಬೇಕು. ಅದಲ್ಲದೆ, ಕಂಪನಿಯ ಅಧ್ಯಕ್ಷ ಭಾರತೀಯನಾಗಿರಬೇಕು ಮತ್ತು ಕೇಂದ್ರ ಕಚೇರಿಯನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತಿಲ್ಲ ಎಂಬ ಷರತ್ತು ಹಾಕಲಾಗಿದೆ.

ವಿದೇಶಿ ವಿಮಾನಯಾನ ಸಂಸ್ಥೆಯ ನೇರ ಮತ್ತು ಪರೋಕ್ಷ ಹೂಡಿಕೆ ಶೇ 49ರಷ್ಟನ್ನು ಮೀರುವಂತಿಲ್ಲ. ಹಾಗಾಗಿ ಏರ್‌ ಇಂಡಿಯಾದ ಒಡೆತನ ಮತ್ತು ನಿಯಂತ್ರಣ ಭಾರತೀಯರ ಕೈಯಲ್ಲಿಯೇ ಉಳಿಯುತ್ತದೆ ಎಂದು ಸರ್ಕಾರ ಹೇಳಿದೆ.

ದೇಶದ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಶೇ 49ರಷ್ಟು ವಿದೇಶಿ ನೇರ ಹೂಡಿಕೆಗೆ ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಆದರೆ ಏರ್‌ ಇಂಡಿಯಾವನ್ನು ಇದರಿಂದ ಹೊರಗೆ ಇರಿಸಲಾಗಿತ್ತು. ಈಗ ಈ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.

ಇಂಡಿಗೊ, ಟಾಟಾಗೆ ಆಸಕ್ತಿ

ಏರ್‌ ಇಂಡಿಯಾದ ಪಾಲು ಖರೀದಿಸಲು ವಿಮಾನಯಾನ ಸಂಸ್ಥೆ ಇಂಡಿಗೊ ಮತ್ತು ಟಾಟಾ ಸಮೂಹ ಆಸಕ್ತಿ ವ್ಯಕ್ತಪಡಿಸಿದ್ದವು. ಆದರೆ ಷೇರು ಮಾರಾಟದ ನಿಯಮ ಮತ್ತು ಪ್ರಕ್ರಿಯೆಗಳನ್ನು ಸರ್ಕಾರ ಅಂತಿಮಗೊಳಿಸದ ಕಾರಣ ಇದು ಮುಂದಕ್ಕೆ ಸಾಗಲಿಲ್ಲ.

ಏಕ ಬ್ರ್ಯಾಂಡ್‌ ಚಿಲ್ಲರೆ ಮಾರಾಟದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಮ್ಮತಿ ನೀಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ‘ಇಬ್ಬಗೆಯ ನೀತಿ’ ಬಯಲಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

‘ಚಿಲ್ಲರೆ ಮಾರಾಟದಲ್ಲಿ ಎಫ್‌ಡಿಐಗೆ ಸಮ್ಮತಿ ನೀಡಲು ಯುಪಿಎ ಸರ್ಕಾರ ಮುಂದಾದಾಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಹುಯಿಲೆಬ್ಬಿಸಿದ್ದರು. ಈಗ ಅವರೇ ಸಮ್ಮತಿ ಸೂಚಿಸಿದ್ದಾರೆ. ಇದು ಅವರ ದ್ವಂದ್ವ ನೀತಿಯನ್ನು ಬಯಲು ಮಾಡಿದೆ’ ಎಂದು ವಾಗ್ದಾಳಿ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry